Advertisement

ಗುರುತಿನ ಚೀಟಿ ಸಿಕ್ಕಿಲ್ಲವೇ? ಮತಗಟ್ಟೆ ಅಧಿಕಾರಿ ಸಂಪರ್ಕಿಸಿ

07:00 AM Apr 04, 2018 | |

ಬೆಂಗಳೂರು: ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿದ್ದರೆ ಅಗತ್ಯ ಪರಿಶೀಲನೆ ಬಳಿಕ ಚುನಾವಣಾ ಆಯೋಗದ ಅನುಮೋದನೆ ಸಿಕ್ಕ ಬಳಿಕ ಮತದಾರ ಗುರುತಿನ ಚೀಟಿ ಸಿದ್ಧಗೊಳ್ಳುತ್ತದೆ. ಅದನ್ನು ಸಂಬಂಧಪಟ್ಟ ಮತಗಟ್ಟೆ ಅಧಿಕಾರಿ ನಿಮ್ಮ ಮನೆ ಬಾಗಿಲಿಗೆ ತಲುಪಿಸುತ್ತಾರೆ.

Advertisement

ಈಗಲೂ ಗುರುತಿನ ಚೀಟಿ ನಿಮಗೆ ಸಿಗದಿದ್ದರೆ ಕೂಡಲೇ ನಿಮ್ಮ ಮತಗಟ್ಟೆ ಅಧಿಕಾರಿಯನ್ನು ಸಂಪರ್ಕಿಸಬಹುದು. ಗುರುತಿನ ಚೀಟಿ ವಿಚಾರದಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಅಥವಾ ಮಧ್ಯವರ್ತಿಗಳನ್ನು ನೆಚ್ಚಿಕೊಳ್ಳಬೇಡಿ. ಗುರುತಿನ ಚೀಟಿ ಸಿಕ್ಕ ತಕ್ಷಣ ಅದನ್ನು ಸರಿಯಾಗಿ ಪರಿಶೀಲಿಸಿಕೊಳ್ಳಿ. ಏನಾದರೂ ವ್ಯತ್ಯಾಸಗಳಿದ್ದರೆ ತಕ್ಷಣ ಸರಿಪಡಿಸಿಕೊಳ್ಳುವುದು ಅಗತ್ಯ. ಮತದಾನ ನಮ್ಮ ಹಕ್ಕು ಮತ್ತು ಘನತೆ ಅನ್ನುವುದನ್ನು ಮರೆಯಬಾರದು. ಅದೇ ರೀತಿ ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಇರುವ ಬಗ್ಗೆ ಪರೀಕ್ಷಿಸಿಕೊಳ್ಳಬೇಕು. ಇದಕ್ಕಾಗಿ ಮತಗಟ್ಟೆ ಅಧಿಕಾರಿ, ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿರುವ ಮತದಾರರ ಪಟ್ಟಿ, ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಬಳಿ ಇರುವ ಮತದಾರರ ಪಟ್ಟಿಯ ಸಹಾಯ ಪಡೆದುಕೊಳ್ಳಬಹುದು. ಇಲ್ಲದಿದ್ದರೆ
ಚುನಾವಣಾ ಆಯೋಗದ ವೆಬ್‌ಸೈಟ್‌ಗೆ ಹೋಗಿ “ಸರ್ಚ್‌ ಮೈ ನೇಮ್‌ ಇನ್‌ ಓಟರ್‌ ಲಿಸ್ಟ್‌’ ಆಪ್ಷನ್‌ಗೆ ಹೋಗಿ ಮತದಾರರ ಗುರುತಿನ ಚೀಟಿ ಸಂಖ್ಯೆ (ಎಪಿಕ್‌ ನಂಬರ್‌) ಹಾಕಿ ಹೆಸರು ನೋಡಿಕೊಳ್ಳಬೇಕು. ಇಲ್ಲಿ ಮೊಬೈಲ್‌ ನಂಬರ್‌ ಹಾಕಿದರೆ ಹೆಸರು ಹುಡುಕಲು ಸಾಧ್ಯವಿಲ್ಲ.  ಹಾಗಾಗಿ ಕಡ್ಡಾಯವಾಗಿ ಎಪಿಕ್‌ ಸಂಖ್ಯೆ ಬಳಕೆ ಅಗತ್ಯ. ನಿಮ್ಮ ಬಳಿ ಮತದಾರ ಗುರುತಿನ ಚೀಟಿ ಇದ್ದು, ಮತದಾರರ
ಪಟ್ಟಿಯಲ್ಲಿ ಹೆಸರು ಇಲ್ಲದೇ ಹೋದರೆ, ಮತ ಚಲಾಯಿಸಲು ಅವಕಾಶ ಇರುವುದಿಲ್ಲ. ಹಾಗಾಗಿ ಮತದಾರರ ಪಟ್ಟಿಯಲ್ಲಿ ಹೆಸರು ಇರುವುದನ್ನು ಖಾತರಿಪಡಿಸಿಕೊಳ್ಳಬೇಕು.

ಎಸ್‌ಎಂಎಸ್‌ ಮಾಡಿ ಮತಗಟ್ಟೆ ತಿಳಿಯಿರಿ.. 
ಮತದಾರರ ಗುರುತಿನ ಚೀಟಿಯೂ ಇದೆ. ಮತದಾರರ ಪಟ್ಟಿಯಲ್ಲಿ ಹೆಸರೂ ಇದೆ. ಇನ್ನೇನು ಓಟ್‌ ಮಾಡಬೇಕಷ್ಟೇ. ಆದರೆ, ಮತ ಚಲಾಯಿಸುವ ವಿಧಾನಸಭಾ ಕ್ಷೇತ್ರ ಯಾವುದು, ಮತಗಟ್ಟೆ ಎಲ್ಲಿದೆ ಎಂದು ಗೊತ್ತಿಲ್ಲದಿದ್ದರೆ, ಆತಂಕಬೇಡ. ಎಪಿಕ್‌ ನಂಬರ್‌ ಹಾಕಿ 9731979899 ಮೊಬೈಲ್‌ ನಂಬರ್‌ಗೆ ಎಸ್‌ಎಂಎಸ್‌ ಮಾಡಿದರೆ, ನಿಮ್ಮ ವಿಧಾನಸಭಾ ಕ್ಷೇತ್ರ ಯಾವುದು, ನಿಮ್ಮ ಮತಗಟ್ಟೆ ಎಲ್ಲಿದೆ ಅನ್ನುವುದನ್ನು ತಿಳಿದುಕೊಳ್ಳಬಹುದು.

ಉದಯವಾಣಿ ಕಾಳಜಿ
ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿದ್ದರೂ ಗುರುತಿನ ಚೀಟಿ ಸಿಗದಿದ್ದರೆ ಕೂಡಲೇ ಮತಗಟ್ಟೆ ಅಧಿಕಾರಿಯನ್ನು ಸಂಪರ್ಕಿಸಬಹುದು. ಗುರುತಿನ ಚೀಟಿಯಲ್ಲಿ ಏನಾದರೂ ದೋಷಗಳಿದ್ದರೆ ತಕ್ಷಣ ಸರಿಪಡಿಸಿಕೊಳ್ಳಬೇಕು. ಮತದಾನ ನಮ್ಮ ಹಕ್ಕು
ಎಂಬುದನ್ನು ಮರೆಯಬಾರದು.

Advertisement

Udayavani is now on Telegram. Click here to join our channel and stay updated with the latest news.

Next