Advertisement
ಒಂದು ಅಂದಾಜಿನಂತೆ ಸಿದ್ದರಾಮಯ್ಯ ಅವರಿಗೆ ಎರಡು ಉದ್ದೇಶಗಳಿದ್ದವು. ತಾವು ಮುಖ್ಯಮಂತ್ರಿ ಆಗುವುದು ಇಲ್ಲವೇ ತಾವು ವಿರೋಧ ಪಕ್ಷದಲ್ಲಿ ಕೂರುವುದು! ಆ ಮೂಲಕ ಜೆಡಿಎಸ್ ಗಟ್ಟಿಯಾಗುವುದನ್ನು ತಪ್ಪಿಸುವುದು, ಮೈತ್ರಿ ಕಾರಣದಿಂದ ತಮ್ಮ ಪಕ್ಷದ ಬುಟ್ಟಿಯಿಂದ ಬಿಜೆಪಿ ಬುಟ್ಟಿಗೆ ಹೋದ ಮತಗಳನ್ನು ಮತ್ತೆ ಸೆಳೆಯಲು ಪ್ರಯತ್ನಿಸುವುದು ಸಿದ್ದರಾಮಯ್ಯ ಅವರ ರಹಸ್ಯ ಕಾರ್ಯಸೂಚಿಯಾಗಿತ್ತೆ ಎನ್ನುವುದು ಯಕ್ಷ ಪ್ರಶ್ನೆ. ರಾಜಕೀಯ ತಂತ್ರಗಾರಿಕೆಯಲ್ಲಿ ಸಿದ್ಧಹಸ್ತರು ಎನಿಸಿಕೊಂಡಿರುವ ಸಿದ್ದರಾಮಯ್ಯ, ಬಿಜೆಪಿ ಆಸೆಯನ್ನು ಪರೋಕ್ಷವಾಗಿ ಪೂರೈಸುವ ಮೂಲಕ ತಮ್ಮ ಅಭಿಲಾಶೆಯನ್ನು ತೀರಿಸಿಕೊಂಡರು ಎಂಬ ವಿಷಯ ವಿಶ್ಲೇಷಣೆಗೆ ಅರ್ಹ. ಇನ್ನೊಂದು ರೀತಿಯಲ್ಲಿ ತಮ್ಮ ರಾಜಕೀಯ ಜೀವನ ಮುಗಿಸಲು ಸದಾ ಯತ್ನಿಸುತ್ತಿದ್ದ ಮಾಜಿ ಪ್ರಧಾನಿ ದೇವೇಗೌಡರಿಗೆ “ಪಾಠ ಕಲಿಸುವ’ ಉದ್ದೇಶವೂ ಅವರ ನಡೆಗಳಲ್ಲಿ ಇತ್ತೆಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ.
Related Articles
Advertisement
ಸಮಾಜವಾದದ ಪೋಷಾಕಿಗೆ ಕೆಸರು: ಅಪ್ಪ-ಮಕ್ಕಳು ಎಂಬ ಶಬ್ದಕ್ಕೆ ದೇವೇಗೌಡರ ಮಕ್ಕಳ ಪ್ರೇಮವನ್ನು ತಾಳೆ ಹಾಕಿದ್ದ ಸಿದ್ದರಾಮಯ್ಯ, ಸ್ವತ: ತಮ್ಮ ಮಗನನ್ನು ವರುಣಾ ಕ್ಷೇತ್ರದಿಂದ ನಿಲ್ಲಿಸಿ, ತಾವು ಚಾಮುಂಡೇಶ್ವರಿ ಮತ್ತು ಬಾದಾಮಿ ಕ್ಷೇತ್ರದಿಂದ ಸ್ಪರ್ಧಿ ಸಿದಾಗಲೇ ತಮ್ಮ ತತ್ವ-ಸಿದ್ಧಾಂತಗಳಿಗೆ ರಾಜಿಯಾದರು ಎಂಬುದು ಜನಜನಿತವಾಯಿತು. ಅವರ ಸಮಾಜವಾದದ ಪೋಷಾಕಿನಲ್ಲಿ ಕೆಸರು ಮೆತ್ತಿಕೊಂಡಿತು.
ಸಿದ್ದರಾಮಯ್ಯ ರಾಜಕೀಯ ಅಷ್ಟಕ್ಕೇ ಅಂತ್ಯವಾಯಿತು ಎನ್ನುವಾಗಲೇ ಹೇಗೆ ಸಮ್ಮಿಶ್ರ ಸರ್ಕಾರವನ್ನು ನಿಧಾನವಾಗಿ ಆಟವಾಡಿಸತೊಡಗಿದರು ಎಂಬುದು ಇತ್ತೀಚಿನ ರಾಜಕೀಯ ಮೇಲಾಟಗಳಲ್ಲಿ ಗೊತ್ತಾಗುತ್ತದೆ. ಸಮ್ಮಿಶ್ರ ಸರ್ಕಾರದ ಹತೋಟಿಯನ್ನು ದೇವೇಗೌಡರ ಕುಟುಂಬ ಪಡೆಯಲು ಯತ್ನಿಸುತ್ತಿದ್ದಾಗಲೆ ಸಿದ್ದರಾಮಯ್ಯ ಕೂಡಾ ಇನ್ನೇನು ಕೈತಪ್ಪಲಿದ್ದ ಕಾಂಗ್ರೆಸ್ ಪಕ್ಷದ ಮೇಲಿನ ಹಿಡಿತವನ್ನು ಸಮನ್ವಯ ಸಮಿತಿ ಅಧ್ಯಕ್ಷರಾಗಿ, ನಿಧಾನವಾಗಿ ಬಿಗಿ ಮಾಡಿಕೊಂಡರು. ಅದಕ್ಕಾಗಿ ಜೆಡಿಎಸ್ ಪಕ್ಷವನ್ನೇ ಬಳಸಿಕೊಂಡಂತೆ ಕಾಣುತ್ತದೆ.
ಸಿದ್ದರಾಮಯ್ಯ ಅವರನ್ನು ಬದಿಗೆ ಸರಿಸಲು ಉಪಮುಖ್ಯ ಮಂತ್ರಿ ಜಿ.ಪರಮೇಶ್ವರ್, ಡಿ.ಕೆ.ಶಿವ ಕುಮಾರ್ ಮತ್ತಿತರರು ರಾಜ ಕೀಯ ಆಟಗಳನ್ನು ಆಡುತ್ತಿರು ವಾಗಲೇ ಅದರ ಸದ್ಬಳಕೆಗೆ ಕುಮಾ ರಸ್ವಾಮಿ ಟೀಮ್ ಕೂಡಾ ಸಿದ್ಧತೆ ನಡೆಸಿತ್ತು. ಮತ್ತೆ ಸಿದ್ದರಾಮಯ್ಯ ಸಿಎಂ ಎಂಬ ಸ್ಲೋಗನ್‌ಗಳನ್ನು ತಮ್ಮ ಆಪ್ತರಿಂದ ಘೋಷಿಸಿಕೊಂಡು, ಅದಕ್ಕೆ ಜೆಡಿಎಸ್ ಮುಖಂ ಡರಿಂದ ಪ್ರತಿಕ್ರಿಯೆ “ಹೇಳಿಸಿ’ಕೊಂಡು ತಮ್ಮ ಇರುವಿಕೆ ಯನ್ನು ಸಿದ್ದರಾಮಯ್ಯ ಗಟ್ಟಿಮಾಡತೊಡಗಿದರು. ಕನಿಷ್ಠ ಆರೇಳು ಬಾರಿ ನಡೆದ “ಆಪರೇಷನ್ ಕಮಲ’ ಸುದ್ದಿಗಳಿಗೆ ಸಿದ್ದರಾಮಯ್ಯ ಪರೋಕ್ಷ ಬೆಂಬಲವಿತ್ತೇ ಎಂಬುದು ಚರ್ಚಿಸಬೇಕಾದ ವಿಷಯ.
ಮೈತ್ರಿ ಸರ್ಕಾರದ ಆರಂಭ ಕಾಲದಲ್ಲೇ ಧರ್ಮಸ್ಥಳದಲ್ಲಿ ಪ್ರಕೃತಿ ಚಿಕಿತ್ಸೆಗೆ ತೆರಳಿದ್ದ ಅವರು ಮತ್ತವರ ಮಾತುಕತೆ ಬೇರೆಯೇ ರಾಜಕೀಯ ಲೆಕ್ಕಾಚಾರವನ್ನು ಹಾಕಿತ್ತಂತೆ. ಅಂತಹ ರಾಜಕೀಯ ಆಟಗಳನ್ನು ಸಿದ್ದರಾಮಯ್ಯ ಆಡುತ್ತಲೇ ಹೋದರು. ಕುಮಾರಸ್ವಾಮಿ ತಮ್ಮ ಪ್ರಭಾವವನ್ನು ಎಲ್ಲಿ ಹೆಚ್ಚಿಸಿಕೊಳ್ಳುತ್ತಿದ್ದರೋ, ಅಲ್ಲೆಲ್ಲಾ ಸಿದ್ದರಾಮಯ್ಯ ಯಾವುದಾದರೂ ರೂಪದಲ್ಲಿ “ರಾಜ ಕೀಯ ಪಗಡೆಯಾಟದ ಚೆಕ್’ ಒಡ್ಡುತ್ತಿದ್ದರು. ಅದು ಕುಮಾಸ್ವಾಮಿ- ಸಿದ್ದರಾಮಯ್ಯ, ದೇವೇಗೌಡ-ಸಿದ್ದ ರಾಮಯ್ಯ, ಸಾ.ರಾ.ಮಹೇಶ್- ಸಿದ್ದರಾಮಯ್ಯ, ಎಚ್. ವಿಶ್ವನಾಥ್- ಸಿದ್ದರಾಮಯ್ಯ, ಜಿ.ಟಿ.ದೇವೇಗೌಡ- ಸಿದ್ದರಾಮಯ್ಯ ಹೀಗೆ ಮಾತಿನ ಪೆಟ್ಟು-ಪ್ರತಿ ಪಟ್ಟುಗಳಿಗೆ ಕಾರಣವಾಗುತ್ತಲೇ ಹೋಯಿತು.
ಇತ್ತ ಸಿದ್ದರಾಮಯ್ಯ-ಪರಮೇಶ್ವರ್, ಸಿದ್ದರಾಮಯ್ಯ-ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ- ರೋಷನ್‌ಬೇಗ್, ಸಿದ್ದರಾಮಯ್ಯ-ಕೋಳಿವಾಡ್… ಹೀಗೆ ಕಾಂಗ್ರೆಸ್‌ನಲ್ಲೂ ವ್ಯಂಗ್ಯ-ಪ್ರತಿಧ್ವನಿಗಳು ಕೇಳುತ್ತಲೇ ಇದ್ದವು. ಸಿದ್ದರಾಮಯ್ಯ ಅವರ ವಿರುದ್ಧ ಜೆಡಿಎಸ್ ನಾಯಕರನ್ನು ಬಳಸಿಕೊಂಡು ಅವರ ಸ್ವಪಕ್ಷದ ವಿರೋಧಿಗಳೂ ಕೂಡಾ ಹೈಕಮಾಂಡ್‌ಗೆ ದೂರುತ್ತಲೇ ಹೋದರು. ಆದರೆ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲನನುಭವಿಸಿದಾಗ ಸಿದ್ದರಾಮಯ್ಯ ಕೊಟ್ಟ ಚುನಾವಣಾ ಪೂರ್ವ ವರದಿ ಸತ್ಯವಾಗಿದ್ದು ಹೈಕಮಾಂಡ್‌ಗೆ ಮನವರಿಕೆಯಾಯಿತು ಎಂಬುದು ಅವರ ಜತೆಗಾರರ ಹೇಳಿಕೆ. ಸಿದ್ದರಾಮಯ್ಯ ದೆಹಲಿಗೆ ತೆರಳಿದವರೇ ಮೈತ್ರಿ ಸರ್ಕಾರದ ಪತನದ ಭವಿಷ್ಯ ಬರೆದೇ ಬಂದಿದ್ದರು ಎಂಬಂತಿದೆ ಆ ಬಳಿಕದ ಅವರ ನಡವಳಿಕೆ.
ಅವರ “ಆಪ್ತರೇ’ ಆಗಿದ್ದ ರಮೇಶ್ ಜಾರಕಿಹೊಳಿ, ಎಸ್.ಟಿ. ಸೋಮಶೇಖರ್, ಮುನಿರತ್ನಾದಿಗಳಾಗಿ ಹೆಚ್ಚಿನ ಅತೃಪ್ತರನ್ನು ಆಗಾಗ ಕುಮಾರಸ್ವಾಮಿ ವಿರುದ್ಧ ಛೂ ಬಿಡುತ್ತಲೇ ಇದ್ದರು. ಆದರೆ, ಕೊನೆಗೆ ಬಿಟ್ಟ ಛೂಬಾಣ ನೇರವಾಗಿ ಕುಮಾರಸ್ವಾಮಿ ಅವರಿಗೆ ತಗುಲಿದ್ದು ಈಗ ವೇದ್ಯವಾಗುತ್ತಿದೆ. ಅನರ್ಹತೆ, ನೋಟಿಸ್, ರಾಜಕೀಯ ಒತ್ತಡ… ಹೀಗೆ ಎಲ್ಲವನ್ನೂ ಆ ಅತೃಪ್ತರು ಎದುರಿಸುತ್ತಿರುವುದರ ಹಿಂದೆ ನಿಜವಾಗಿ ಯಾರ ಕೈ ಇದೆ? ಸಿದ್ದರಾಮಯ್ಯ ಬಾಣವನ್ನೇನೋ ಬಿಟ್ಟರು. ಆದರೆ, ಆ ಬಾಣ ಮತ್ತ ಸಿದ್ದರಾಮಯ್ಯರ ಬತ್ತಳಿಕೆಗೆ ಮರಳಿ ಬರದೆ, ಬಿಜೆಪಿ ಬತ್ತಳಿಕೆ ಏರಿದ್ದು ಹೇಗೆ ಎಂಬುದು ರಾಜಕೀಯ ಯಕ್ಷ ಪ್ರಶ್ನೆ. ಸಿದ್ದರಾಮಯ್ಯ ಅವರೇನೋ ಅತೃಪ್ತರ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿ “ತಮಗಾಗಿ ಎದೆಬಗೆಯಲು ಸಿದ್ಧರಾಗಿದ್ದವರು ತಮ್ಮ ಬೆನ್ನು ಬಗೆದರು’ ಎಂದು ಪಕ್ಷ ಶಾಸಕರ ಮುಂದೆ ಹೇಳಿಕೊಂಡು ಗಾಯಕ್ಕೆ ಮುಲಾಮು ಹಚ್ಚಿಕೊಂಡರು.
ಆದರೆ, ಈಗ.. ಅವರ ನಿಜವಾದ ಗುರಿ ಸಾಧ್ಯವಾಗಿದೆಯೇ? ಒಂದು ಅಂದಾಜಿನ ಮೂಲಕ ಕಾಂಗ್ರೆಸ್ ಪಕ್ಷವನ್ನು ಉಳಿಸಲು ಪಕ್ಷ ಮತ್ತೆ ಸಂಘಟಿಸಲು ಈ ಮೈತ್ರಿ ಕಳಚಿಕೊಳ್ಳಬೇಕು, ಅಥವಾ ಮೈತ್ರಿ ಸರ್ಕಾರದ ನಾಯಕತ್ವವನ್ನು ಕಾಂಗ್ರೆಸ್ ವಹಿಸಿಕೊಳ್ಳಬೇಕು ಎಂಬ ಸಿದ್ದರಾಮಯ್ಯ ತಂತ್ರ ನಿಜವಾದಂತಿದೆ. ಒಂದಂತೂ ಸ್ಪಷ್ಟ, ಕಾಂಗ್ರೆಸ್ ಪ್ರಮುಖ ವಿರೋಧಪಕ್ಷವಾಗಿ, ಪಕ್ಷ ಸಂಘಟಿಸಲು ಸಹಾಯವಾಗಬಹುದು. ಸಿದ್ದರಾಮಯ್ಯ ವಿರೋಧಪಕ್ಷದ ನಾಯಕರಾಗುತ್ತಾರೆ ಅಥವಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗುತ್ತಾರೆ ಎನ್ನುವುದಂತೂ ದಿಟ. ಆ ಮೂಲಕ ಅವರು ಬಿಜೆಪಿಗೆ ಸರ್ಕಾರ ರಚಿಸಲು ಅನುವು ಮಾಡಿಕೊಟ್ಟಿದ್ದಾರೆ ಎಂಬುದು ಜೆೆಡಿಎಸ್ ಮಂದಿಯ ಅನಿಸಿಕೆ.
ಸಿದ್ದರಾಮಯ್ಯ ಅಚ್ಚರಿಯ ನಡೆ: ಸಮ್ಮಿಶ್ರ ಸರ್ಕಾರವನ್ನು ಕಾಪಾಡಲು ಸಿದ್ದರಾಮಯ್ಯ ಪ್ರಮುಖ ಪಾತ್ರ ವಹಿಸಿದ ರೀತಿ, ಸದನದಲ್ಲಿ ಮೈತ್ರಿ ಪರವಾಗಿ ಅವರು ವಕಾಲತ್ತು ವಹಿಸಿಕೊಂಡು “ಸದನದಲ್ಲಿ ಕ್ರಿಯಾಲೋಪ’ ಎತ್ತಿ ವಿಪ್ ವಿಷಯದಲ್ಲಿ ಬಿಗಿಪಟ್ಟು ಪ್ರದರ್ಶಿಸಿರುವುದು ಅವರ ಅಚ್ಚರಿಯ ನಡೆಯೆಂದು ಅವರ ವಿರೋಧಿಗಳೂ ಹೇಳುತ್ತಾರೆ. ಕೆಲವು ಬಿಜಪಿ ಸಂಸದೀಯ ಪಟುಗಳ ಪ್ರಕಾರ, ಮೈತ್ರಿ ಸರ್ಕಾರ ಉಳಿಸಲು ಸದನವನ್ನು ಐದು ದಿನಗಳವರೆಗೆ ಮುಂದುವರಿಕೆ ಆಗುವಂತೆ ಮಾಡಿ, ಅತೃಪ್ತರು ಮನಸ್ಸು ಬದಲಿಸಿ ಸರ್ಕಾರ ಉಳಿಸುತ್ತಾರೋ ಎಂಬ ಭಾವನೆಯನ್ನು ಜೆಡಿಎಸ ಮಟ್ಟಿಗಂತೂ ಬರುವಂತೆ ಮಾಡಿ, ಅವರಿಗಿರುವ ಜೆಡಿಎಸ್ “ಪ್ರೀತಿ’ಯನ್ನೂ ತೋರಿಸಿದರು. ಸರ್ಕಾರ ಪತನವಾದ ಬಳಿಕ ಜೆಡಿಎಸ್ ತಮ್ಮ ಮೇಲೆ ಗೂಬೆ ಕೂರಿಸದಿರಲು ಅವರು ಮಾಡಿರುವ ತಂತ್ರ ಇದೆಂದು ವಿಶ್ಲೇಷಿಸಬಹುದೇ?
* ನವೀನ್ ಅಮ್ಮೆಂಬಳ