ಉಡುಪಿ: ರುದ್ರನ ಅಕ್ಷಿಯೇ ರುದ್ರಾಕ್ಷಿ. ಹಿಂದೂ ಧರ್ಮದ ಪ್ರಕಾರ ರುದ್ರಾಕ್ಷಿಯನ್ನು ಶಿವನ ಕಣ್ಣಿಗೆ ಹೋಲಿಸಲಾಗುತ್ತದೆ. ಹೀಗಾಗಿ ರುದ್ರಾಕ್ಷಿಗೆ ಪೂಜೆ, ಪುನಸ್ಕಾರಗಳಲ್ಲಿ ವಿಶೇಷ ಸ್ಥಾನವಿದೆ. ಮತ್ತೊಂದು ಪುರಾಣದ ಕಥೆಯ ಪ್ರಕಾರ, ಶಿವನು ದೀರ್ಘ ಕಾಲ ಧ್ಯಾನ ನಿರತನಾಗಿ ನಂತರ ಕಣ್ಣು ಬಿಟ್ಟಾಗ ಅವನ ಕಣ್ಣಿನಿಂದ ಬಿದ್ದ ಒಂದು ಕಣ್ಣೀರ ಹಣಿ (ಆನಂದ ಭಾಷ್ಪ) ರುದ್ರಾಕ್ಷಿಯಾಗಿ ಅದರಿಂದ ರುದ್ರಾಕ್ಷಿಯ ಮರ ಹುಟ್ಟಿತೆಂದು ಹೇಳಲಾಗಿದೆ.
ರುದ್ರಾಕ್ಷಿಯಲ್ಲಿ ಹಲವು ಬಗೆಗಳಿವೆ, ಏಕಮುಖ, ದಶಮುಖಿ, ತ್ರಯೋದಶಿ ಮುಖಿ ರುದ್ರಾಕ್ಷಿ, ಚತುರ್ದಶ ಮುಖದ ರುದ್ರಾಕ್ಷಿ ಹೀಗೆ ಅನೇಕ ವಿಧಗಳಿವೆ. ರುದ್ರಾಕ್ಷಿ ಧಾರಣೆಯಿಂದ ದೇಹ, ಮನಸ್ಸು ಮತ್ತು ಆತ್ಮದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಜೊತೆಗೆ ದುಷ್ಟ ಶಕ್ತಿಯಿಂದ ರಕ್ಷಣೆ ಪಡೆಯಲು ಸಾಧ್ಯವಾಗುತ್ತದೆ.
ರುದ್ರಾಕ್ಷಿ ಧರಿಸುವುದರಿಂದ ಏಕಾಗ್ರತೆ ಉತ್ತಮಗೊಳ್ಳುವುದರ ಜೊತೆಗೆ ಮಾನಸಿಕ ಒತ್ತಡ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಕಾರಿಯಾಗುತ್ತದೆ. ಆದರೆ ರುದ್ರಾಕ್ಷಿಯನ್ನು ಧರಿಸಿದ ಮೇಲೆ ಕೆಲವೊಂದು ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲೇಬೇಕಾಗಿದೆ…
*ರುದ್ರಭೂಮಿ(ಸ್ಮಶಾನ) ಸ್ಥಳಕ್ಕೆ ರುದ್ರಾಕ್ಷಿಯನ್ನು ಧರಿಸಿ ಹೋಗಬಾರದು.
*ಆಲ್ಕೋಹಾಲ್ ಮತ್ತು ಮದ್ಯ ಮಾರಾಟ ಮಾಡುವ ಸ್ಥಳಗಳಿಗೆ ರುದ್ರಾಕ್ಷಿ ಧರಿಸಿ ಹೋಗಬಾರದು. ಅಷ್ಟೇ ಅಲ್ಲ ರುದ್ರಾಕ್ಷಿ ಧರಿಸಿ ಮದ್ಯ, ಮಾಂಸ ಸೇವಿಸುವುದು ಕೂಡಾ ನಿಷಿದ್ಧವಾಗಿದೆ.
*ಮಗು ಜನ್ಮ ನೀಡಿದ ಸಂದರ್ಭದಲ್ಲಿ ರುದ್ರಾಕ್ಷಿ ಧರಿಸಿ ಮಗುವನ್ನು ನೋಡಲು ಹೋಗಬಾರದು.
*ರಾತ್ರಿ ಮಲಗುವ ಮುನ್ನ ರುದ್ರಾಕ್ಷಿಯನ್ನು ತೆಗೆದಿಡಬೇಕು.
*ಅಮಾವಾಸ್ಯೆ, ಪೌರ್ಣಿಮೆ, ಶ್ರಾವಣ ಸೋಮವಾರ, ಶಿವರಾತ್ರಿ ಮತ್ತು ಪ್ರದೋಷ ಕಾಲದಲ್ಲಿ ರುದ್ರಾಕ್ಷಿ ಧರಿಸುವುದು ಶುಭಕರ.