Advertisement

ಆಕಾಶವೇಕೆ ತಲೆ ಮೇಲೆ ಬೀಳಲ್ಲ?

08:15 AM Feb 08, 2018 | Team Udayavani |

ಒಂದೂರಿನಲ್ಲಿ ರಾಜು ಎಂಬ ಮುದ್ದಾದ ಹುಡುಗನಿದ್ದ. ಒಂದು ದಿನ ಅವನ ತಲೆಯಲ್ಲಿ “ಆಕಾಶಕ್ಕೆ ಏಕೆ ಕಂಬಗಳಿಲ್ಲ?’ ಎಂಬ ಪ್ರಶ್ನೆ ಮೂಡಿತು. ಎಲ್ಲಾ ಮನೆಗಳಲ್ಲಿ ಕಂಬಗಳಿವೆ. ಅರಮನೆಗಳಲ್ಲೂ ಕಂಬಗಳಿವೆ. ಆದರೆ ಆಕಾಶ ಹೇಗೆ ನಿಂತಿದೆ? ಎಲ್ಲಿಯೂ ಕಂಬಗಳೇ ಕಾಣಿಸುತ್ತಿಲ್ಲ? ಒಂದು ವೇಲೆ ಆಕಾಶ ತನ್ನ ತಲೆ ಮೇಲೆ ಕುಸಿದು ಬಿದ್ದರೆ ಎಂದು ಭಯವಾಯಿತು. ಅದಕ್ಕೇ ಊರು ಸುರಕ್ಷಿತವಲ್ಲವೆಂದು ಕಾಡಿಗೆ ಹೋದ.

Advertisement

 ಕಾಡಿನಲ್ಲಿ ಎತ್ತರದ, ಬೃಹತ್‌ ಗಾತ್ರದ ಮರಗಳನ್ನು ಕಂಡು ಆಕಾಶ ಬೀಳದಂತೆ ಇವುಗಳೇ ತಡೆದಿರಬೇಕು ಎಂದುಕೊಂಡ. ಅದೇ ಸಮಯಕ್ಕೆ ಮರವೊಂದರ ಕೆಳಗೆ ಸನ್ಯಾಸಿಯೊಬ್ಬ ಧ್ಯಾನ ಮಾಡುತ್ತಿರುವುದನ್ನು ಕಂಡ. ಅವರನ್ನೇ ಕೇಳ್ಳೋಣವೆಂದು ರಾಜು ಸನ್ಯಾಸಿ ಬಳಿಗೆ ಬಂದ. “ಸ್ವಾಮಿ, ಆಕಾಶಕ್ಕೆ ಏಕೆ ಕಂಬಗಳಿಲ್ಲ? ಎಲ್ಲಿಯಾದರೂ ಅದು ಕೆಳಗೆ ಬಿದ್ದರೆ ಸಾಯಬಹುದು ಎಂಬ ಭಯ ನಿಮಗಿಲ್ಲವೆ?’ ಎಂದು ಕೇಳಿದನು.

ರಾಜುವಿನ ಪ್ರಶ್ನೆಗೆ ಸಾಧು ಉತ್ತರಿಸುತ್ತಾ, “ಎಲೈ ಬಾಲಕನೆ, ನೀನು ಕೇಳಿದ ಪ್ರಶ್ನೆ ತುಂಬಾ ಚೆನ್ನಾಗಿದೆ. ಆದರೆ ನಿನ್ನ ಅಭಿಪ್ರಾಯ ತಪ್ಪು. ಆಕಾಶಕ್ಕೆ ಕಂಬಗಳಿಲ್ಲವೆಂದು ಹೇಳಿದವರಾರು? ಕಂಬಗಳಿವೆ, ಆದರೆ ಅದನ್ನು ನೋಡಲು ನಿನ್ನಲ್ಲಿ ದಿವ್ಯದೃಷ್ಟಿ ಇರಬೇಕು.’ ಎಂದನು. ಸನ್ಯಾಸಿಯ ಉತ್ತರ ಕೇಳಿ ರಾಜುವಿಗೆ ಆಶ್ಚರ್ಯವಾಯಿತು. ಆ ದಿವ್ಯದೃಷ್ಟಿಯನ್ನು ಹೊಂದಲು ತಾನೇನು ಮಾಡಬೇಕು ಎಂದು ಕೇಳಿದಾಗ ಸನ್ಯಾಸಿ, “ಮನೆ ಮನೆಗೂ ಹೋಗಿ ದರ್ಪದಿಂದ ಭಿಕ್ಷೆಯನ್ನು ಕೇಳು. ಯಾರಾದರೂ ಭಿಕ್ಷೆ ಹಾಕಿದರೆ ಮಾತ್ರ ನನಗೆ ಹೇಳು’ ಎಂದನು.

ಅದರಂತೆ ರಾಜು ಮನೆ ಮನೆಗೆ ತೆರಳಿ ದರ್ಪದಿಂದ ಮತ್ತು ಒರಟಾಗಿ ಭಿಕ್ಷೆಯನ್ನು ಕೇಳಲು ಪ್ರಾರಂಭ ಮಾಡಿದ. ಹಳ್ಳಿಯ ಜನರೆಲ್ಲಾ ದರ್ಪದಿಂದ ಭಿಕ್ಷೆಯನ್ನು ಕೇಳಿದ್ದಕ್ಕೆ ಭಿಕ್ಷೆಯನ್ನು ನೀಡಲು ನಿರಾಕರಿಸಿದರು. ಅವನ ಹೊಟ್ಟೆ ಚುರುಗುಟ್ಟುತ್ತಿತ್ತು. ಅವನು ದರ್ಪದಿಂದ ಭಿಕ್ಷೆ ಬೇಡುತ್ತಾ ಒಬ್ಬಳು ಗೃಹಿಣಿ ಇರುವ ಮನೆಗೆ ಬಂದ. ಕೂಗಿದರೂ ಯಾರೂ ಬಾರದಿದ್ದುದರಿಂದ ಮುಂದಕ್ಕೆ ಹೋಗಲು ಸಿದ್ಧನಾದ. ಅಷ್ಟರಲ್ಲಿ ಮನೆಯೊಳಗಿಂದ ಒಬ್ಬಳು ಗೃಹಿಣಿ ಬಂದಳು. ರಾಜು ದರ್ಪದಿಂದ ಭಿಕ್ಷೆಯನ್ನು ಕೇಳಿದರೂ ನಿರಾಕರಿಸದೆ ಭಿಕ್ಷೆಯನ್ನು ನೀಡಿದಳು. ಅಲ್ಲದೆ ಕಾಯಿಸಿದ್ದಕ್ಕೆ ಕ್ಷಮೆಯನ್ನೂ ಕೇಳಿದಳು. 

ಬೆಳಗ್ಗಿಂದ ಭಿಕ್ಷೆ ಕೇಳುತ್ತಿದ್ದರೂ ಯಾರೊಬ್ಬರೂ ಭಿಕ್ಷೆ ನೀಡಿರಲಿಲ್ಲ ಆದರೆ ಈ ಮಹಾತಾಯಿಯೊಬ್ಬಳು ಭಿಕ್ಷೆ ನೀಡಿದ್ದು ತುಂಬಾ ವಿಶೇಷವಾಗಿ ಕಂಡಿತು. ಸನ್ಯಾಸಿಯ ಬಲಿ ತೆರಳಿ ಅದನ್ನು ಹೇಳಿದ. ಆಗ ಸನ್ಯಾಸಿ ನುಡಿದ ಅಂಥ ಮಹಾತಾಯಿಯರಿಂದಲೇ ಆಕಾಶ ನಮ್ಮ ತಲೆ ಮೇಲೆ ಬೀಳದೆ ನಿಂತಿರುವುದು, ಕಾಲ ಕಾಲಕ್ಕೆ ಮಳೆ ಬೆಳೆ ಆಗುತ್ತಿರುವುದು’.  ರಾಜುವಿಗೆ ಸನ್ಯಾಸಿಯ ಮಾತಿನ ಮರ್ಮ ಅರ್ಥವಾಯಿತು. ಧನ್ಯನಾದೆ ಗುರುಗಳೇ ಎಂದು ಅವರ ಕಾಲಿಗೆ ಸಾಷ್ಟಾಂಗ ನಮಸ್ಕಾರ ಮಾಡಿದ. 

Advertisement

ವೇದಾವತಿ ಹೆಚ್‌. ಎಸ್‌.
 

Advertisement

Udayavani is now on Telegram. Click here to join our channel and stay updated with the latest news.

Next