Advertisement

“ಡೈಪರ್‌’ಟೆನ್ಸ್ ನ್‌

09:30 AM Mar 29, 2019 | mahesh |

ಈಗಿನ ಹೈಟೆಕ್‌ ಅಮ್ಮಂದಿರಿಗೆ ಮಗು ಬೇಕು. ಆದರೆ, ಮಗುವಿನ ಮಲ-ಮೂತ್ರ ಸ್ವಚ್ಛಗೊಳಿಸುವ ಕೆಲಸ ಬೇಡ. “ಅವಶ್ಯಕತೆಯೇ ಆವಿಷ್ಕಾರದ ಕೂಸು’ ಅನ್ನುವ ಹಾಗೆ, ಇವರ ಅಗತ್ಯ ಪೂರೈಸಲು ವಿಧವಿಧದ ಹೈಜೆನಿಕ್‌ ಡೈಪರ್‌ಗಳು ಮಾರ್ಕೆಟ್‌ಗೆ ಬಂದಿವೆ. ಸುಲಭ ಅನ್ನೋ ಕಾರಣದಿಂದ, ಡೈಪರ್‌ನ ಸಾಧಕ-ಬಾಧಕಗಳ ಬಗ್ಗೆ ಯಾರೂ ಚಿಂತಿಸುತ್ತಿಲ್ಲ…

Advertisement

ನನ್ನ ಮಗ ಕೆಲ ಕಾಲ ಅಮೆರಿಕದಲ್ಲಿದ್ದ. ಅಲ್ಲಿನ ಮನೆಗಳೆಲ್ಲವೂ ಮರದ ಮನೆಗಳಂತೆ. ಮನೆಯ ಮಾಡು, ನೆಲಗಳನ್ನೆಲ್ಲ ಮರದ ಹಲಗೆಗಳನ್ನು ಹಾಸಿ ಮಾಡಿರುತ್ತಾರಂತೆ. ಎಲ್ಲಾ ಕೋಣೆಗಳಿಗೂ ಬಣ್ಣಬಣ್ಣದ ಕಾಪೆìಟ್‌ ಹಾಸಿರುತ್ತಾರೆ. ಹಾಗಾಗಿ ಪುಟ್ಟಮಕ್ಕಳು ಅದರ ಮೇಲೆ ಮಲ-ಮೂತ್ರ ವಿಸರ್ಜಿಸಿದರೆ ಸ್ವತ್ಛಗೊಳಿಸುವುದು ಬಹಳ ಕಷ್ಟ. ಆ ಕಾರಣಕ್ಕೆ, ಹುಟ್ಟಿದಾಗಿನಿಂದಲೇ ಮಗುವಿಗೆ ಡೈಪರ್‌ ತೊಡಿಸುತ್ತಾರೆ. ನನ್ನ ಮೊಮ್ಮಗ ನಾಲ್ಕು ತಿಂಗಳಿದ್ದಾಗಿನಿಂದ ಅಮೆರಿಕದಲ್ಲಿಯೇ ಬೆಳೆದಿದ್ದರಿಂದ ಡೈಪರ್‌ಗೆ ಒಗ್ಗಿಬಿಟ್ಟಿದ್ದ. ಎಷ್ಟರಮಟ್ಟಿಗೆ ಡೈಪರ್‌ಗೆ ಅಡಿಕ್ಟ್ ಆಗಿದ್ದನೆಂದರೆ, ನಾಲ್ಕು ವರ್ಷವಾದರೂ ಅವನ ನಿತ್ಯಕರ್ಮ ನಡೆಯಬೇಕಾದರೆ, ಡೈಪರ್‌ ತೊಡಿಸಲೇಬೇಕಾಗಿತ್ತು. ಅವನ ಈ ಅಭ್ಯಾಸ ಅವನಮ್ಮನಿಗೆ ದೊಡ್ಡ ತಲೆನೋವಾಗಿತ್ತು. ಭಾರತಕ್ಕೆ ಬಂದಮೇಲೂ ಅಭ್ಯಾಸ ಮುಂದುವರಿಯಿತು. ಕೊನೆಗೆ ಇದನ್ನು ತಪ್ಪಿಸಲು ಒಂದು ಬೇಬಿ ಟಾಯ್ಲೆಟ್‌ ಅನ್ನು ತೆಗೆದುಕೊಂಡರು. ಮೊಮ್ಮಗ ಸ್ವಲ್ಪಮಟ್ಟಿಗೆ ಅದಕ್ಕೆ ಹೊಂದಿಕೊಂಡರೂ ಊರಿಂದ ಊರಿಗೆ ಹೋಗುವಾಗ, ಅದನ್ನು ಒಯ್ಯಲಾಗದೆ ಒದ್ದಾಡುತ್ತಿದ್ದರು. ಕೊನೆಗೆ, ಹೇಗೆಗೋ ಮಾಡಿ ಮಗುವನ್ನು ಡೈಪರ್‌ನಿಂದ ದೂರ ಮಾಡಿದರೆನ್ನಿ.

ಹಿಂದೆಲ್ಲಾ, ಮಗಳು, ಹೆರಿಗೆಗೆಂದು ತವರಿಗೆ ಬರುತ್ತಾಳೆಂದರೆ ತವರಿನಲ್ಲಿ ಸಂಭ್ರಮ ಮನೆ ಮಾಡುತ್ತಿತ್ತು. ಹುಟ್ಟುವ ಮಗುವಿಗೂ, ಬಾಣಂತಿಗೂ ಬೇಕಾದ ಪರಿಕರಗಳ ತಯಾರಿ ನಡೆಯುತ್ತಿತ್ತು. ಮಗುವಿಗೆ ಹಾಸಲು ಬಿಳಿ ಬಟ್ಟೆಗಳು, ಧರಿಸುವ ಬಟ್ಟೆಬರೆಗಳನ್ನು ಯಾರೂ ಅಂಗಡಿಯಿಂದ ಖರೀದಿಸುತ್ತಿರಲಿಲ್ಲ. ಮನೆಯಲ್ಲಿದ್ದ ಹಳೆಯ ಬಿಳಿಯ ಹತ್ತಿ ಪಂಚೆಗಳನ್ನು ಶುಭ್ರವಾಗಿ ಒಗೆದು, ಮಡಚಿಡುತ್ತಿದ್ದರು. ನೆಂಟರ ಮಕ್ಕಳ ಹಳೆಯ ತೆಳುವಾದ ಬಟ್ಟೆಯ ಅಂಗಿಗಳನ್ನು, ಹುಟ್ಟಿದ ಮಗುವಿಗೆ ತೊಡಿಸುತ್ತಿದ್ದರು. ಹೊಸಬಟ್ಟೆ ಹಾಕುವುದೇ ಆಗ ನಿಷಿದ್ಧವಾಗಿತ್ತು. ಬೇರೆಯ ಮಗು ಹಾಕಿಬಿಟ್ಟ ಬಟ್ಟೆ ಎಂದು ಯಾರೂ ಬೇಸರಿಸುತ್ತಿರಲಿಲ್ಲ. ಬಾಳಿ ಬದುಕಿದ ಮಗುವಿನ ಬಟ್ಟೆ ಇದು ಎಂದು ಭಾವಿಸುತ್ತಿದ್ದರು.

ಸ್ವಲ್ಪ ದಪ್ಪಗಿನ ಬಿಳಿ ಬಟ್ಟೆಯನ್ನು ತ್ರಿಕೋನಾಕಾರದಲ್ಲಿ ಕತ್ತರಿಸಿ, ಅದರ ತುದಿಗಳನ್ನು ಹೊಲಿದು, ಉಂಗುರಗಳನ್ನು ಮಾಡಿ ಮಗುವಿನ ಸೊಂಟಕ್ಕೆ ಉಂಗುರಗಳ ಸಹಾಯದಿಂದ ಮೃದುವಾಗಿ ಗಂಟು ಹಾಕುತ್ತಿದ್ದರು. ಎಷ್ಟು ಸಲ ಮಲ-ಮೂತ್ರ ವಿಸರ್ಜಿಸಿದರೂ ಬೇಸರವಿಲ್ಲದೆ ಬಟ್ಟೆ ಬದಲಿಸುತ್ತಿದ್ದರು. ಮಗುವನ್ನು ಎತ್ತಿಕೊಂಡಾಗ ತಮ್ಮ ಬಟ್ಟೆ ಒದ್ದೆಯಾಗಿ ಬಿಡುತ್ತದೆ ಎಂದು ಬೇಸರಿಸುತ್ತಿರಲಿಲ್ಲ. ರಾತ್ರಿ ಮಲಗುವಾಗ ಅಡಿಗೆ, ರಬ್ಬರ್‌ಶಿàಟ್‌ ಹಾಕಿ ಮಗುವನ್ನು ಮಲಗಿಸಿ, ರಾತ್ರಿ ನಾಲ್ಕಾರು ಬಾರಿ ಎದ್ದು ಬಟ್ಟೆ ಬದಲಿಸುತ್ತಿದ್ದರು.

ಆದರೆ, ಈಗಿನ ಹೈಟೆಕ್‌ ಅಮ್ಮಂದಿರ ಧೋರಣೆಯೇ ಬೇರೆ. ಅವರಿಗೆ ಮಗು ಬೇಕು. ಮಗುವಿನ ಮಲ-ಮೂತ್ರ ಸ್ವತ್ಛಗೊಳಿಸುವ ಕೆಲಸ ಬೇಡ. “ಅವಶ್ಯಕತೆಯೇ ಆವಿಷ್ಕಾರದ ಕೂಸು’ ಅಂದಹಾಗೆ, ಇವರ ಅಗತ್ಯ ಪೂರೈಸಲು ವಿಧವಿಧದ ಹೈಜೆನಿಕ್‌ ಡೈಪರ್‌ಗಳು ಮಾರ್ಕೆಟ್‌ಗೆ ಬಂದವು. ಉದ್ಯೋಗಸ್ಥ ತಾಯಂದಿರು, ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಯಾರೂ ಇಲ್ಲದ ಕಾರಣ ಮಗುವಿಗೆ ಎರಡು ವರ್ಷ ತುಂಬುತ್ತಿದ್ದಂತೆ ನರ್ಸರಿಗಳಿಗೆ ಸೇರಿಸಿ ಬಿಡುತ್ತಾರೆ. ಪೋಷಕರಿಂದ ಸಾವಿರಾರು ರೂ. ಫೀಸು ಪಡೆದಿದ್ದರೂ, ಕೆಲವು ನರ್ಸರಿಗಳು ಮಕ್ಕಳಿಗೆ ಡೈಪರ್‌ ತೊಡಿಸಿಯೇ ಕಳುಹಿಸಬೇಕು ಎಂದು ತಾಕೀತು ಮಾಡುತ್ತವೆ. ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನದವರೆಗೆ ಡೈಪರ್‌ ತೊಟ್ಟುಕೊಂಡೇ ಇರುವ ಮಗುವಿನ ಪರಿಸ್ಥಿತಿಯನ್ನು ಯೋಚಿಸಿ! ಎರಡು-ಮೂರು ಸಲವಾದರೂ ಮೂತ್ರ ವಿಸರ್ಜಿಸಿ, ಭಾರವಾದ ರಕ್ಷಾ ಕವಚವನ್ನು ಹೊತ್ತುಕೊಂಡೇ ತಿರುಗಬೇಕು. ರಾತ್ರಿ ವೇಳೆ ಮಲಗದೆ ರಚ್ಚೆ ಮಾಡುವ ಮಗುವಿಗೆ ಡಾಕ್ಟರ್‌ ನೀಡುವ ಸಲಹೆಯೂ, ಡೈಪರ್‌ ಬಳಸಿ ಎಂಬುದು. ಎಂಥ ದುರವಸ್ಥೆ!

Advertisement

ಡೈಪರ್‌ ಮೋಹ ಬಿಡಿ…
ಸ್ವಚ್ಛಗೊಳಿಸುವುದು ಸುಲಭ, ಕೆಲಸ ಕಡಿಮೆ ಎಂದು ಡೈಪರ್‌ಗೆ ಶರಣಾಗುವುದು ಸರಿಯಲ್ಲ. ಮಗು ಮನೆಯಲ್ಲೇ ಇರುವಾಗ ಅದಕ್ಕೆ ಡೈಪರ್‌ ತೊಡಿಸದಿರಿ. ತುಂಬಾ ಹೊತ್ತು ಮನೆಯಿಂದ ಹೊರಗಿರಬೇಕಾದಾಗ ಮಾತ್ರ ಡೈಪರ್‌ ಬಳಸಿ. ಮೂತ್ರ ಮಾಡಬೇಕು ಅನ್ನಿಸಿದಾಗ ಬಾಯಿ ಬಿಟ್ಟು ಹೇಳುವಂತೆ ತರಬೇತಿ ಕೊಟ್ಟರೆ, ಅದೊಂದು ದೊಡ್ಡ ಸಮಸ್ಯೆಯೇ ಆಗುವುದಿಲ್ಲ. ಸ್ವಲ್ಪ ದೊಡ್ಡ ಮಕ್ಕಳಿಗೆ ಮೂತ್ರ ವಿಸರ್ಜನೆಯಲ್ಲಿ ನಿಯಂತ್ರಣ ಸಾಧಿಸಲು ಅನುವು ಮಾಡಿಕೊಡಿ. ಮಕ್ಕಳನ್ನು ಆದಷ್ಟು ಡೈಪರ್‌ಮುಕ್ತರನ್ನಾಗಿ ಮಾಡಿ.

ಪುಷ್ಪಾ ಎನ್‌.ಕೆ. ರಾವ್‌

Advertisement

Udayavani is now on Telegram. Click here to join our channel and stay updated with the latest news.

Next