ಬೆಳಗಾವಿ: ಬೆಂಗಳೂರಿನ ವಿಧಾನಸೌಧ ನಿರ್ಮಾಣವಾಗಿ 60 ವರ್ಷ ಪೂರ್ಣಗೊಂಡಿದ್ದು, ವಜ್ರ ಮಹೋತ್ಸವ ಆಚರಿಸಲು ನಿರ್ಧರಿಸಲಾಗಿದೆ.
ಮುಖ್ಯಮಂತ್ರಿಯಿಂದ ಹಿಡಿದು ಅಧಿಕಾರಿ ವರ್ಗದವರೆಗೆ ಎಲ್ಲರೂ ವಜ್ರ ಮಹೋತ್ಸವ ಆಚರಣೆಗೆ ನಿರ್ಣಯಿಸಿದ್ದರಿಂದ ಐತಿಹಾಸಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವಿಧಾನಸಭೆ ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಹೇಳಿದರು.
ಸುವರ್ಣ ವಿಧಾನಸೌಧದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಲ್ಲರ ನಿರ್ಣಯದಂತೆಯೇ ಈ ಕುರಿತು ಯೋಚಿಸಲಾಗಿದೆ. 26.80 ಕೋಟಿ ರೂ. ವೆಚ್ಚದ ಪ್ರಸ್ತಾವನೆ ಸಲ್ಲಿಸಲಾಗಿದೆ. ಆರ್ಥಿಕ ಇಲಾಖೆ ಮಂಜೂರು ಮಾಡಿದಷ್ಟು ಹಣದಲ್ಲಿ ಮಹೋತ್ಸವ ನಡೆಸಲಾಗುವುದು ಎಂದರು.
ತರಾತುರಿಯಲ್ಲಿ ವಜ್ರ ಮಹೋತ್ಸವ ಏಕೆಂಬ ಪ್ರಶ್ನೆಗೆ ಕಿಡಿಕಿಡಿಯಾಗಿ, “60 ವರ್ಷ ಪೂರ್ಣಗೊಂಡಿದ್ದಕ್ಕೆ ಮಹೋತ್ಸವ
ಆಚರಿಸಲಾಗುತ್ತಿದೆ. ಒಂದು ವೇಳೆ ಮಾಡದಿದ್ದರೆ ನೀವು ಪತ್ರಕರ್ತರೇ 60 ವರ್ಷವಾದರೂ ಮಹೋತ್ಸವ ಮಾಡಲಿಲ್ಲ ಎಂದು ಬರೆಯುತ್ತೀರಿ.
ಎಲ್ಲರೂ ಸೇರಿ ನಿರ್ಧಾರ ತೆಗೆದುಕೊಂಡು ಇಂಥ ಮಹೋತ್ಸವ ನಡೆಸಲು ಉದ್ದೇಶಿಸಲಾಗಿದೆ. ರಾಷ್ಟ್ರಪತಿ ಕೋವಿಂದ ಅವರನ್ನು ಆಹ್ವಾನಿಸಲಾಗಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.