ಕೊಪ್ಪಳ: ಯಲಬುರ್ಗಾ ತಾಲೂಕಿನ ಲಿಂಗನಬಂಡಿ ಬಳಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಕುರಿತು ದೂರು ಬಂದ
ಹಿನ್ನೆಲೆಯಲ್ಲಿ ಶನಿವಾರ ಅಧಿಕಾರಿಗಳು ಪರಿಶೀಲನೆಗೆ ತೆರಳಿದ್ದ ವೇಳೆ ಡೀಸೆಲ್ ಬ್ಯಾರೆಲ್ ಸ್ಫೋಟಗೊಂಡಿದೆ.
ಘಟನೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಇಬ್ಬರು ಅಧಿಕಾರಿಗಳು,ಚಾಲಕನಿಗೆ ಗಂಭೀರ ಗಾಯಗಳಾಗಿವೆ.
ಗಾಯಾಳುಗಳನ್ನು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಗೆ ಸಾಗಿಸಲಾಗಿದೆ.
ಇಲಾಖೆಯ ಅಧಿಕಾರಿಗಳಾದ ದಿನೇಶಗೌಡ, ನವೀನ ಕುಮಾರ ಸೇರಿ ವಾಹನ ಚಾಲಕ ಮೆಹಬೂಬ್ ಅವರಿಗೆ ಮುಖ, ಕೈ, ಕಾಲಿಗೆ ಗಂಭೀರ ಗಾಯಗಳಾಗಿವೆ. ಯಲಬುರ್ಗಾ ತಾಲೂಕಿನ ಲಿಂಗನಬಂಡಿ ಬಳಿ ಹಲವು ವರ್ಷಗಳಿಂದ ಮಿತಿ ಮೀರಿದ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಈ ಭಾಗದ ನೂರಾರು ರೈತರು ಗಣಿಗಾರಿಕೆಗೆ ಬೇಸತ್ತು ಇಲಾಖೆಗೆ ದೂರು ನೀಡಿದ್ದರು. ಈ ದೂರಿನನ್ವಯ ಸ್ಥಳಕ್ಕೆ ಭೇಟಿ ನೀಡಿದ್ದ ಅಧಿಕಾರಿಗಳು ವಿವಿಧೆಡೆ ಅಕ್ರಮ ಕಲ್ಲು ಗಣಿಗಾರಿಕೆಯ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಬಿಸಿಲಿನ ತಾಪಕ್ಕೆ ಡೀಸೆಲ್ ಬ್ಯಾರೆಲ್ ಸ್ಫೋಟಗೊಂಡಿದೆ ಎನ್ನಲಾಗಿದೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಾದ ದಿನೇಶಗೌಡ, ನವೀನ ಕುಮಾರ ಅವರ ಕೈ, ಕಾಲು, ಮುಖದ ಚರ್ಮ ಸುಟ್ಟು ಹೋಗಿದೆ. ವಾಹನ ಚಾಲಕ ಮೆಹಬೂಬ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಿರಿಯ ವಿಜ್ಞಾನಿ ಆರ್.ಎಸ್. ರಾವಳ್ ತಿಳಿಸಿದರು. ಅಧಿಕಾರಿಗಳು ಕಲ್ಲು ಕ್ವಾರಿಯತ್ತ ಪರಿಶೀಲನೆಗೆ ಬಂದಿದ್ದಾರೆ ಎನ್ನುವುದನ್ನು ಅರಿತ ದಂಧೆಕೋರರು ಸ್ಥಳದಲ್ಲಿ ಕಲ್ಲು ಒಡೆಯುವ ಮದ್ದು ಬಳಿಸಿ ಸ್ಫೋಟಗೊಳಿಸಿದ್ದಾರೆಂಬ ಶಂಕೆ ವ್ಯಕ್ತವಾಗಿದೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಲಿಂಗನಬಂಡಿ ಬಳಿ ಕಲ್ಲು ಗಣಿಗಾರಿಕೆ ಪರಿಶೀಲನೆಗೆ ತೆರಳಿದ್ದ ವೇಳೆ ಡೀಸೆಲ್
ಬ್ಯಾರಲ್ ಸ್ಫೋಟವಾಗಿರುವ ಬಗ್ಗೆ ಮಾಹಿತಿಯಿದೆ. ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರೆ ನಮ್ಮವರು ಅವರೊಟ್ಟಿಗೆ ತೆರಳುತ್ತಿದ್ದರು.
– ರೇಣುಕಾ ಸುಕುಮಾರ,
ಕೊಪ್ಪಳ ಎಸ್‌ಪಿ