Advertisement

ಪಥ್ಯ ಎಂದರೆ ಆಹಾರ ನಿರಾಕರಣೆಯಲ್ಲ

01:24 AM May 24, 2021 | Team Udayavani |

ಆರೋಗ್ಯವಾಗಿರಬೇಕಾದರೆ ಯಾವ ರೀತಿಯ ಆಹಾರ ಸೇವಿಸಬೇಕು? ಎಂಬುದು ಎಲ್ಲರ ಪ್ರಶ್ನೆ. ಆದರೆ ಇದನ್ನು ತಿಳಿದುಕೊಳ್ಳುವ ಮೊದಲು ಆಹಾರ ಎಂದರೇನು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಬಾಯಿಯ ಮೂಲಕ ಹೊಟ್ಟೆಗೆ ಕಳುಹಿಸಿ ಜಠರಾಗ್ನಿಯ ಮೂಲಕ ಜೀರ್ಣಿಸಿಕೊಂಡು ದೇಹದ ಆರೈಕೆಗೆ ಬೇಕಾದ ಪೋಷಕಾಂಶಗಳನ್ನು ಒದಗಿಸುವ ಎಲ್ಲ ಬಗೆಯ ಪದಾರ್ಥಗಳೂ ಆಹಾರವೇ.
“ಊಟ ಬಲ್ಲವನಿಗೆ ರೋಗ ವಿಲ್ಲ’ಎನ್ನುತ್ತಾರೆ ಹಿರಿಯರು. ಇಲ್ಲಿ ಊಟ ಬಲ್ಲವ ನೆಂದರೆ ಕೇವಲ ಆಹಾರ ಸೇವನೆ ಮಾತ್ರವಲ್ಲ. ಯಾವ ರೀತಿಯ ಆಹಾರ, ಎಲ್ಲಿ, ಹೇಗೆ, ಎಷ್ಟು ಸೇವಿಸಬೇಕು ಎಂಬುದೂ ಮುಖ್ಯ.

Advertisement

ಪಥ್ಯ ಆಹಾರ ಎಂದರೇನು?
ಆಯುರ್ವೇದದಲ್ಲಿ “ಪಥ ಹಿತಂ ಪಥ್ಯಂ’ ಎನ್ನಲಾ ಗುತ್ತದೆ. ಪಥ ಎಂದರೆ ದಾರಿ. ಜೀವನದ ದಾರಿಗೆ ಯಾವುದು ಹಿತವಾಗಿರುತ್ತದೋ ಅದುವೇ ಪಥ್ಯ. ಪಥ್ಯ ಎನ್ನುವಾಗ ಇಲ್ಲಿ ಆಹಾರ ಮಾತ್ರವಲ್ಲ ನಮ್ಮ ಆಚಾರ-ವಿಚಾರವೂ ಸಹ. ಇದು ದೇಶ, ಕಾಲ, ವ್ಯಕ್ತಿಗೆ ಅನುಸಾರವಾಗಿ ವಿಭಿನ್ನವಾಗಿರಬಹುದು.

ಸುಲಭವಾಗಿ ಹೇಳುವುದಾದರೆ ನಮ್ಮ ದೇಹ, ಸ್ಥಳ, ಸಮಯಕ್ಕೆ ಅನುಗುಣವಾಗಿ ಯಾವುದನ್ನು ಆಹಾರವಾಗಿ ಸ್ವೀಕರಿಸಬೇಕು, ಯಾವುದನ್ನು ಸ್ವೀಕರಿಸಬಾರದು ಎನ್ನುವುದನ್ನೇ ಪಥ್ಯ ಎನ್ನುತ್ತೇವೆ. ಆಹಾರವೆನ್ನುವಂಥದ್ದು ಯಾವಾಗಲೂ ದೇಹ ಮತ್ತು ನಮ್ಮ ಆರೋಗ್ಯ ಸ್ಥಿತಿಯ ಮೇಲೆ ಹೊಂದಿ ಕೊಂಡಿರುವಂಥದ್ದು. ಕೇವಲ ಕಾಯಿಲೆ ಇದ್ದರೆ ಮಾತ್ರ ಪಥ್ಯ ಮಾಡುವುದಲ್ಲ. ಉತ್ತಮ ಆರೋಗ್ಯಕ್ಕೆ ಪಥ್ಯ ಪಾಲನೆ ಅವಶ್ಯ. ನಮ್ಮ ಜೀವನ ಶೈಲಿಗೆ ಅನುಸಾರವಾಗಿ ಆಹಾರದಲ್ಲಿ ಪಥ್ಯ ಕ್ರಮವನ್ನು ಅನುಸರಿಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚಲೂ ಅನುಕೂಲವಾದೀತು.

ಎಲ್ಲದರ ನಿರಾಕರಣೆಯಲ್ಲ
ಪಥ್ಯೆ ಎಂದರೆ ಎಲ್ಲವನ್ನೂ ನಿರಾಕರಿಸುವುದು ಅಲ್ಲ. ದೇಹಕ್ಕೆ ಯಾವುದು ಹಿತವಾಗಿರುತ್ತದೋ ಅದನ್ನು ಮಿತವಾಗಿ ಅಂದರೆ ನಿಯಮಿತ ಪ್ರಮಾಣದಲ್ಲಿ ಸೇವಿಸುವುದು. ಪ್ರಮಾಣ ಜಾಸ್ತಿ ಆದರೆ ಅಥವಾ ಸಂಪೂರ್ಣವಾಗಿ ಒಂದು ಪದಾರ್ಥವನ್ನು ನಿರಾಕರಿಸಿ ದರೆ ಅದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೋದಾಗ ನಮ್ಮ ದೇಹಕ್ಕೆ ಸೂಕ್ತವಾದ ಆಹಾರವನ್ನೇ ಸ್ವೀಕರಿಸಬೇಕು. ಇಲ್ಲವಾದರೆ ಅನಾ ರೋಗ್ಯ ಉಂಟಾದೀತು. ಇದೂ ಆಹಾರ ಪದ್ಧತಿ ಬದಲಾವಣೆಗೂ ಅನ್ವಯ. ಏಕಾಏಕಿ ಆಹಾರ ಪದ್ಧತಿ ಬದಲಾಯಿಸುವುದೂ ಸಮಸ್ಯೆಯನ್ನು ತಂದೊಡ್ಡ ಬಲ್ಲದು. ಯಾವತ್ತೂ ಪಚನ ಕ್ರಿಯೆ ಕಷ್ಟವಿದ್ದಾಗ ಮೃದು ಆಹಾರಗಳಿಗೆ ಆದ್ಯತೆ ಕೊಡಬೇಕು. ಬದ ಲಾಗಿ ಘನ ಆಹಾರ ಸ್ವೀಕರಿಸಿದರೆ ದೇಹಾರೋಗ್ಯಕ್ಕೆ ಅಪಥ್ಯವಾಗುತ್ತದೆ.

ಆರೋಗ್ಯವೃದ್ಧಿಗೆ ಆಹಾರ
ನಾವು ಸೇವಿಸುವ ಆಹಾರವು ಆರೋಗ್ಯವನ್ನು ವೃದ್ಧಿಸಬೇಕಾದರೆ ಮೂರು ಹಂತಗಳಿವೆ.
1. ಸರಿಯಾದ ಆಹಾರವನ್ನು ಸರಿಯಾದ ಕ್ರಮದಲ್ಲಿ ಸೇವಿಸುವುದು.
2. ವಾತ, ಪಿತ್ತ, ಕಫ‌ ಮತ್ತು ಅಗ್ನಿಯೊಡನೆ ಸರಿಯಾಗಿ ಒಳಪಟ್ಟ ಆಹಾರವನ್ನು ಸ್ವೀಕರಿಸಬೇಕು.
3. ದೇಹದ ಪೋಷಣೆಗೆ ಪೂರಕ ವಾಗಿರಬೇಕು. ಈ ಮೂರರಲ್ಲಿ ಕೊಂಚ ವ್ಯತ್ಯಾಸ ವಾದರೂ ಆರೋಗ್ಯದಲ್ಲಿ ಏರುಪೇರು ಸಹಜ.
ಆಧುನಿಕ ಜೀವನ ಶೈಲಿಯನ್ನು ಅಳವಡಿಸಿಕೊಂಡಿ ರುವ ನಾವು ಪ್ರತಿನಿತ್ಯ ಪಿಜ್ಜಾ, ಬರ್ಗರ್‌ಗೆ ಮೊರೆ ಹೋಗುತ್ತಿದ್ದೇವೆ. ಇದು ನಮ್ಮ ಆಹಾರ ಪದ್ಧತಿ ಅಲ್ಲ. ಜತೆಗೆ ಇದನ್ನು ಅತಿಯಾಗಿ ಸೇವಿಸುತ್ತಿರುವುದರಿಂದ ಸಣ್ಣ ಪ್ರಾಯದಲ್ಲೇ ಮಧುಮೇಹ, ಅತಿಯಾದ ಬೊಜ್ಜಿನ ಸಮಸ್ಯೆ, ಹೈಪರ್‌ಟೆನ್ಶನ್‌ ಸಮಸ್ಯೆ ಬರುತ್ತದೆ. ಅದ್ದರಿಂದ ಜೀವನ ಶೈಲಿಯಲ್ಲಿ ಬದಲಾವಣೆಗಳಾಗಿದ್ದರೂ ನಮ್ಮ ಹಿರಿಯರು ಅನುಸರಿಸುತ್ತಿದ್ದ ಆಹಾರ ಪದ್ಧತಿಯನ್ನು ಪಾಲಿಸಿದರೆ ಆರೋಗ್ಯವಾಗಿರಲು ಸಾಧ್ಯ.

Advertisement

ಎಂಟು ಆಹಾರ ಸೂತ್ರ
ಆಯುರ್ವೇದದಲ್ಲಿ ಅಷ್ಟವಿಧದ ಆಹಾರ ಸೂತ್ರಗಳಿವೆ. ಯಾವುವೆಂದರೆ..
1 ಸ್ವಭಾವ: ಆಹಾರದ ಮೂಲ ದ್ರವ್ಯ ಯಾವುದು? ದೇಹದ ಮೇಲೆ ಅದರ ಪರಿಣಾಮ ಏನು?, ನನ್ನ ಆರೋಗ್ಯಕ್ಕೆ ಇದರ ಸೇವನೆ ಸೂಕ್ತವೋ ಅಲ್ಲವೋ ಎಂಬುದನ್ನು ತಿಳಿದಿರಬೇಕು.
2 ಸಂಯೋಗ: ಎರಡು ಅಥವಾ ಅದಕ್ಕಿಂತ ಹೆಚ್ಚು ಪದಾರ್ಥಗಳು ಜತೆ ಸೇರಿಸಿದಾಗ ಅದು ಆರೋಗ್ಯಕ್ಕೆ ಲಾಭವನ್ನುಂಟು ಮಾಡಬೇಕು.
3 ಸಂಸ್ಕಾರ: ಆಹಾರ ತಯಾರಿಕೆಯ ವಿಧಾನ. ಇಲ್ಲಿ ಅಕ್ಕಿ, ಧಾನ್ಯ, ತರಕಾರಿಗಳನ್ನು ಯಾವ ರೀತಿ ಸ್ವತ್ಛತೆ ಮಾಡಿ, ಬೇಯಿಸಲಾಗುತ್ತದೆ ಎನ್ನುವುದು ಮುಖ್ಯವಾಗುತ್ತದೆ.
4 ರಾಶಿ: ಆಹಾರದಲ್ಲಿರುವ ಪೋಷಕಾಂಶ ಗಳು. ಇದರಲ್ಲಿ ಯಾವುದು, ಎಷ್ಟು ಎಂಬುದು ಮುಖ್ಯವಾಗಿರುತ್ತದೆ. ನಮ್ಮ ಆಹಾರದಲ್ಲಿ ಮಧುರ ಗುಣಕ್ಕೆ ಹೆಚ್ಚಿನ ಪ್ರಾಧಾನ್ಯ. ಕಟು ಅಂದರೆ ಖಾರವನ್ನು ಕಡಿಮೆ ಪ್ರಮಾಣದಲ್ಲಿ ಬಳಸಬೇಕು. ಜೀರ್ಣಿಸಲು ಸುಲಭವಾಗುವ ಆಹಾರವನ್ನು ತೃಪ್ತಿಯಾಗುವಷ್ಟು, ಕಷ್ಟಕರವಾಗುವ ಆಹಾರವನ್ನು ಅರ್ಧದಷ್ಟು ಸೇವಿಸಬೇಕು.
5 ದೇಶ: ವಾಸಿಸುವ ಪ್ರದೇಶ, ಆಹಾರ ಬೆಳೆಯುವ, ರಕ್ಷಿಸುವ ಸ್ಥಳ, ಬೇಯಿಸುವ ಪಾತ್ರೆ, ತಿನ್ನುವ ಸ್ಥಳ ಇವೆಲ್ಲವೂ ನಮ್ಮ ಆಹಾರದ ಮೇಲೆ ಪರಿಣಾಮ ಬೀರುತ್ತದೆ.
6 ಕಾಲ: ಇದು ದೇಹ ಮತ್ತು ವಾತಾವರಣಕ್ಕೆ ಅನುಗುಣವಾದ ಕಾಲವನ್ನು ಸೂಚಿಸುತ್ತದೆ. ಬಾಲ್ಯ, ಯೌವನ, ವೃದ್ಧಾಪ್ಯ, ಹಗಲು, ರಾತ್ರಿ, ವಿವಿಧ ಋತುಗಳು ಇತ್ಯಾದಿ.
7 ಉಪಯೋಕ್ತ: ಯಾರು, ಯಾವ ವಯಸ್ಸಿ ನವನು, ಯಾವ ಪ್ರದೇಶದವನು, ಯಾವ ವೃತ್ತಿ ಯವನು ಎಂಬುದೂ ಆಹಾರ ಸೇವನೆ ಯಲ್ಲಿ ಗಮನಿಸಬೇಕಾದ ಮುಖ್ಯ ಅಂಶಗಳು.
8 ಉಪಯೋಗಸಂಸ್ಥಾ: ಆಹಾರ ಸೇವನೆಯ ವೇಳೆ ಪಾಲಿಸಬೇಕಾದ ನಿಯಮ. ಅಂದರೆ ಶುದ್ಧವಾಗಿ, ಬಿಸಿಯಾಗಿ, ಮನಸ್ಸಿಗೆ ತೃಪ್ತಿಯಾಗುವಂತೆ ಸಮಾಧಾನದಿಂದ ಶುಚಿಯಾದ ಸ್ಥಳದಲ್ಲಿ ಕುಳಿತು ಉಣ್ಣಬೇಕು. ಅತೀ ವೇಗವಾಗಿ ಅಥವಾ ನಿಧಾನವಾಗಿ ತಿನ್ನುವುದು ಸರಿಯಲ್ಲ.

– ಡಾ| ಗೋಪಾಲಕೃಷ್ಣ , ವೈದ್ಯರು ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next