ಹೈದರಾಬಾದ್: ನಟಿ ಸಮಂತಾ – ವಿಜಯ್ ದೇವರಕೊಂಡ ಅಭಿನಯದ ʼಖುಷಿʼ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಇದೇ ಸೆ. 1ರಂದು ಪ್ಯಾನ್ ಇಂಡಿಯಾ ಸಿನಿಮಾ ರಿಲೀಸ್ ಆಗಲಿದೆ.
ಈಗಾಗಲೇ ʼಖುಷಿʼ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಸದ್ದು ಮಾಡುತ್ತಿದೆ. ಸಮಂತಾ – ದೇವರಕೊಂಡ ಅವರ ಕೆಮೆಸ್ಟ್ರಿ ಟ್ರೇಲರ್ ನಲ್ಲಿ ಗಮನ ಸೆಳೆಯುತ್ತದೆ.
ನಟ ನಾಗಚೈತನ್ಯ ಹಾಗೂ ಸಮಂತಾ ಅವರು ದಾಂಪತ್ಯ ಜೀವನಕ್ಕೆ ವಿಚ್ಚೇದನ ನೀಡಿ ತಮ್ಮ ತಮ್ಮ ವೃತ್ತಿ ಬದುಕಿನಲ್ಲಿ ಬ್ಯುಸಿಯಾಗಿರುವುದು ಗೊತ್ತೇ ಇದೆ. ಇತ್ತೀಚೆಗೆ ನಾಗಚೈತನ್ಯ ಅವರು ಮಾಜಿ ಪತ್ನಿ ಸಮಂತಾ ಅವರ ʼಖುಷಿʼ ಸಿನಿಮಾದ ಟ್ರೇಲರ್ ನೋಡಿ ಅರ್ಧದಲ್ಲೇ ಥಿಯೇಟರ್ ನಿಂದ ಹೊರಗೆ ಹೋಗಿದ್ದಾರೆ ಎಂದು ಕೆಲ ಟಾಲಿವುಡ್ ಸಿನಿಮಾ ಸೈಟ್ ಗಳು ವರದಿ ಮಾಡಿವೆ.
ಹೈದರಾಬಾದ್ ನಲ್ಲಿ ಇತ್ತೀಚೆಗೆ ʼಬಾಯ್ಸ್ ಹಾಸ್ಟೆಲ್ʼ ಸಿನಿಮಾ ನೋಡಲು ಥಿಯೇಟರ್ ವೊಂದಕ್ಕೆ ನಾಗಚೈತನ್ಯ ತೆರಳಿದ್ದರು. ಸಿನಿಮಾದ ವಿರಾಮದ ಅವಧಿಯಲ್ಲಿ ಸಮಂತಾ ಅವರ ʼಖುಷಿʼ ಸಿನಿಮಾದ ಟ್ರೇಲರ್ ಪ್ರಸಾರವಾಗಿದೆ. ಈ ವೇಳೆ ನಾಗಚೈತನ್ಯ ಥಿಯೇಟರ್ ನಿಂದ ಎದ್ದು ಹೊರ ನಡೆದಿದ್ದಾರೆ ಎಂದು ಕೆಲ ವೆಬ್ ಸೈಟ್ ಗಳು ವರದಿ ಮಾಡಿವೆ.
ಇದೀಗ ಈ ವೈರಲ್ ಸುದ್ದಿಗೆ ಸ್ವತಃ ನಾಗಚೈತನ್ಯ ಅವರೇ ಸ್ಪಷ್ಟನೆ ನೀಡಿದ್ದಾರೆ. “ಇದು ಸಂಪೂರ್ಣ ಸುಳ್ಳು ಸುದ್ದಿಯಾಗಿದೆ. ಕೆಲ ತೆಲುಗು ವೆಬ್‌ಸೈಟ್ ಈ ವದಂತಿಯನ್ನು ಹಬ್ಬಿಸಿದೆ. ಸುಳ್ಳು ವಿಷಯವನ್ನು ಬರೆದ ಲೇಖನವನ್ನು ಸರಿಪಡಿಸಲು ನಾನು ಈಗಾಗಲೇ ಅವರಿಗೆ ಮನವಿ ಮಾಡಿದ್ದೇನೆ, ”ಎಂದು ʼಟೈಮ್ಸ್ ನೌʼಗೆ ನಟ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ನಾಗ ಚೈತನ್ಯ ಮತ್ತು ಸಮಂತಾ ಒಂದು ‘ಯೇ ಮಾಯಾ ಚೇಸಾವೆ’ ಸೆಟ್‌ನಲ್ಲಿ ಭೇಟಿಯಾಗಿದ್ದರು. ಆ ಬಳಿಕ ಪ್ರೀತಿಸಿ 2017 ರಲ್ಲಿ ವಿವಾಹವಾಗಿದ್ದರು. ನಾಲ್ಕು ವರ್ಷ ದಾಂಪತ್ಯ ಜೀವನ ನಡೆಸಿ ಬಳಿಕ ವಿಚ್ಚೇದನ ನೀಡಿದರು.