Advertisement

ಡಯಾಲಿಸಿಸ್‌: ಯಂತ್ರಗಳು ಕಾರ್ಯಾರಂಭ, ಶುದ್ಧ ನೀರಿನ ಕೊರತೆ ಆರಂಭ!

05:34 PM Jan 11, 2022 | Team Udayavani |

ಕುಂದಾಪುರ: ಇಲ್ಲಿನ ಸರಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ಕಳೆದ ಕೆಲವು ಸಮಯ ಗಳಿಂದ ಇದ್ದ ಡಯಾಲಿಸಿಸ್‌ ಸಮಸ್ಯೆ ಒಂದು ಹಂತದಲ್ಲಿ ಕೊನೆಕಾಣುತ್ತಿದೆ. ಅಷ್ಟರಲ್ಲಿ ಶುದ್ಧನೀರಿನ ಕೊರತೆ ಆರಂಭವಾಗಿದೆ. ಸರಿಪಡಿಸಲು ವಾರಾಂತ್ಯ ಕರ್ಫ್ಯೂ ಇದ್ದ ಕಾರಣ ಸಾಧ್ಯವಾಗದೇ ರೋಗಿಗಳಿಗೆ ತೊಂದರೆಯಾಗಿದೆ. ಜಿಲ್ಲೆಯಲ್ಲಿ ಅತಿಹೆಚ್ಚು ಡಯಾಲಿಸಿಸ್‌ ಚಿಕಿತ್ಸೆ ಪಡೆಯುತ್ತಿರುವುದು ಕುಂದಾಪುರದಲ್ಲಿ ಎನ್ನುವುದು ಉಲ್ಲೇಖನೀಯ.

Advertisement

ದುರಸ್ತಿ ಇಲ್ಲ
ಹಳೆ ಯಂತ್ರಗಳು ದುರಸ್ತಿಯಾಗಿರಲಿಲ್ಲ. ಅವುಗಳನ್ನು ತಯಾರಿಸಿದ ಸಂಸ್ಥೆಯೂ ಯಾವುದೋ ಕಾರಣದಿಂದ ನಿರ್ವಹಣೆಗೆ ಒಪ್ಪಿರಲಿಲ್ಲ. ಹಳೆಯದು ನಾದುರಸ್ತಿ, ಹೊಸದು ನಾಸ್ತಿ ಎಂಬ ಸ್ಥಿತಿ ಬಂದಿತ್ತು.

ಬಾರದ ಸಂಸ್ಥೆ
ಬಿಆರ್‌ಎಸ್‌ ಸಂಸ್ಥೆ ಡಯಾಲಿಸಿಸ್‌ ನಿರ್ವಹಣೆ ಬಿಟ್ಟು ಸಂಜೀವಿನಿ ಎಂಬ ಸಂಸ್ಥೆ ನಿರ್ವಹಿಸಲಿ ಎಂದು ಸರಕಾರ ಸೂಚಿಸಿದೆ. ಆದರೆ ಈ ಸಂಸ್ಥೆ ಇನ್ನೂ ಬಂದಿಲ್ಲ. ಯಂತ್ರಗಳನ್ನು ಹಾಕಿಲ್ಲ. ಬಿಆರ್‌ಎಸ್‌ ಸಂಸ್ಥೆಯ ಯಂತ್ರಗಳೇ ಇದ್ದು ಅವುಗಳ ನಿರ್ವಹಣೆ ಬಾಕಿ ಇದೆ.

ಕಾರ್ಯಾರಂಭ
ಸಹಾಯಕ ಕಮಿಷನರ್‌ ಅಧ್ಯಕ್ಷತೆ ಆರೋಗ್ಯ ರಕ್ಷಾ ಸಮಿತಿ ಶಾಸಕರ ಸೂಚನೆಯಂತೆ 2 ಯಂತ್ರಗಳನ್ನು ತರಿಸಿದೆ. ಅವು ಕಾರ್ಯನಿರ್ವಹಿಸಿದ್ದು ತಾತ್ಕಾಲಿಕವಾಗಿ ಹಳೆಯ ಯಂತ್ರಗಳೂ ದುರಸ್ತಿಯಾಗಿವೆ. ಈ ದೆಸೆಯಿಂದ ಈಗ 5 ಯಂತ್ರಗಳೂ ಕಾರ್ಯನಿರ್ವಹಿಸುತ್ತಿವೆ. ಪುರಸಭೆ ನೀಡುತ್ತೇನೆಂದು ಹೇಳಿದ 2 ಯಂತ್ರಗಳು, ದಾನಿಗಳ ಮೂಲಕ ಒದಗಬೇಕಾದ ಯಂತ್ರಗಳು ಇನ್ನೂ ತಲುಪಿಲ್ಲ. ಹಾಗಂತ ಈ ಯಂತ್ರಗಳು ಬಂದರೂ ಯಂತ್ರಗಳ ಸಂಖ್ಯೆ ಏರಿಕೆಯಾಗುವುದಿಲ್ಲ. ಏಕೆಂದರೆ ಬಿಆರ್‌ಎಸ್‌ ಸಂಸ್ಥೆ ತನ್ನ ಯಂತ್ರಗಳನ್ನು ಮರಳಿ ಪಡೆಯಲಿದೆ. ಹೊಸಸಂಸ್ಥೆ ಇನ್ನೂ ಕಾಲಿಡದ ಕಾರಣ ಸದ್ಯ ಸ್ಥಳೀಯ ಯಂತ್ರಗಳೇ ಆಧಾರ.

ನೀರಿನ ಸಮಸ್ಯೆ
ಡಯಾಲಿಸಿಸ್‌ ಮಾಡುವ ಸಂದರ್ಭ ಶುದ್ಧ ನೀರು (ರಿವರ್ಸ್‌ ಆಸ್ಮಾಸಿಸ್‌- ಆರ್‌ಒ) ಅಗತ್ಯವಿದೆ. ಇದರ ಘಟಕ ಸರಕಾರಿ ಆಸ್ಪತ್ರೆಯಲ್ಲಿದೆ. 1 ಗಂಟೆಗೆ 5 ಯಂತ್ರಗಳಿಗೆ 750 ಲೀ.ನಂತೆ ನೀರು ಬೇಕಾಗುತ್ತದೆ. ಆಸ್ಪತ್ರೆಯಲ್ಲಿ 1 ಸಾವಿರ ಲೀ. ಸಾಮರ್ಥ್ಯದ ಶುದ್ಧ ನೀರಿನ ಟ್ಯಾಂಕ್‌ ಇದ್ದು ಇದಕ್ಕೆ 3 ಸಾವಿರ ಲೀ. ಸಾಮರ್ಥ್ಯದ ತಲಾ 2 ಟ್ಯಾಂಕ್‌ಗಳಿಂದ ನೀರು ಸರಬರಾಜಾಗುತ್ತದೆ. ಚಿಕಿತ್ಸೆ ಸಂದರ್ಭ ಈ ನೀರಿನ ಕೊರತೆ ಉಂಟಾಗಬಾರದು. ಈಗ ನೀರು ಶುದ್ಧಗೊಳಿಸುವ ಫಿಲ್ಟರ್‌ನ ಸಾಮರ್ಥ್ಯ ಕಡಿಮೆಯಾಗಿದೆ. ಇದರಿಂದ 5 ಜನರ ಬದಲು 4 ಜನರಿಗೆ, ಮೂವರಿಗೆ ಎಂದು ಚಿಕಿತ್ಸೆ ನೀಡಬೇಕಾದ ಕಾರಣ ನೋಂದಾಯಿತ ರೋಗಿಗಳಿಗೆ ಚಿಕಿತ್ಸೆ ತಡವಾಗುತ್ತಿದೆ.

Advertisement

ಕರ್ಫ್ಯೂ ಕಾರಣ?
ಶುದ್ಧ ನೀರಿನ ಘಟಕ ದುರಸ್ತಿಗೆ ಅಗತ್ಯವುಳ್ಳ ಫಿಲ್ಟರ್‌ ತರಿಸಲು ವಾರಾಂತ್ಯ ಕರ್ಫ್ಯೂ ಅಡ್ಡಿಯಾಗಿದೆ ಎಂಬ ಮಾತುಗಳೂ ಕೇಳಿಬರುತ್ತಿದೆ. ದೊಡ್ಡ ಘಟಕದ ನಿರ್ವಹಣೆ ಮಾಡಲು ಸ್ಥಳೀಯವಾಗಿ ತಾಂತ್ರಿಕ ಮಾಹಿತಿ ಇರುವವರ ಕೊರತೆಯಿದೆ. ಫಿಲ್ಟರ್‌ಗಳ ಲಭ್ಯತೆ ಕೂಡ ಸ್ಥಳೀಯವಾಗಿ ಇರುವುದಿಲ್ಲ. ಇದೆಲ್ಲವನ್ನೂ ಕ್ಷಣದಿಂದ ಕ್ಷಣಕ್ಕೆ ಒಟ್ಟು ಮಾಡಲು ವಾರಾಂತ್ಯ ಕರ್ಫ್ಯೂ ಅಡ್ಡಿಯಾಗಿದೆ ಎನ್ನಲಾಗಿದ್ದು ರೋಗಿಗಳು ಬೆಳಗ್ಗೆ ಬಂದವರು ರಾತ್ರಿ ಕಾದು ಕುಳಿತು ಚಿಕಿತ್ಸೆ ಪಡೆದು ಹೋದ ಉದಾಹರಣೆ ಇದೆ.

ಯಂತ್ರಗಳ ದುರವಸ್ಥೆ
5 ಯಂತ್ರಗಳು ಕಾರ್ಯನಿರ್ವಹಿಸುತ್ತಿದ್ದವು. 38 ರೋಗಿಗಳು ಡಯಾಲಿಸಿಸ್‌ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಮ್ಮೆ ಚಿಕಿತ್ಸೆ ಆರಂಭವಾದರೆ ಆಜೀವಪರ್ಯಂತ ವಾರದಲ್ಲಿ 2 ಬಾರಿ ಚಿಕಿತ್ಸೆ ಬೇಕಾಗುತ್ತದೆ. ಒಂದು ಬಾರಿಯ ಚಿಕಿತ್ಸೆಗೆ ಕನಿಷ್ಠ 3 ಗಂಟೆಯ ಅವಧಿ ಬೇಕಾಗುತ್ತದೆ. ಯಂತ್ರಗಳು ಕೈ ಕೊಟ್ಟಾಗ ರೋಗಿಗಳಿಗೆ ನಿಶ್ಚಿತ ಅವಧಿ ತಪ್ಪಿಸಿ ಬೇರೆ ಬೇರೆ ಅವಧಿಯಲ್ಲಿ ಚಿಕಿತ್ಸೆ ನೀಡಬೇಕಾಗುತ್ತದೆ. 5 ಯಂತ್ರಗಳು ಕಾರ್ಯನಿರ್ವಹಿಸುತ್ತಿದ್ದವುಗಳ ಪೈಕಿ ಏಕಾಏಕಿ 2 ಯಂತ್ರಗಳು ಹಾಳಾದವು. ಅದಾದ ಬಳಿಕವೂ 1 ಯಂತ್ರ ಹಾಳಾಯಿತು.

ಸರಿಪಡಿಸಲಾಗುತ್ತಿದೆ
ಡಯಾಲಿಸಿಸ್‌ ಘಟಕದಲ್ಲಿ ಶುದ್ಧ ನೀರಿನ ಕೊರತೆ ಇರುವುದನ್ನು ಸರಿಪಡಿಸುವ ಕಾರ್ಯ ನಡೆಯುತ್ತದೆ. 5 ಯಂತ್ರಗಳು ಕಾರ್ಯನಿರ್ವಹಿಸುತ್ತಿದ್ದು ರೋಗಿಗಳಿಗೆ ಸಮಸ್ಯೆ ಆಗಿಲ್ಲ.
-ಡಾ| ರಾಬರ್ಟ್‌ ರೆಬೆಲ್ಲೋ, ಆಡಳಿತ ಶಸ್ತ್ರಚಿಕಿತ್ಸಕ ವೈದ್ಯಾಧಿಕಾರಿ, ಉಪವಿಭಾಗ ಆಸ್ಪತ್ರೆ, ಕುಂದಾಪುರ

 

 

Advertisement

Udayavani is now on Telegram. Click here to join our channel and stay updated with the latest news.

Next