ವಿಜಯಪುರ: ಮಾಜಿ ಸಚಿವ ಎಂ.ಬಿ.ಪಾಟೀಲ ಅವರಿಗಾಗಿ ಈ ಹಿಂದೆ ನಾನು ಪ್ರತಿನಿಧಿಸುತ್ತಿದ್ದ ತಿಕೋಟ ಕ್ಷೇತ್ರವನ್ನು ತ್ಯಾಗ ಮಾಡಿ ಬಸವನ ಬಾಗೇವಾಡಿ ಕ್ಷೇತ್ರಕ್ಕೆ ಹೋಗಿದ್ದೇನೆ. ಅವರೊಂದಿಗೆ ಎಂದಿಗೂ ನಾನಂತೂ ಉತ್ತಮ ಬಾಂಧವ್ಯವನ್ನೇ ಹೊಂದಿದ್ದೇನೆ. ಅವರೊಂದಿಗೆ ಭಿನ್ನಾಭಿಪ್ರಾಯವಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ
ಕಲ್ಯಾಣ ಸಚಿವ ಶಿವಾನಂದ ಪಾಟೀಲ ಸ್ಪಷ್ಟಪಡಿಸಿದ್ದಾರೆ.
ಬುಧವಾರ ಸಂಜೆ ನಗರದ ಡಾ| ಬಿ.ಆರ್.ಅಂಬೇಡ್ಕರ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು
ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಅಧಿಕಾರದ ಹಿಂದೆ ಎಂದೂ ಓಡಿದವನಲ್ಲ. ಶಾಶ್ವತವಲ್ಲದ ಸಚಿವ ಸ್ಥಾನದ ಅಧಿಕಾರಕ್ಕಾಗಿ ಲಾಬಿ ಮಾಡಲಿಲ್ಲ, ಅದಕ್ಕಾಗಿ ದೆಹಲಿಗೆ ಅಲೆಯಲಿಲ್ಲ. ಹೈಕಮಾಂಡ್ ನನ್ನ ಸಾಮರ್ಥ್ಯ ಮನದಟ್ಟು ಮಾಡಿಕೊಂಡು ತಾನಾಗಿಯೇ ನನಗೆ ಸಚಿವನಾಗುವ ಅವಕಾಶ ನೀಡಿದೆ. ಸಚಿವ ಸಂಪುಟ ರಚನೆ ಹಿಂದಿನ ದಿನವೂ ಸಚಿವ ಸ್ಥಾನಕ್ಕಾಗಿ ಓಡಾಡದೇ ನಿರ್ಲಿಪ್ತನಾಗಿದ್ದೆ.
ಚುನಾವಣೆ ಸಂದರ್ಭದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ಹಲವು ನಾಯಕರು ಸಮರ್ಥರಿಗೆ ಸಚಿವ ಸ್ಥಾನ ನೀಡುವುದಾಗಿ ಪ್ರಕಟಿಸಿದ್ದರು. ಹೀಗಾಗಿ ಈ ಬಾರಿ ಸಚಿವ ಸ್ಥಾನ ದೊರಕುವ ವಿಶ್ವಾಸವಿತ್ತು. ಕಾಂಗ್ರೆಸ್ ಪಕ್ಷ ನನಗೆ ಅವಕಾಶ ನೀಡಿತು. ಜನಸೇವೆ ಮಾಡುವ ಅವಕಾಶ ಕೊಟ್ಟಿತು ಎಂದರು. ಮತದಾರರ ಋಣ ತೀರಿಸಲು
ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.
ಮಾಜಿ ಸಚಿವ ಎಂ.ಬಿ. ಪಾಟೀಲ ಅವರಿಗಾಗಿ ಈ ಹಿಂದೆ ನಾನು ಪ್ರತಿನಿಧಿಸುತ್ತಿದ್ದ ತಿಕೋಟ ಕ್ಷೇತ್ರವನ್ನು ತ್ಯಾಗ
ಮಾಡಿ ಬಸವನ ಬಾಗೇವಾಡಿ ಕ್ಷೇತ್ರಕ್ಕೆ ಹೋಗಿದ್ದೇನೆ. ಅವರೊಂದಿಗೆ ಎಂದಿಗೂ ನಾನಂತೂ ಉತ್ತಮ ಬಾಂಧವ್ಯವನ್ನೇ ಹೊಂದಿದ್ದೇನೆ. ಅವರೊಂದಿಗೆ ಭಿನ್ನಾಭಿಪ್ರಾಯವಿಲ್ಲ ಎಂಬುದು ಕೇವಲ ಊಹಾಪೋಹ ಮಾತ್ರ. ಎಂಬಿ.ಪಾಟೀಲ ಅವರೊಂದಿಗೆ ಬಾಂಧವ್ಯ ಸರಿ ಇಲ್ಲದಿದ್ದರೆ ಕ್ಷೇತ್ರ ತ್ಯಾಗ ಮಾಡುತ್ತಿರಲಿಲ್ಲ ಎಂದರು.
ಜಿಲ್ಲೆಯ ಸಮಗ್ರ ನೀರಾವರಿ ಯೋಜನೆ ಅನುಷ್ಠಾನಕ್ಕಾಗಿ ಈ ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದ ಎಂ.ಬಿ. ಪಾಟೀಲ ಅವರಿಗೆ ಜಿಲ್ಲೆಯ ಕಾಂಗ್ರೆಸ್‌ನ ಎಲ್ಲಾ ಏಳೂ ಶಾಸಕರು ನಮ್ಮ ಸ್ವಾರ್ಥ ಬದಿಗಿಟ್ಟು ಸಂಪೂರ್ಣ ಸಹಕಾರ ನೀಡಿದ್ದೇವೆ. ಇದೀಗ ನಾನು ಸಚಿವನಾಗಿರುವ ಈ ಹಂತದಲ್ಲಿ ಸಂಪೂರ್ಣ ಸಹಕಾರ ನೀಡುವ ಅವರ ಹೇಳಿಕೆಗೆ ನಾನು ಅಭಿನಂದಿಸುತ್ತೇನೆ ಎಂದರು. ಡಿಸಿಸಿ ಜಿಲ್ಲಾಧ್ಯಕ್ಷ ರವಿಗೌಡ ಪಾಟೀಲ, ಮಾಜಿ ಶಾಸಕರಾದ ಡಾ| ಎಂ.ಎಸ್.
ಬಾಗವಾನ, ವಿಠಲ ಕಟಕದೊಂಡ, ಕಾಂಗ್ರೆಸ್ ಮುಖಂಡರಾದ ಬಿ.ಎಸ್ .ಪಾಟೀಲ-ಯಾಳಗಿ, ಆಜಾದ್ ಪಟೇಲ್, ಹಾಸಿಂಪೀರ ವಾಲೀಕಾರ, ಎಸ್.ಎಂ. ಪಾಟೀಲ ಗಣಿಹಾರ ಉಪಸ್ಥಿತರಿದ್ದರು.