ಬೆಂಗಳೂರು: ಚುನಾವಣಾ ರಾಜಕಾರಣದಿಂದ ನಿವೃತ್ತಿ ಘೋಷಣೆ ಮಾಡಿದ್ದರೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಪ್ರಧಾನಿ ನರೇಂದ್ರ ಮೋದಿ ಮತ್ತೆ ಹೊಗಳಿರುವುದು ಈಗ ರಾಜಕೀಯ ವಲಯದಲ್ಲಿ ಅದರಲ್ಲೂ ಮುಖ್ಯವಾಗಿ ಬಿಜೆಪಿಯಲ್ಲಿ ತೀವ್ರ ಅಚ್ಚರಿಗೆ ಕಾರಣವಾಗಿದೆ.
ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೆ ಆಗಮಿಸಿದ್ದ ಪ್ರಧಾನಿ ಮೋದಿ ಈ ವೇದಿಕೆಯಲ್ಲಿ ಯಡಿಯೂರಪ್ಪ ಅವರ ಸಾಧನೆಯನ್ನು ಶ್ಲಾಘಿಸಿದ್ದಾರೆ. ಯಡಿಯೂರಪ್ಪ ಅವರ ರಾಜಕೀಯ ಕರ್ಮಭೂಮಿಯಲ್ಲಿ ಆಡಿದ ಈ ಹೊಗಳಿಕೆಯ ಮಾತುಗಳು ಚುನಾವಣಾ ಹೊತ್ತಿನಲ್ಲಿ ಪ್ರಬಲ ವೀರಶೈವ- ಲಿಂಗಾಯತ ಸಮುದಾಯಕ್ಕೆ ಬೇರೆಯದೇ ಆದ ಸಂದೇಶ ಕಳುಹಿಸಿದೆ. ಈ ಚುನಾವಣೆಯಲ್ಲೂ ಯಡಿಯೂರಪ್ಪ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಅವರನ್ನು ಪಕ್ಕಕ್ಕಿಟ್ಟು ‘ಬಿಜೆಪಿಯ ಚುನಾವಣಾ ರಾಜಕೀಯ’ ಇಲ್ಲ ಎಂಬ ಸಂದೇಶ ರವಾನಿಸಲಾಗಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಇದನ್ನೂ ಓದಿ:ಬಾಲಿವುಡ್ ನಲ್ಲಿ ʼಕಿಲಾಡಿʼ ಅಕ್ಷಯ್ ಸಿನಿಮಾಗಳು ಸತತ ಸೋಲು: ಕೊನೆಗೂ ಮೌನ ಮುರಿದ ನಟ
“ಯಡಿಯೂರಪ್ಪ ಚುನಾವಣೆ ಬಿಟ್ಟರೂ ಚುನಾವಣೆ ಯಡಿಯೂರಪ್ಪನವರನ್ನು ಬಿಡದು” ಎಂಬ ಸ್ಥಿತಿಯನ್ನು ಬಿಜೆಪಿ ವರಿಷ್ಠರು ನಿರ್ಮಿಸಿದ್ದು, ಟಿಕೆಟ್ ಹಂಚಿಕೆ ಸೇರಿದಂತೆ ಪ್ರಮುಖ ನಿರ್ಧಾರಗಳಲ್ಲಿ ಯಡಿಯೂರಪ್ಪ ತುಸು ಹಿಡಿತ ಸಾಧಿಸುವುದು ಬಹುತೇಕ ನಿಶ್ಚಿತ ಎಂದೇ ಹೇಳಲಾಗುತ್ತಿದೆ.
ಇದೆಲ್ಲಕ್ಕಿಂತ ಮುಖ್ಯವಾಗಿ ತಮ್ಮ ಪುತ್ರ ವಿಜಯೇಂದ್ರ ಅವರನ್ನು ರಾಜಕೀಯವಾಗಿ ಮುನ್ನೆಲೆಗೆ ತರುವುದಕ್ಕೂ ಯಡಿಯೂರಪ್ಪನವರಿಗೆ ಈ ವೇದಿಕೆ ಅವಕಾಶ ನೀಡಿದ್ದು, ಶಿಕಾರಿಪುರದಲ್ಲಿ ತಮ್ಮ ಉತ್ತರಾಧಿಕಾರಿ ವಿಜಯೇಂದ್ರ ಎಂದು ಈಗಾಗಲೇ ಮಾಡಿರುವ ಘೋಷಣೆಗೆ ವರಿಷ್ಢರ ಸಮ್ಮತಿ ಮುದ್ರೆ ಗಿಟ್ಟಿಸಲು ಯಡಿಯೂರಪ್ಪ ಬಹುತೇಕ ಯಶಸ್ವಿಯಾಗಿದ್ದಾರೆ ಎನ್ನಬಹುದು.