ಶೃಂಗೇರಿ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರಕಾರ ಬದಲಾಗೋದು ಸಹಜ. ಹೀಗಾಗಿ ರಾಜ್ಯದಲ್ಲಿ ಅನೇಕರು ಮುಖ್ಯಮಂತ್ರಿಗಳಾಗಿದ್ದಾರೆ. ಸಿಎಂ ಪದವಿ ಎಂದಿಗೂ ಶಾಶ್ವತವಲ್ಲ ಎನ್ನೋದು ಗೊತ್ತಿದೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಶ್ರೀ ಶಾರದಾ ಪೀಠದ ಗುರುಭವನದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಯಾವಾಗಲೂ ಖುರ್ಚಿಗಾಗಿ ಆಸೆ ಪಟ್ಟಿಲ್ಲ. ಮುಖ್ಯಮಂತ್ರಿ ಸ್ಥಾನ ಹೋಗುತ್ತದೆ ಎಂಬ ಭಯವೂ ಇಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರಕಾರ, ಮುಖ್ಯಮಂತ್ರಿ ಸ್ಥಾನ ಬದಲಾಗುತ್ತಲೇ ಇರುತ್ತದೆ. ಆದರೆ ಆಡಳಿತ ನಡೆಸುವವರು ಜನರಿಗೆ ಏನು ಬೇಕೋ ಅದನ್ನು ಮಾಡಬೇಕು. ಜನರಿಗೆ, ರಾಜ್ಯಕ್ಕೆ ಒಳ್ಳೆಯದನ್ನು ಮಾಡಲು ಅವಕಾಶ ಕೊಡಿ. ನನ್ನ ಕೆಲಸಕ್ಕೆ ಕೆಲವರಿಂದ ತೊಂದರೆ ಆಗುತ್ತಿದೆ. ದಯಮಾಡಿ ನನಗೆ ಹಿಂಸೆ ಕೊಡಬೇಡಿ ಎಂದು ಯಾರ ಹೆಸರನ್ನೂ ಪ್ರಸ್ತಾಪಿಸದೆ ಬೇಸರ ವ್ಯಕ್ತಪಡಿಸಿದರು.
ಅ ಧಿಕಾರ ಇದ್ದಾಗ ಹಾಗೂ ಇಲ್ಲದಿದ್ದಾಗಲೂ ಶ್ರೀ ಶಾರದಾ ಪೀಠಕ್ಕೆ ಬರುತ್ತಿದ್ದೇನೆ. ಖುರ್ಚಿ ಉಳಿಸಿಕೊಳ್ಳುವ ಉದ್ದೇಶದಿಂದ ದೇವಾಲಯಕ್ಕೆ ಭೇಟಿ ನೀಡುತ್ತಿಲ್ಲ. ಆದರೆ ಕೆಲವರು ಟೆಂಪಲ್ ರನ್ ಎಂದು ಅನಗತ್ಯವಾಗಿ ಪ್ರಚಾರ ಮಾಡುತ್ತಿದ್ದಾರೆ ಎಂದರು.
ಶೃಂಗೇರಿ ಶ್ರೀಮಠ ಹಾಗೂ ಜಗದ್ಗುರುಗಳ ಬಗ್ಗೆ ನಮ್ಮ ಕುಟುಂಬಕ್ಕೆ ಹಿಂದಿನಿಂದಲೂ ಗೌರವ, ನಂಬಿಕೆ ಇದೆ. ಅ ಧಿಕಾರ ಇಲ್ಲದಿರುವಾಗಲೂ ಇಲ್ಲಿಗೆ ಭೇಟಿ ನೀಡಿದ್ದೇನೆ. ಆದರೆ ಮಾಧ್ಯಮಗಳಲ್ಲಿ ಆಗ ದೊಡ್ಡ ಸುದ್ದಿಯಾಗುತ್ತಿರಲಿಲ್ಲ. ಆದರೆ ಈಗ ಮಾತ್ರ ಮುಖ್ಯಮಂತ್ರಿ ಟೆಂಪಲ್ ರನ್ ಎಂದು ಸುದ್ದಿ ಮಾಡಲಾಗುತ್ತಿದೆ ಎಂದರು.
ರಾಜ್ಯದ ಕೆಲವೆಡೆ ಅತಿವೃಷ್ಟಿಯಾಗಿದ್ದರೆ, ಅನೇಕ ತಾಲೂಕಿನಲ್ಲಿ ಬರಗಾಲವಿದೆ. ಹೀಗಾಗಿ ದೇವರಲ್ಲಿ ಹಾಗೂ ಜಗದ್ಗುರುಗಳ ಬಳಿ ಬರಪೀಡಿತ ಪ್ರದೇಶದಲ್ಲಿ ಮಳೆಯಾಗಲಿ ಎಂದು ಬೇಡಿಕೊಂಡಿದ್ದೇನೆ ಎಂದರು.
ಮುಖ್ಯಮಂತ್ರಿಗಳೊಂದಿಗೆ ಪತ್ನಿ ಅನಿತಾಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಚನ್ನಮ್ಮ, ಸಚಿವ ಎಚ್.ಡಿ. ರೇವಣ್ಣ, ಶಾಸಕರಾದ ಟಿ.ಡಿ. ರಾಜೇಗೌಡ, ಭೋಜೇಗೌಡ ಮತ್ತಿತರರು ಇದ್ದರು.