Advertisement

ಕಾರ್ಕಳಕ್ಕೂ ಕಾಲಿರಿಸಿತೇ “ಟ್ವಿಸ್ಟರ್‌’!

09:30 AM Aug 02, 2019 | keerthan |

ಹಾಲಿವುಡ್‌ನ‌ “ಟ್ವಿಸ್ಟರ್‌’ ಸಿನೆಮಾವನ್ನು ನೋಡದವರಿಲ್ಲ. 1996ರ ಈ ಸ್ಟೀವನ್‌ ಸ್ಪೀಲ್‌ಬರ್ಗ್‌ ಸಿನೆಮಾ ಅಮೆರಿಕದಲ್ಲಿ ಟೊರ್ನಾಡೋ ಒಂದರ ಅಧ್ಯಯನದ ಕಥೆಯ ಎಳೆಯನ್ನು ಹೊಂದಿರುವಂಥದ್ದು. ಆ ವರ್ಷದ ದ್ವಿತೀಯ ಅತಿ ಹೆಚ್ಚು ಬಾಕ್ಸ್‌ ಆಫೀಸ್ ಗಳಿಕೆಯ ಸಿನೆಮಾ ಅದು . ಅಕಾಡೆಮಿ ಅವಾರ್ಡ್‌ಗೆ ನಾಮಿನೇಟ್‌ ಆಗಿದ್ದರೂ “ಇಂಡಿಪೆಂಡೆನ್ಸ್‌ ಡೇ’ ಎದುರು ಸೋತಿತ್ತು.

Advertisement

ಪ್ರಶ್ನೆಯೀಗ ಇರುವುದು ನಮ್ಮಲ್ಲೂ “ಟ್ವಿಸ್ಟರ್‌’ ಉಂಟಾಗಲು ಆರಂಭವಾಗಿವೆಯೇ?! ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ಗಮನಿಸಿದರೆ ಕಾರ್ಕಳದ ಪೆರುವಾಜೆ ದೇವರಕಟ್ಟೆ ಭಾಗದಲ್ಲಿ ಗುರುವಾರ ಬೆಳಗ್ಗೆ ಸಂಭವಿಸಿದ್ದು ಸಣ್ಣ ಪ್ರಮಾಣದ ಒಂದು ಟೋರ್ನಾಡೊ ಎನ್ನಿಸುತ್ತದೆ. ಗದ್ದೆಯ ನೀರು 200 ಮೀಟರ್‌ನಷ್ಟು ಎತ್ತರಕ್ಕೆ ಚಿಮ್ಮುವುದು, ನವಿಲು
ಜತೆಯಲ್ಲಿ ತೇಲಾಡುವುದು ಮುಗಿಲು ಆಲಿಕೆಯಂತೆ ಗಿರಗಿರ ತಿರುಗುತ್ತಾ ನೆಲವನ್ನು ಸ್ಪರ್ಶಿಸುವ ಟೊರ್ನಾಡೊದಲ್ಲಿ ಮಾತ್ರ ಸಾಧ್ಯ . ‘ಟ್ವಿಸ್ಟರ್‌” ಸಿನಿಮಾದಲ್ಲಿ ದನಗಳು ಕಾರಿನ ಮುಂದೆಯೇ ತೇಲಾಡುತ್ತ ಹೋಗುವ ದೃಶ್ಯವನ್ನು ನೆನಪಿಸಿಸಕೊಳ್ಳಿ!

ಟೊರ್ನಾಡೊ ಎಲ್ಲಿ ಹೆಚ್ಚು?
ಟೊರ್ನಾಡೊಗಳು ಹೆಚ್ಚಾಗಿ ಉಂಟಾಗುವುದು ಉತ್ತರ ಅಮೆರಿಕ, ದಕ್ಷಿಣ ಆಫ್ರಿಕಾ , ಯೂರೋಪ್ ಗಳಲ್ಲಿ . ಬಾಂಗ್ಲಾಮತ್ತು ಅದಕ್ಕೆ ಹೊಂದಿಕೊಂಡ ಭಾರತದ ಪೂರ್ವ ಭಾಗದಲ್ಲೂ ಟೊರ್ನಾಡೊಗಳು ಉಂಟಾಗುವುದು ಕಂಡುಬಂದಿದೆ. ಟೊರ್ನಾಡೊಕ್ಕೆ ಹೋಲಿಸಬಹುದಾದ ಸುಂಟರಗಾಳಿಗಳು ನಮ್ಮಲ್ಲೂ ಉಂಟಾಗುತ್ತವೆ. ಆದರೆ ಟೊರ್ನಾಡೊಗಳು ಹೆಚ್ಚು
ತೀವ್ರವಾದವು; ಹಾನಿಯೂ ಹೆಚ್ಚು.

ಹೇಗೆ ಉಂಟಾಗುತ್ತದೆ ಟೊರ್ನಾಡೊ?
ಒಂದು ಕೇಂದ್ರ ಬಿಂದುವಿನಲ್ಲಿ ಹಠಾತ್‌ ಉಂಟಾದ ವಾಯುಭಾರ ಕು‌ಸಿತದಿಂದಾಗಿ ಸುತ್ತಲಿನ ಗಾಳಿ ಆಲಿಕೆಯಂತೆ ಸುತ್ತುತ್ತಾ ಮೋಡ ಮತ್ತು ನೆಲವನ್ನು ಸಂಧಿಸುವುದು ಟೊರ್ನಾಡೊ . ಇದು ಸುತ್ತುವ ವೇಗ ತಾಸಿಗೆ 180 ಕಿ.ಮೀ. ವರೆಗೂ ಇರಬಹುದು . ಇವು ಭೂಮಿಯ ಉತ್ತರ ಗೋಳಾರ್ಧದಲ್ಲಿ ಅಪ್ರದಕ್ಷಿಣವಾಗಿಯೂ ದಕ್ಷಿಣ ಗೋಳಾರ್ಧದಲ್ಲಿ ಪ್ರದಕ್ಷಿಣವಾಗಿಯೂ ಸುತ್ತುತ್ತವೆ. ತಾನು ಸಾಗುವ ದಾರಿಯುದ್ದಕ್ಕೂ ಎದುರು ಸಿಕ್ಕಿದ ಎಲ್ಲವನ್ನೂ ತನ್ನೊಳಗೆ ಸೇರಿಸಿಕೊಂಡು ಗಿರಗಿರ ತಿರುಗುತ್ತಾ ಕೆಲವು ಕಿ.ಮೀ. ದೂರ ಸಾಗಿ ಮಾಯವಾಗುತ್ತವೆ.

Advertisement

ಈ ತಿರುಗುವ ವೇಗ, ಅದರೊಳಗಿನ ಹವಾಮಾನ ಸ್ಥಿತಿಗತಿ ಎಷ್ಟು ಸಂಕೀರ್ಣವಾಗಿರುತ್ತದೆ ಎಂದರೆ ಅದರೊಳಗೆ ಸಿಲುಕಿದ ಹುಲ್ಲುಕಡ್ಡಿ ಕೂ‌ಡ ಲೋಹದ ಸೂಜಿಯಂತೆ ನಾಟುತ್ತದಂತೆ!

ಪ್ರಕೃತಿಯ ವಿಸ್ಮಯಗಳು ಎಲ್ಲೂ, ಯಾವುದೇ ಕ್ಷಣದಲ್ಲೂ ಸಂಭವಿಸಲು ಸಾಧ್ಯ. ಕಾರ್ಕಳದಲ್ಲಿ ಗುರುವಾರ ಬೆಳಗ್ಗೆ ಘಟಿಸಿದ್ದು ಅಂಥ ವಿಚಿತ್ರಗಳಲ್ಲಿ ಒಂದಾದ ಟೋರ್ನಾಡೊವೇ ಎಂಬ ಕುತೂಹಲಭರಿತ ಪ್ರಶ್ನೆಗೆ ಹವಾಮಾನ ತಜ್ಞರು ಉತ್ತರ ಹೇಳಬೇಕು.

Advertisement

Udayavani is now on Telegram. Click here to join our channel and stay updated with the latest news.

Next