ಹೊಸದಿಲ್ಲಿ : ”ದೀದಿ, Smile please, ನೀವು ಪ್ರಜಾಸತ್ತೆಯಲ್ಲಿದ್ದೀರಿ; ಪ್ರಜಾಸತ್ತೆ ಜೀವಂತವಾಗಿರುವ ಮತ್ತು ಸ್ಪಂದನಶೀಲವಾಗಿರುವ ದಿಲ್ಲಿಗೆ ನಿಮಗೆ ಸ್ವಾಗತ” ಎನ್ನುವ ಬೃಹತ್ ಗಾತ್ರದ ಪೋಸ್ಟರ್ ಗಳು ಈಗ ರಾಷ್ಟ್ರ ರಾಜಧಾನಿಯ ವಿವಿಧೆಡೆಗಳಲ್ಲಿ ರಾರಾಜಿಸುತ್ತಿವೆ.
ಅಂದ ಹಾಗೆ ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಹಾಗೂ ಟಿಎಂಸಿ ಮುಖ್ಯಸ್ಥೆಯಾಗಿರುವ ಮಮತಾ ಬ್ಯಾನರ್ಜಿ ಅವರೀಗ ದಿಲ್ಲಿಗೆ ಆಗಮಿಸಿದ್ದು ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಸಂಘಟಿಸಿರುವ “ಸೇವ್ ಡೆಮಾಕ್ರಸಿ’ ಆಂದೋಲನದಲ್ಲಿ ದೀದಿ ಪಾಲ್ಗೊಳ್ಳುತ್ತಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಣಿಯಲು ಸಮಾನ-ಶಕ್ತಿಯ ನಾಯಕನೇ ಇಲ್ಲದಿರುವ ಮಹಾ ಮೈತ್ರಿ ಕೂಟದ ಎಲ್ಲ ವಿಪಕ್ಷ ನಾಯಕರು ಕೇಜ್ರಿವಾಲರ ಈ ವೇದಿಕೆಯಲ್ಲಿ ದೇಶದ ಪ್ರಜಾಸತ್ತೆಯನ್ನು ಉಳಿಸಲು ಜಮಾಯಿಸಿದ್ದಾರೆ.
ದೀದಿಯ ಗಂಟು ಮೋರೆಯನ್ನು ಸಡಿಲಿಸುವ ಪ್ರಯತ್ನದಲ್ಲಿ ಯೂತ್ ಫಾರ್ ಡೆಮಾಕ್ರಸಿ ಸಂಘಟನೆ “ದೀದಿ, smile please’ ಎಂದು ಕೀಟಲೆ ಮಾಡುವಂತಿರುವ ಪೋಸ್ಟರ್ ಹಾಕಿಸಿದೆ.
ಗಂಟು ಮೋರೆಯ ದೀದಿ ವ್ಯಂಗ್ಯಚಿತ್ರವನ್ನು ಹೊಂದಿರುವ ಈ ರೀತಿಯ ಬೃಹತ್ ಪೋಸ್ಟರ್‌ಗಳನ್ನು ರಾಷ್ಟ್ರ ರಾಜಧಾನಿಯ ಅನೇಕ ತಾಣಗಳಲ್ಲಿ ಹಾಕಿಸಲಾಗಿದೆ. ಸಿಎಂ ಮಮತಾ ಬ್ಯಾನರ್ಜಿ ಅವರ ಪಶ್ಚಿಮ ಬಂಗಾಲದಲ್ಲಿ ಈಚೆಗೆ ನಡೆದಿರುವ ಸಿಬಿಐ ವರ್ಸಸ್ ಮಮತಾ ಸಂಘರ್ಷದ ಹಲವು ವಿದ್ಯಮಾನಗಳನ್ನು ಅಣಕಿಸುವ ರೀತಿಯಲ್ಲಿ ಈ ಪೋಸ್ಟರ್ ಗಳನ್ನು ಕಲಾತ್ಮಕವಾಗಿ ರೂಪಿಸಲಾಗಿರುವುದು ಗಮನಾರ್ಹವಾಗಿದೆ.
ಅಂದ ಹಾಗೆ ಕೇಜ್ರಿವಾಲ್ ಅವರ ‘ಪ್ರಜಾಸತ್ತೆ ಉಳಿಸಿ’ ಪ್ರತಿಭಟನಾ ಪ್ರದರ್ಶನ ನಡೆಯುತ್ತಿರುವ ಜಂತರ್ ಮಂತರ್ ತಾಣದ ಮುಖ್ಯ ರಸ್ತೆಯಲ್ಲಿ, ಬಂಗ ಭವನ ರಸ್ತೆ (ಹ್ಯಾಲಿ ರೋಡ್) ಮತ್ತು ವಿಂಡ್ಸರ್ ಪ್ಯಾಲೇಸ್ ಸರ್ಕಲ್ ಪ್ರದೇಶದಲ್ಲೂ ಈ ಬಗೆಯ ಪೋಸ್ಟರ್ ಗಳು ರಾರಾಜಿಸುತ್ತಿವೆ.