ದಂಡಕಾರಣ್ಯದಲ್ಲಿ ಶ್ರೀರಾಮನ ಬಹುತೇಕ ಪ್ರಯಾಣ, ಸಾಗುವುದು ಗೋದಾವರಿಯ ತೀರದಲ್ಲಿ. ಪಂಚವಟಿಯ ಸೀತಾ ಗುಹೆ, ಕಲಾರಾಮ ಮಂದಿರಗಳನ್ನು ಕಳೆದವಾರ ದರ್ಶಿಸಿದ್ದಾಯಿತು. ಇವೆಲ್ಲವನ್ನೂ ನೋಡಿಕೊಂಡು, ಗೋದಾವರಿ ತೀರದ ಬಲಭಾಗಕ್ಕೆ ಬಂದರೆ, ಸಿಗುವುದೇ ನಾಸಿಕ್. ಅಂದರೆ, ಈ ನದಿ ತನ್ನ ಎಡ ತಟದಲ್ಲಿ ಪಂಚವಟಿಯನ್ನೂ ಮತ್ತು ಬಲಭಾಗದಲ್ಲಿ ನಾಸಿಕ್ ಅನ್ನೂ ಹೊಂದಿದೆ. ಗೋದಾವರಿ ಮತ್ತು ಕಪಿಲಾ ನದಿಗಳ ಸಂಗಮ ಇರುವುದೂ ಇಲ್ಲಿಯೇ. ಈ ಸಂಗಮದ ಸಮೀಪ ತಾಣವನ್ನು ಗೌತಮ ಮಹರ್ಷಿಗಳ ತಪೋಭೂಮಿ ಎನ್ನಲಾಗುತ್ತದೆ.
ರಾಮ- ಲಕ್ಷ್ಮಣ- ಸೀತೆಯರು ಇಲ್ಲಿನ ತಪೋವನದಲ್ಲಿ, ಕೆಲವು ದಿನಗಳನ್ನು ಕಳೆದಿದ್ದರಂತೆ. ತಪೋವನದ ತಂಪು ನೆರಳನ್ನು ದಾಟುತ್ತಲೇ ಸೆಳೆಯುವುದು, ಲಕ್ಷ್ಮಣ ಮಂದಿರ. ರಾವಣನ ಸಹೋದರಿ, ಶೂರ್ಪನಖಿಯ ಮೂಗನ್ನು ಲಕ್ಷ್ಮಣ ಕತ್ತರಿಸಿದ ಸ್ಥಳ ಇದೆಂದು ನಂಬಲಾಗುತ್ತದೆ. ಹಾಗೆ ಕತ್ತರಿಸಲ್ಪಟ್ಟ ಮೂಗು, ಗೋದಾವರಿ ನದಿಯ ಬಲಭಾಗಕ್ಕೆ ಹೋಗಿ ಬಿದ್ದಿದ್ದರಿಂದ, ಆ ಪ್ರದೇಶವನ್ನು “ನಾಸಿಕ್’ ಎಂದು ಕರೆಯುತ್ತಾರೆ. ನಾಸಿಕ ಎಂದರೆ ಸಂಸ್ಕೃತದಲ್ಲಿ ಮೂಗು ಎಂದರ್ಥ.
ಶೂರ್ಪನಖಿಯ ಶಿಲ್ಪಾಕೃತಿ: ಲಕ್ಷ್ಮಣ ಮಂದಿರವು, ಬೃಹತ್ ಆಲದ ಮರದ ಕೆಳಗಿದೆ. ಅದರ ಪಕ್ಕದಲ್ಲಿಯೇ, ಮೂಗು ಸೀಳಲ್ಪಟ್ಟ ಶೂರ್ಪನಖಿಯ ಶಿಲ್ಪಾಕೃತಿ, ರಾಮಾಯಣದ ಕತೆ ಹೇಳುತ್ತದೆ. ಶೂರ್ಪನಖಿಯ ಮೂಗು ರಕ್ತಸಿಕ್ತವಾಗಿದ್ದು, ಆಕೆಯ ಮುಂದೆ ಲಕ್ಷ್ಮಣ ಖಡ್ಗ ಹಿಡಿದು ನಿಂತಿರುವ ದೃಶ್ಯವಿದೆ. ತನ್ನ ಪತಿ ದುಷ್ಟಬುದ್ಧಿಯನ್ನು ರಾವಣನು ಕೊಲ್ಲಿಸಿದ್ದರಿಂದ, ಸೋದರನ ಮೇಲೆ ಕೋಪಗೊಂಡ ಶೂರ್ಪನಖಿ, ದಂಡಕಾರಣ್ಯದಲ್ಲಿ ಅಲೆಯುತ್ತಿರುತ್ತಾಳೆ. ವನವಾಸದಲ್ಲಿದ್ದ ಶ್ರೀರಾಮನು, ಈಕೆಯ ಕಣ್ಣಿಗೆ ಬಿದ್ದಾಗ, ಮೋಹಿತಳಾಗುತ್ತಾಳೆ. ಮದುವೆಯಾಗುವಂತೆ ಪೀಡಿಸುತ್ತಾಳೆ. ರಾಮ ನಿರಾಕರಿಸಿ, ಲಕ್ಷ್ಮಣನನ್ನು ಕೇಳು ಅಂದಾಗ, ಆತ ಸಿಟ್ಟಾಗಿ, ಮೂಗನ್ನೇ ಕತ್ತರಿಸುತ್ತಾನೆ. ಶೂರ್ಪನಖಿ ಲಂಕೆಗೆ ಹೋಗಿ, ರಾವಣನಿಗೆ ದೂರು ನೀಡುವಾಗ, ಸೀತೆಯ ಸೌಂದರ್ಯದ ಬಗ್ಗೆ ವರ್ಣಿಸುತ್ತಾಳೆ. ಈ ಪ್ರಸಂಗವೇ, ರಾಮಾಯಣದ ಬಹುಮುಖ್ಯ ತಿರುವು.
ರಾಮನ ನೆನಪು…: ಲಕ್ಷ್ಮ ಣನ ಮಂದಿರದಿಂದ ತುಸು ಮುಂದಕ್ಕೆ ಹೋದರೆ ಸಿಗುವುದು, ಸುಂದರ ನಾರಾಯಣನ ದೇಗುಲ. 1793ರಲ್ಲಿ ಕಟ್ಟಲ್ಪಟ್ಟ ಮಂದಿರದಲ್ಲಿ ನಾರಾಯಣನ ಭವ್ಯ ಮೂರ್ತಿ ಇದ್ದು, ಭಕ್ತರು ದರ್ಶನಕ್ಕೆ ಸಾಲುಗಟ್ಟಿ ನಿಂತಿರುತ್ತಾರೆ. ನಾಸಿಕ್‌ನಿಂದ 9 ಕಿ.ಮೀ. ಸಾಗಿದರೆ, ಒಂದು ಪರ್ವತವಿದೆ. ಇಲ್ಲಿರುವ ಎರಡು ಗುಹೆಗಳು ಪ್ರವಾಸಿಗರ ಆಕರ್ಷಣೆ. ವನವಾಸದ ವೇಳೆ, ರಾಮ ಈ ಗುಹೆಗಳಲ್ಲಿ ವಾಸವಿದ್ದ ಎನ್ನಲಾಗುತ್ತದೆ.
ದಂಡಕಾರಣ್ಯವಾಗಿದ್ದ ಕಾರಣ, ಆ ಕಾಲದಲ್ಲಿ ದಟ್ಟ ಕಾಡಿತ್ತು. ಅಂದು ಇಲ್ಲಿ ಮಧ್ಯಾಹ್ನ ಘಟಿಸಿದ್ದ ಸೂರ್ಯ ಗ್ರಹಣದಿಂದಾಗಿ, ಪಂಚವಟಿ ಸಂಪೂರ್ಣ ಕತ್ತಲಾಗಿತ್ತು. ಪಕ್ಷಿಗಳೆಲ್ಲ ಗೂಡು ಸೇರಿದ್ದವು. ಆಕಾಶದಲ್ಲಿ ಗ್ರಹಗಳು ಕಾಣಿಸುತ್ತಿದ್ದವು ಎಂದು ವಾಲ್ಮೀಕಿ ಮಹರ್ಷಿ ವರ್ಣಿಸುತ್ತಾರೆ. ಆದರೆ, ಇಂದು ಪಂಚವಟಿ ಯಲ್ಲಿ ಆ ಪ್ರಮಾಣದ ಅರಣ್ಯವೇನೂ ಇಲ್ಲ. ನಾಸಿಕ್, ಜಿಲ್ಲಾಕೇಂದ್ರವೂ ಆಗಿರುವುದರಿಂದ, ಪಂಚವಟಿ ಪ್ರಗತಿಯತ್ತಲೂ ಮುಖಮಾಡಿದೆ. ಪ್ರತಿ 12 ವರ್ಷ ಕ್ಕೊಮ್ಮೆ ನಡೆಯುವ ಕುಂಭಮೇಳ, ನಾಸಿಕ್ ಅನ್ನು ಮುಖ್ಯ ಶ್ರದ್ಧಾಕೇಂದ್ರದ ಪಟ್ಟಿಗೆ ಸೇರಿಸಿದೆ.
ಇದುವೆ ಮಾರ್ಗ…: ಮುಂಬೈನಿಂದ ನಾಸಿಕ್, 167 ಕಿ.ಮೀ. ದೂರದಲ್ಲಿದೆ. ವಿಮಾನ, ರೈಲ್ವೆ, ರಸ್ತೆ ಮಾರ್ಗಗಳು ಈ ಜಿಲ್ಲೆಗೆ ಸಂಪರ್ಕ ಕಲ್ಪಿಸಿವೆ.
* ಡಾ. ಸುಹಾಸ್ ರೈ