Advertisement

Karnataka BJPಯಲ್ಲಿ ಸರ್ವಾಧಿಕಾರಿ ಧೋರಣೆ ಕೊನೆಗೊಳ್ಳಬೇಕು: ರೇಣುಕಾಚಾರ್ಯ

07:04 PM Oct 24, 2023 | Team Udayavani |

ದಾವಣಗೆರೆ: ರಾಜ್ಯ ಬಿಜೆಪಿಯಲ್ಲಿ ಕೆಲವರು ನಡೆಸುತ್ತಿರುವ ಸರ್ವಾಧಿಕಾರಿ ಧೋರಣೆ ಕೊನೆಗೊಳ್ಳಬೇಕು ಎಂದು ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಒತ್ತಾಯಿಸಿದ್ದಾರೆ.

Advertisement

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಏನಾದರೂ ಮಾತನಾಡಿದರೆ ಪಕ್ಷ ವಿರೋಧಿ ಹೇಳಿಕೆ. ಅವರು ಮಾತನಾಡಿದರೆ ಪಕ್ಷ ಸಂಘಟನೆ. ಎಂಎಲ್‌ಸಿ, ರಾಜ್ಯಸಭೆ ಸದಸ್ಯತ್ವ ಅವರು ಹೇಳಿದವರಿಗೆ ಮಾತ್ರ. ಅವರ ಒಳ ಹೊಡೆತದ ಬಗ್ಗೆ ಹೇಳುವಂತೆಯೇ ಇಲ್ಲ ಎನ್ನುವ ಮೂಲಕ ಪರೋಕ್ಷವಾಗಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ವಿರುದ್ಧ ಹರಿಹಾಯ್ದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಪಕ್ಷದ ರಾಜ್ಯ ಅಧ್ಯಕ್ಷರನ್ನಾಗಿ ಮಾಡುವ ಚಿಂತನೆ ನಡೆಯುತ್ತಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಹೈಕಮಾಂಡ್ ಏನು ತೀರ್ಮಾನ ಮಾಡುತ್ತದೆಯೋ ಕಾದು ನೋಡೋಣ. ನಾನು ಸಹ ರಾಜ್ಯ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಆಗಿದ್ದೆ ಎಂದು ತಿಳಿಸಿದರು.

ಒಟ್ಟಾರೆ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿ ಆಗಬೇಕು. ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪಕ್ಷ ಕಟ್ಟಿ ಬೆಳೆಸಿದವರು. ಯಡಿಯೂರಪ್ಪ ಅವರಂತಹ ಜಾತ್ಯತೀತ, ಸಮರ್ಥ ನಾಯಕ ಬೇಕು. ಯಡಿಯೂರಪ್ಪ ಹೊರಟರೆ ಅವರ ಹಿಂದೆ ಲಕ್ಷಾಂತರ ಜನ ಕಾರ್ಯಕರ್ತರ ನಿಲ್ಲುತ್ತಾರೆ. ಹಾಗಾಗಿ ವಿಜಯ ದಶಮಿ ದಿನದಂದು ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲೇ ಚುನಾವಣೆಗೆ ಹೋಗುವುದು ಸೂಕ್ತ ಎಂದು ಹೇಳುತ್ತಿದ್ದೇನೆ ಎಂದರು.

ಯಡಿಯೂರಪ್ಪ ಅವರು ಎಲ್ಲ ಸಮುದಾಯದವರಿಗೆ ಅವಕಾಶ ಕೊಟ್ಟರು. ಯಡಿಯೂರಪ್ಪರಂತಹ ಸದೃಢ ನಾಯಕರು ಬೇಕು. ಯಡಿಯೂರಪ್ಪ ಅವರನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡುವುದು ಬೇಡ ಎಂದು ಸಾಕಷ್ಟು ಒತ್ತಡ ಹಾಕಿದ್ದರೂ ಕೆಲ ನಾಯಕರು ಯಡಿಯೂರಪ್ಪ ಅವರನ್ನ ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ್ದರು ಎಂದು ತಿಳಿಸಿದರು.

ಬೂತ್ ಮಟ್ಟದಿಂದ ಪಕ್ಷದ ಸಂಘಟನೆ ಆಗಬೇಕು. ಕಳೆದ ರಾಜ್ಯ ವಿಧಾನ ಸಭಾಚುನಾವಣೆಯಲ್ಲಿ ಹೊಸ ಮುಖ ಗಳಿಗೆ ನೀಡಲಾಯಿತು. ಹಳಬರ ಕಾಲುಗಳಿಗೆ ಬಿದ್ದು ಮತ ಕೇಳಲು ಹೋಗಿರಲಿಲ್ಲ. ಒಳಮೀಸಲಾತಿ ಅವಶ್ಯಕತೆ ಏನಿತ್ತು. ಒಳ ಮೀಸಲಾತಿ ಬಗ್ಗೆ ಎಲ್ಲವನ್ನೂ ವರ್ಷದ ಮುನ್ನ ಹೇಳಬೇಕಿತ್ತು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಆಗಬೇಕಿತ್ತು. ಚುನಾವಣೆ ಒಂದು ವಾರದಲ್ಲಿ ಇದ್ದಾಗ ಮಾಡಿದರು ಎಂದು ಬೇಸರ ವ್ಯಕ್ತಪಡಿಸಿದರು.

Advertisement

ಹಾದಿಯಲ್ಲಿ ಬೀದಿಯಲ್ಲಿ ಹೋಗುವವರಿಗೆ ನಾನೇಕೆ ಉತ್ತರ ಕೊಡಲಿ ಎನ್ನುವ ಮೂಲಕ ಮತ್ತೆ ಸಂಸದರ ಮೇಲೆ ಮುಗಿಬಿದ್ದ ರೇಣುಕಾಚಾರ್ಯ. ಸಿದ್ದೇಶ್ವರ ಅವರ ಬಗ್ಗೆ ನನಗೆ ಗೌರವವಿದೆ ,ಅವರಿಗಿಂತ ನಾನು ಪಕ್ಷದಲ್ಲಿ ಸೀನಿಯರ್. ಅವರು ವಯಸ್ಸಿನಲ್ಲಿ ಸೀನಿಯರ್ ಆಗಿರಬಹುದು. ಆದರೆ, ನಾನು ಪಕ್ಷದಲ್ಲಿ ಸೀನಿಯರ್.ಪಕ್ಷಕ್ಕಾಗಿ ಎರಡು ಬಾರಿ ಜೈಲಿಗೆ ಹೋಗಿ ಬಂದಿದ್ದೇನೆ. ನನ್ನ ರಕ್ತದ ಪ್ರತಿ ಕಣದಲ್ಲೂ ಹಿಂದೂತ್ವ ಇದೆ. ರೇಣುಕಾ ಚಾರ್ಯ ಮಾತನಾಡಿದರೆ ಪಕ್ಷ ದ್ರೋಹ, ಕೆಲವರು ಮಾತನಾಡಿದ್ದು ಪಕ್ಷ ದ್ರೋಹ ಅಲ್ಲ ಎಂದು ಪ್ರಶ್ನೆ ಯೊಂದಕ್ಕೆ ಉತ್ತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next