ಮುಂಬಯಿ: ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಅವರ ತಂದೆ ಸಲೀಂ ಖಾನ್ (Salim Khan) ಅವರಿಗೆ ಬುರ್ಖಾಧಾರಿ ಮಹಿಳೆ ಹಾಗೂ ವ್ಯಕ್ತಿಯೊಬ್ಬನಿಂದ ಜೀವ ಬೆದರಿಕೆ ಬಂದಿರುವ ಘಟನೆ ನಡೆದಿರುವುದು ವರದಿಯಾಗಿದೆ.
ಇತ್ತೀಚೆಗಷ್ಟೇ ಸಲ್ಮಾನ್ ಖಾನ್ ಅವರ ನಿವಾಸದ ಮೇಲೆ ಕಿಡಿಗೇಡಿಗಳು ಗುಂಡಿನ ದಾಳಿ ನಡೆಸಿದ್ದರು. ಈ ಘಟನೆ ಕುಖ್ಯಾತ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್‍ಗೆ (Lawrence Bishnoi) ಅವರ ಸೂಚನೆಯ ಮೇರೆಗೆ ನಡೆದಿತ್ತು.
ಸಲ್ಮಾನ್ ಖಾನ್ ಅವರ ತಂದೆ ಸಲೀಂ ಖಾನ್ ಅವರು ಬೆಳಗ್ಗೆ ವಾಕಿಂಗ್ ಮಾಡುವ ವೇಳೆ ಅವರಿಗೆ ಬೆದರಿಕೆ ಬಂದಿದೆ. ಸ್ಕೂಟರ್‌ನಲ್ಲಿ ಬಂದ ವ್ಯಕ್ತಿ ಹಾಗೂ ಬುರ್ಖಾಧಾರಿ ಮಹಿಳೆ ವಾಕಿಂಗ್ ಮಾಡಿ ಬೆಂಚ್ ನಲ್ಲಿ ಕೂತಿದ್ದ ಸಲೀಂ ಖಾನ್ ಅವರ ಬಳಿ ಬಂದು “ಲಾರೆನ್ಸ್ ಬಿಷ್ಣೋಯ್ ಅವರನ್ನು ಕರೆಯಬೇಕಾ” ಎಂದು ಬೆದರಿಕೆ ಹಾಕಿ ಪರಾರಿ ಆಗಿದ್ದಾರೆ.
ಬಾಂದ್ರಾದ ವಿಂಡ್‌ಮೇರ್ ಕಟ್ಟಡದ ಬಳಿ ಈ ಘಟನೆ ಸಂಭವಿಸಿದ್ದು, ಸಲೀಂ ಖಾನ್ ಅವರ ಬಾಡಿಗಾರ್ಡ್ ಈ ಸಂಬಂಧ ಪೊಲೀಸರಿಗೆ ಮಾಹಿತಿ ನೀಡಿದ್ದು, ದೂರು ನೀಡಿದ ಬಳಿಕ ಬಳಿಕ ಬಾಂದ್ರಾ ಪೊಲೀಸರು ಸಿಸಿಟಿವಿಯನ್ನು ಪರಿಶೀಲಿಸಿದ್ದಾರೆ.
ಈ ಸಂಬಂಧ ಪೊಲೀಸರು ಸ್ಕೂಟರ್‌ನಲ್ಲಿದ್ದ ಮಹಿಳೆ ಹಾಗೂ ವ್ಯಕ್ತಿಯನ್ನು ಮೊದಲಿಗೆ ವಶಕ್ಕೆ ಪಡೆದು ಆ ಬಳಿಕ ಬಂಧಿಸಿದ್ದಾರೆ. ಈ ಕೃತ್ಯವನ್ನು ತಮಾಷೆಗೆ ಮಾಡಲು ಹೋಗಿದ್ದಾರೆ. ಸಲೀಂ ಖಾನ್ ಅವರಿಗೆ ಜೋಡಿ ಪ್ರಾಂಕ್ ಮಾಡಲು ಹೋಗಿದೆ. ಇವರಿಗೆ ಯಾವುದೇ ಪೂರ್ವ ಕ್ರಿಮಿನಲ್ ದಾಖಲೆಗಳಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಈ ಹಿಂದೆಯೂ ಸಲ್ಮಾನ್ ತಂದೆಗೆ ಜೀವ ಬೆದರಿಕೆವುಳ್ಳ ಪತ್ರವೊಂದು ಬಂದಿತ್ತು.
ಲಾರೆನ್ಸ್ ಈ ಹಿಂದೆ ಸಲ್ಮಾನ್ ಖಾನ್ ಅವರಿಗೆ ಅನೇಕ ಸಲಿ ಬೆದರಿಕೆ ಹಾಕಿದ್ದಾರೆ. ಇತ್ತೀಚೆಗೆ ಅವರ ನಿವಾಸದ ಮೇಲೆ ನಡೆದ ಗುಂಡಿನ ದಾಳಿ ಬಳಿಕ ಸಲ್ಮಾನ್ ಖಾನ್ ಅವರಿಗೆ ಮುಂಬೈ ಪೊಲೀಸರು ವೈ+ ಭದ್ರತೆಯನ್ನು ನೀಡಿದ್ದಾರೆ.