Advertisement
ಆದಾಯದ ಅಸಮಾನತೆಯನ್ನು ತೆಗೆದುಕೊಂಡರೆ ಭಾರತಕ್ಕಿಂತ ನಿಕೃಷ್ಟ ಅವಸ್ಥೆಯಲ್ಲಿರುವ ದೇಶಗಳೆಂದರೆ ಉಕ್ರೇನ್, ಇಥಿಯೋ ಪಿಯಾ, ಕಾಂಗೋ ಮತ್ತು ಬುರಂಡಿ. ಹಾಗೆಯೇ ಕಡಿಮೆ ಅಸಮಾನತೆಯಲ್ಲಿರುವ ದೇಶಗಳೆಂದರೆ ಐಸ್‌ಲ್ಯಾಂಡ್, ಆಸ್ಟ್ರೇಲಿಯಾ, ಸ್ವಿಜರ್‌ಲ್ಯಾಂಡ್, ಬೆಲ್ಜಿಯಂ ಮತ್ತು ಲಕ್ಸಂಬರ್ಗ್.
Related Articles
Advertisement
ಸಾಮಾನ್ಯವಾಗಿ ಅವಕಾಶವುಳ್ಳವರು ತಮ್ಮಲ್ಲಿರುವ ಸಂಪತ್ತನ್ನು ಉಪಯೋಗಿಸಿ ದೇಶದಲ್ಲಿ ಸಾಕಷ್ಟು ಹಣ, ಆಸ್ತಿಪಾಸ್ತಿ ಮತ್ತು ಇತರೆ ಸಂಪತ್ತನ್ನು ಗಳಿಸಿ ಇನ್ನಷ್ಟು ಶ್ರೀಮಂತರಾದರೆ ಉಳಿದವರು ಇದ್ದುದರಲ್ಲಿಯೇ ತೃಪ್ತಿ ಪಡುವರು. ಇಲ್ಲವೆ ಇನ್ನಷ್ಟು ಬಡವರಾಗುವರು.
ಎರಡನೆಯದಾಗಿ, ತೆರಿಗೆಯಿಂದ ತಪ್ಪಿಸಿಕೊಳ್ಳುವ ಪ್ರಕ್ರಿಯೆ. ನಮ್ಮಲ್ಲಿ ತೆರಿಗೆಯ ವಿಷಯದ ಕುರಿತೇ ಒಂದು ಗಾದೆ ಇದೆ- ಅದೇನೆಂದರೆ, ಪ್ರಾಮಾಣಿಕತೆಗೆ ತೆರಿಗೆಯ ದಂಡ, ಆದರೆ ಅಪ್ರಾಮಾಣಿಕತೆಗೆ ಬಹುಮಾನದ ಪುಂಜ. ಹೌದು ನಮ್ಮ ದೇಶದಲ್ಲಿ ಬಹಳಷ್ಟು ಸ್ವಯಂ ಉದ್ಯೋಗ ಮಾಡುವವರು ಸರಕಾರಕ್ಕೆ ಸರಿಯಾದ ಗಳಿಕೆಯ ಮಾಹಿತಿ ನೀಡುವುದೇ ಇಲ್ಲ. ಅದರಿಂದಾಗಿ ಅಂಥವರ ಸಂಪತ್ತು ಗೊತ್ತಿಲ್ಲದೆ ವೃದ್ಧಿಯಾಗುತ್ತಲೇ ಇದೆ. ಅದೇ ಸರಕಾರಿ ನೌಕರನಿದ್ದರೆ ಅವರ ವೇತನದ ಸರಿಯಾದ ಲೆಕ್ಕ ಸರಕಾರಕ್ಕೆ ಸಿಗುವುದರಿಂದ, ತೆರಿಗೆಯನ್ನು ವೇತನ ಬಟವಾಡೆ ಮಾಡುವಾಗಲೇ ಮುರಿದುಕೊಳ್ಳುತ್ತದೆ. ಹಾಗೆಯೇ, ಹಿನ್ನಡೆಯ ತೆರಿಗೆ. ಅಂದರೆ ಸರಕಾರ ಸರಕು ಹಾಗೂ ಸೇವೆಗಳ ಮೇಲೆ ಹೇರುವ ತೆರಿಗೆಯ ಭಾರ ಶ್ರೀಮಂತರಿಗಿಂತ ಬಡವರ ಮೇಲೆಯೇ ಹೆಚ್ಚಿಗೆ ಬೀಳುತ್ತದೆ.
ಉದಾ: ಸರಕಾರ ಯಾವುದೇ ಸರಕಿನ ಮೇಲೆ ಶೇ.10ರಷ್ಟು ತೆರಿಗೆ ಹೇರಿದರೆ ತಿಂಗಳಿಗೆ ರೂಪಾಯಿ ಇಪ್ಪತ್ತು ಸಾವಿರ ಗಳಿಸುವವನು ರೂ 2000 ಕೊಟ್ಟರೆ, ತಿಂಗಳಿಗೆ ರೂ. 2000 ಗಳಿಸುವವನು ತೆರಿಗೆಯೆಂದು ರೂ.200 ಕೊಡಬೇಕು. ಇಲ್ಲಿ ತೆರಿಗೆಯ ಭಾರ ಹೆಚ್ಚಿನ ಆದಾಯದವರಿಗೆ ಹೋಲಿಸಿದರೆ ಕಡಿಮೆ ಆದಾಯದವರಿಗೆ ಜಾಸ್ತಿ ಅಂತ ಆಗಲಿಲ್ಲವೆ?
ಅಂದರೆ, ಮೊದಲನೆಯವನಿಗೆ ಅದು ಅಷ್ಟಾಗಿ ನೋವಾಗುವುದಿಲ್ಲ. ಎರಡನೆಯವನಿಗೆ ಅದು ನೋವುಂಟು ಮಾಡುತ್ತದೆ. ಅದರಂತೆ ಹಣದುಬ್ಬರದ ಸಮಸ್ಯೆ ಕೂಡ ಕಾಣದ ರಾಕ್ಷಸನಂತೆ ಕೆಲಸ ಮಾಡುತ್ತದೆ. ಕಾರಣ ಬೆಲೆ ಏರಿದ ಹಾಗೆ ಹಣದ ಮೌಲ್ಯ ಕುಸಿಯುವುದರಿಂದ ಕೊಂಡು ಕೊಳ್ಳುವ ಶಕ್ತಿ ಕ್ಷೀಣಿಸುತ್ತದೆ. ಹೀಗಾಗಿ ಬಡತನದ ಬವಣೆ ಇನ್ನಷ್ಟು ವಿಸ್ತಾರಗೊಳ್ಳುವುದು. ಯಾಕೆಂದರೆ ಅಸಂಘಟಿತ ವರ್ಗದವರ ಕೂಲಿದರ ಹೆಚ್ಚಾಗುವುದಿಲ್ಲ. ಆದರೆ ಉದ್ಯೋಗಪತಿಗಳ ಲಾಭ ಹೆಚ್ಚುವುದರಿಂದ ಮತ್ತು ಸಂಘಟಿತ ವಲಯದ ಕೆಲಸಗಾರರ ತುಟ್ಟಿಭತ್ಯೆ ಹೆಚ್ಚಿಸುವುದರಿಂದ ಆದಾಯದ ಅಸಮಾನತೆ ಇನ್ನಷ್ಟು ಹೆಚ್ಚುತ್ತಿದೆ. ಅದರಂತೆಯೆ 60 ರ ದಶಕದ ನಂತರ ಯೋಜಿಸಿ ಕೈಗೊಂಡ ಹೊಸ ಕೃಷಿ ಸಾಗುವಳಿ ಪದ್ಧತಿ. ಬಹಳಷ್ಟು ದೊಡ್ಡ ರೈತರು ಹೊಸ ಕೃಷಿ ಪದ್ಧತಿ ಅಳವಡಿಸಿಕೊಂಡು ಹೆಚ್ಚಿನ ಲಾಭ ಪಡೆಯುತ್ತಿದ್ದರೆ ಸಣ್ಣ ಹಾಗೂ ಅತಿ ಸಣ್ಣ ರೈತರು ಅವರ ಜತೆಗೆ ಸ್ಪರ್ಧಿಸಲಾಗದೆ ಹಿಂದೇಟು ಹಾಕುತ್ತಿದ್ದಾರೆ.
ಅಷ್ಟೇ ಏಕೆ, ಕೆಲವರು ಸಾಗುವಳಿಯನ್ನೇ ಬಿಟ್ಟು ಬಿಟ್ಟಿದ್ದಾರೆ. ಇದರಿಂದಾಗಿ ಗ್ರಾಮೀಣ ಭಾಗದಲ್ಲಿ ಆದಾಯದ ಅಸಮಾನತೆ ಇನ್ನಷ್ಟು ವೃದ್ಧಿಯಾಗಿದೆ. ಕೆಲವು ತಜ್ಞರ ಅಭಿಪ್ರಾಯದಂತೆ 90ರ ದಶಕದಲ್ಲಿ ಪಾಸುಮಾಡಿ ಅನುಷ್ಠಾನಕ್ಕೆ ತಂದ ಆರ್ಥಿಕ ನೀತಿಗಳ ದುಷ್ಪರಿಣಾಮ ಇದಾಗಿದೆ.
ಆದಿಯಿಂದಲೂ ಸರಕಾರಗಳು ಈ ಸಮಸ್ಯೆಯ ಪರಿಹಾರಕ್ಕೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದರೂ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದೆ. ಮುಂದೆಯಾದರೂ ಈ ಸಮಸ್ಯೆ ಪರಿಹಾರವಾಗಬೇಕಾದಲ್ಲಿ ಸರಕಾರ ಪ್ರಗತಿಪರ ತೆರಿಗೆ ನೀತಿಯನ್ನು ದೇಶದಾದ್ಯಂತ ಅನ್ವಯವಾಗುವಂತೆ ಪಾಸುಮಾಡಬೇಕು. ಅಂದರೆ ಹೆಚ್ಚಿನ ಆದಾಯದಾರರಿಗೆ ಅತಿ ಹೆಚ್ಚು ತೆರಿಗೆಯನ್ನು ವಿಧಿಸಬೇಕು. ಅದರಂತೆಯೆ ಕಪ್ಪು ಹಣದವರ ದಾಖಲೆಯನ್ನು ಸ್ವಿಸ್ ಬ್ಯಾಂಕಿನಿಂದ ಪಡೆದು ಅವರ ಹಣವನ್ನು ಮುಟ್ಟುಗೋಲು ಹಾಕಿಸಬೇಕು. ಇಲ್ಲವೆ ಆ ಹಣದ ಅರ್ಧದಷ್ಟನ್ನು ತೆರಿಗೆ ರೂಪದಲ್ಲಿ ಪಡೆಯಬೇಕು. ಅದರಂತೆಯೇ ಆರ್ಥಿಕ ಅಭಿವೃದ್ಧಿಯ ದರವನ್ನು ಶೇ.10ರಷ್ಟಾದರು ಹೆಚ್ಚಿಸಬೇಕು. ನನ್ನ ದೃಷ್ಟಿಯಲ್ಲಿ ಆದಾಯ ತೆರಿಗೆಯ ಜತೆಗೆ ಹೆಚ್ಚಿನ ಆದಾಯದವರಿಗೆ ಅನ್ವಯವಾಗುವಂತೆ ವೆಚ್ಚದ ತೆರಿಗೆಯನ್ನು ಖರೀದಿಸುವ ಸರಕು ಹಾಗೂ ಸೇವೆಗಳ ಗುಣಮಟ್ಟಕ್ಕನುಗುಣವಾಗಿ ಹೇರಲೇಬೇಕು. ಹಾಗೆಯೇ ದೇಶದ ಪ್ರತಿಯೋರ್ವ ನಾಗರಿಕರಿಗೂ ಸಂಪೂರ್ಣ ಉಚಿತ ಆರೋಗ್ಯ ಸೇವಾ ವ್ಯವಸ್ಥೆ ಪರಿಣಾಮಕಾರಿಯಾಗಿ ಜಾರಿಯಾಗಬೇಕು.
– ಡಾ.ಎಸ್.ಡಿ.ನಾಯ್ಕ, ಕಾರವಾರ