Advertisement
ಬೆಂಗಳೂರಿನಿಂದ ಹೊರಟು, ಅಮೆರಿಕದ ಷಿಕಾಗೋ ವಿಮಾನ ನಿಲ್ದಾಣದಲ್ಲಿ ಇಳಿದು, ನಾನು ಸೀದಾ ಬಂದು ನಿಂತಿದ್ದು ಬ್ಲೂಮಿಂಗಡೇಲ್ ಎಂಬ ಊರಿನಲ್ಲಿ. ಕಾರನ್ನು ಪಾರ್ಕ್ ಮಾಡುವಾಗ, ‘ಇದೇ ದೇವಸ್ಥಾನ ನೋಡಿ’ ಎಂದು ತೋರಿಸಿದಾಗ ತಲೆ ಎತ್ತಿ ನೋಡಿದ್ದೆ. ದೊಡ್ಡದಾದ ಮನೆಯಂತೆ ಇದ್ದ ಬಿಲ್ಡಿಂಗ್ ನನ್ನೆದುರಿಗೆ ಇತ್ತು. ಅದಕ್ಕೆ ಗೋಪುರವಿಲ್ಲ, ಧ್ವಜ ಕಂಭವಿಲ್ಲ, ಶಿಲ್ಪ ಕೆತ್ತನೆಗಳಿಲ್ಲ, ದೊಡ್ಡದಾದ ಹೆಬ್ಟಾಗಿಲಂತೂ ಇಲ್ಲವೇ ಇಲ್ಲ.
Related Articles
Advertisement
ನಾನು ಉಳಿದಿರುವ ದೇವಸ್ಥಾನ, ಪಕ್ಕಾ ಉತ್ತರ ಭಾರತದ ಶೈಲಿಯದ್ದು. ಟೆಂಪಲ್ ಹೇಗಿದೆ? ಒಳಗೆ ಏನಿದೆ?- ಈ ಕುತೂಹಲದಿಂದಲೇ, ಸ್ಥಳೀಯ ಅಮೆರಿಕನ್ನರು ಇಲ್ಲಿಗೆ ಬರುತ್ತಾರೆ. “ಅರ್ಚಕರೇ, ನೀವು ಇನ್ನು ಕೆಲವೇ ತಿಂಗಳು… ಹಿಂದಿ, ಗುಜರಾತಿ, ಪಂಜಾಬಿ, ನೇಪಾಳಿ ಭಾಷೆಗಳನ್ನೆಲ್ಲಾ ಕಲೀತೀರಾ’ ಅಂತ ಹೇಳಿದಾಗ, ನಾನು ತಮಾಷೆ ಮಾಡಿದ್ದೆ: “ಸ್ವಾಮಿ, ಈ ಎಲ್ಲಾ ಭಾಷೆಗಳನ್ನು ಕಲೀತೀನೋ ಇಲ್ವೋ… ಈ ಎಲ್ಲಾ ಜನರ ಊಟದ ಸವಿಯನ್ನು ಮಾತ್ರ ಖಂಡಿತಾ ನೋಡ್ತೇನೆ’ ಎಂದು! ಅಂದಹಾಗೆ, ಈ ಭಾಷಿಗರೇ ಇಲ್ಲಿ ನಮ್ಮ ದೇಗುಲದ ಭಕ್ತರು.
ಪೂಜೆಗೆ ಕೂರಿಸುವುದೇ ಸಾಹಸ: ಸರಳತೆ ಹಾಗೂ ಸ್ವತ್ಛತೆ ಇಲ್ಲಿಯ ಪೂಜೆಯ ವಿಶೇಷ. ಭಾರತದಲ್ಲಿ ಎರಡು ಮೂರು ತಾಸು ಆರಾಮಾಗಿ ಯಜಮಾನನನ್ನು ಕುಳ್ಳಿರಿಸಿಕೊಳ್ಳುತ್ತಿದ್ದ ನನಗೆ, ಇಲ್ಲಿ ಒಂದು ತಾಸು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುವುದೇ ಒಂದು ತಪಸ್ಸು. ಪೂಜೆ ಆರಂಭ ಆಗುವ ಮೊದಲೇ ಸಮಯ ಎಲ್ಲಾ ನಿರ್ಧರಿಸಿಕೊಂಡೇ ಪೂಜೆಗೆ ಕುಳಿತುಕೊಳ್ಳುತ್ತಾರೆ. ಆದ್ದರಿಂದ, ಪೂಜೆಯನ್ನು ಸರಳವಾಗಿ ಮುಗಿಸುವುದು ನಮ್ಮ ಕರ್ತವ್ಯವಲ್ಲದೇ, ಇಲ್ಲಿಯ ಭಕ್ತರಿಗೆ ಖುಷಿಕೊಡುವ ದಾರಿಯೂ ಆಗಿದೆ.
ಅಗ್ನಿ ಇಲ್ಲದೆ ಪೂಜೆಯುಂಟೆ?: ಪೂಜೆ, ಹೋಮದ ವಿಧಿ- ವಿಧಾನಗಳೇ ನನಗೆ ಮೊದಮೊದಲು ವಿಚಿತ್ರವೆನಿಸಿತ್ತು. ಪೂಜೆಗೆ ಬೇಕಾದ ಸಾಮಗ್ರಿಗಳ ದೊಡ್ಡ ಪಟ್ಟಿಯೇ ಇಲ್ಲ. ಹೋಮಗಳನ್ನೆಲ್ಲ ಲಗುಬಗೆಯಲ್ಲಿ ಮುಗಿಸುವ ಅನಿವಾರ್ಯತೆ. ಏಕೆಂದರೆ, ಇಲ್ಲಿ ಹೆಚ್ಚು ಹೊಗೆ ಆಗುವ ಹಾಗೇ ಇಲ್ಲ. ಮನೆಯಲ್ಲಿ ಹೋಮ ಮಾಡುವಾಗ ಸ್ವಲ್ಪ ಹೊಗೆಯಾದರೂ ಸಾಕು, ಫೈಯರ್ ಅಲರಾಂ “ಕುಂಯೋ..’ ಅಂತ ಹೊಡೆದುಕೊಳ್ಳುತ್ತೆ.
ಹಾಗೆ ಹೊಡೆದುಕೊಂಡರೆ ಸಾಕು, ಅಗ್ನಿಶಾಮಕ ದಳದವರು ಯುದ್ಧದೋಪಾದಿಯಲ್ಲಿ ಬಂದು ಇಡೀ ಬಿಲ್ಡಿಂಗ್ ಚೆಕ್ ಮಾಡಿ ಹೋಗುತ್ತಾರೆ. ನಮ್ಮ ದೇವಸ್ಥಾನಕ್ಕೆ ತಿಂಗಳಿಗೊಮ್ಮೆ ಅವರ ಭೇಟಿ ಇದ್ದಿದ್ದೇ! ಅಗ್ನಿ ಇಲ್ಲದೇ ನಮಗೆ ಪೂಜೆಯಾದರೂ ಎಲ್ಲಿ? ಯಾವುದೋ ದೂರದ ಊರಿನ ದೇವರನ್ನು ಕಾಣಲು ಬರುವ ಭಕ್ತಾದಿಗಳು ಸರತಿ ಸಾಲಿನಲಿ ನಿಂತು, ಎಳೆದಾಡಿ, ಹೊಯ್ದಾಡಿ, ಬಯ್ದಾಡಿ ಒಂದು ಕ್ಷಣ ದೇವರ ಮೂರ್ತಿಯ ಎದುರಾಗಿ ನಿಂತರೆ, ಅವರಿಗೆ ಅದೇ ಜೀವಮಾನದ ಸಂತೃಪ್ತಿಯಾಗಬಹುದು.
ಆದರೆ, ಇಲ್ಲಿಯ ರೀತಿಯೇ ಬೇರೆ. ವಾರದ ದಿನಗಳಲ್ಲಿ ತಾಸಿಗೆ ಒಬ್ಬರೋ ಇಬ್ಬರೋ ಬರುತ್ತಾರೆ. ಕೆಲವೊಮ್ಮೆ ದೇವರೇ ನನ್ನ ಭಕ್ತ ಯಾವ ಸಮಯದಲ್ಲಿ ಬರುತ್ತಾನೆ ಎಂದು ಕಾಯುವ ಸರದಿ ಇಲ್ಲಿಯ ಪರಿಸ್ಥಿತಿ! ವೀಕೆಂಡ್, ಹಬ್ಬ ಹರಿದಿನಗಳಲ್ಲಿ ಮಾತ್ರ ತಪ್ಪದೇ ಜನರು ಬಂದು ವಿಶೇಷವಾದ ಪೂಜೆಗಳಲ್ಲಿ ಪಾಲ್ಗೊಂಡು ಸಂಭ್ರಮಿಸುತ್ತಾರೆ. ಹಾಗೇ ಒಟ್ಟುಗೂಡುವ ಜನರು ವಿವಿಧ ರಾಜ್ಯಗಳಾಗಿದ್ದರೂ ಒಂದೇ ಕುಟುಂಬದವರಂತೆ ಕಾಣುತ್ತಾರೆ.
ಅವರ ಭಾಷೆ, ವೇಷಗಳನ್ನು ಬದಿಗಿಟ್ಟು ಒಂದಾಗುತ್ತಾರೆ. ಸ್ವದೇಶದಲ್ಲಿ ಸಣ್ಣ ಸಣ್ಣ ವಿಷಯಕ್ಕೂ ಪ್ರಾದೇಶಿಕ ಬಣ್ಣಕಟ್ಟಿ ಎರಚಾಡುವ ಜನರು, ಒಮ್ಮೆ ಹೊರದೇಶದ ಜನರನ್ನು, ಅವರ ಜೀವನವನ್ನು ಕಾಣಬೇಕು. ನಮ್ಮ ಭಾಷೆ, ಸಂಸ್ಕೃತಿ ಎಲ್ಲವನ್ನೂ ತಮ್ಮ ಮನೆಗಳಲ್ಲಿ ತಮ್ಮದೇ ಸಂಘದಲ್ಲಿ ಇಟ್ಟುಕೊಂಡು, ಉಳಿದವರ ಸಂಗಡ ಅವರಂತೆಯೇ ಇರುತ್ತಾರೆ. ದೇಶ ಬಿಟ್ಟು ಹೊರ ಬೀಳುವ ಪ್ರತಿಯೊಬ್ಬನೂ ತನ್ನತನವ, ಉಳಿದವರನ್ನು ಗೌರವಿಸುವ ಮನಸ್ಥಿತಿಯನ್ನು ಇಟ್ಟುಕೊಂಡೇ ಇರುತ್ತಾನೆ ಎನ್ನುವುದು ವಿಶೇಷ.
ಹೆಸರುಗಳೇ ವಿಚಿತ್ರ…: ವಿಚಿತ್ರ ಗೋತ್ರಗಳಲ್ಲದೆ, ವಿಚಿತ್ರ ಹೆಸರುಗಳನ್ನೂ ಇಲ್ಲಿ ಕಂಡೆ. ಒಂದು ಘಟನೆ ಈಗಲೂ ನೆನಪಿದೆ. ಯಜಮಾನ, ಅವರ ಹೆಂಡತಿ ಮಕ್ಕಳು ಹೀಗೆ ಎಲ್ಲರ ಹೆಸರುಗಳನ್ನು ಹೇಳಿ ಸಂಕಲ್ಪ ಮಾಡುವಾಗ, ಕುಟುಂಬದಲ್ಲಿರುವ ಉಳಿದವರ ಹೆಸರು ಹೇಳಿ ಎಂದೆ. ಯಜಮಾನನ ಹೆಂಡತಿ “ಮ್ಯಾನೇಜರ್’ ಎಂದರು. “ಅಲ್ಲಮ್ಮಾ… ಅವರ ಹೆಸರು ಹೇಳಿ’ ಎಂದೆ. ಮತ್ತೆ, “ಮ್ಯಾನೇಜರ್’ ಅಂದ್ರು. ನನಗೆ ಇವರು ಏನು ಹೇಳುತ್ತಿದ್ದಾರೆ ಎನ್ನುವುದೇ ಅರ್ಥವಾಗಲಿಲ್ಲ! ಆಮೇಲೆ, ಆ ಅಮ್ಮ ನಿಧಾನವಾಗಿ, ನಮ್ಮ ತಂದೆಯ ಹೆಸರು, ಮ್ಯಾನೇಜರ್ ಅಂದ್ರು. ನಗು ಎಲ್ಲಿತ್ತೋ! ಐದು ನಿಮಿಷ ಪೂಜೆ ನಿಲ್ಲಿಸಿ, ನಗುವನ್ನು ಹತೋಟಿಗೆ ತಂದುಕೊಂಡೆ.
* ಗೋಪಾಲಕೃಷ್ಣ ನೇಗಾರು, ಅಮೆರಿಕ