ಗೌರಿಬಿದನೂರು: ಮುಂದಿನ ಎರಡು ತಿಂಗಳ ಒಳಗೆ ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಲ್ಲಿನ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಕೇಂದ್ರಗಳನ್ನು ಆರಂಭಿಸಲಾಗುವುದೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್.ರಮೇಶ್ ಕುಮಾರ್ ತಿಳಿಸಿದರು.
ತಾಲೂಕಿನ ಹೊಸೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ 24×7 ಮಾದರಿ ಹೊಸೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಆಧುನೀಕರಣ ಕಾಮಗಾರಿಯ ಶಂಕುಸ್ಥಾಪನೆ ಮತ್ತು ಆ್ಯಂಬುಲೆನ್ಸ್ ಹಾಗೂ ವೈದ್ಯಕೀಯ ಉಪಕರಣಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ತಜ್ಞ ಡಾ.ಎಚ್.ನರಸಿಂಹಯ್ಯನವರ ಹುಟ್ಟೂರಾದ ಹೊಸೂರಿನಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ನಿರ್ಮಿಸುತ್ತಿರುವ ಮಾದರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೈಟೆಕ್ ಸ್ಪರ್ಶ ನೀಡುವ ಮೂಲಕ ಅನೇಕ ಸವಲತ್ತುಗಳನ್ನು ಮಂಜೂರು ಮಾಡಲಾಗುತ್ತಿದೆ. ನಾಗರಿಕರು ಇದರ ಸದುಪಯೋಗ ಮಾಡಿಕೊಳ್ಳುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಕರೆ ನೀಡಿದರು.
ಆರೋಗ್ಯ ಕೇಂದ್ರದ ದುರಸ್ತಿಗೆ ಹಣ: ಹೊಸೂರು ಜಿಪಂ ಕ್ಷೇತ್ರದ ಸದಸ್ಯ ಮಂಜುನಾಥ್ ಸಲ್ಲಿಸಿರುವ ಮನವಿ ಮೇರೆಗೆ ಹೊಸೂರು ಹೋಬಳಿಗೆ ಸೇರಿದ ರಮಾಪುರ ಗ್ರಾಮಗಳ ಶಿಥಿಲಗೊಂಡಿರುವ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ದುರಸ್ತಿಗಾಗಿ ಹಣ ಮಂಜೂರು ಮಾಡಲಾಗುವುದು. ಗೆದೆರೆ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ತರಿದಾಳು ಗ್ರಾಮಕ್ಕೆ ವಿಸ್ತರಣಾ ಆಸ್ಪತ್ರೆ ನಿರ್ಮಿಸಲು ಮತ್ತು ಬಚ್ಚರೆಡ್ಡಿ ಹಳ್ಳಿ ಗ್ರಾಮಕ್ಕೆ ವಿಸ್ತರಣಾ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ನಿರ್ಮಾಣ ಮಾಡುವುದಾಗಿ ಆಶ್ವಾಸನೆ ನೀಡಿದರು.
ಜೆನೆರಿಕ್ ಔಷಧ ಮಳಿಗೆ: ರಾಜ್ಯದ ಗಡಿ ಭಾಗದಲ್ಲಿರುವ ತಾಲೂಕಿನ ಸರ್ಕಾರಿ ಆಸ್ಪತ್ರೆಗಳಿಗೆ ಆರೋಗ್ಯ ಇಲಾಖೆಯಿಂದ ಹಲವಾರು ಯೋಜನೆಗಳಡಿ ಬಹಳಷ್ಟು ಸೌಲತ್ತುಗಳನ್ನು ಬಿಡುಗಡೆ ಮಾಡಲು ಸರ್ಕಾರ ಸಿದ್ಧವಾಗಿದೆ. ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಕೇಂದ್ರ ಸರ್ಕಾರದ ಸಹಕಾರದಿಂದ ಬಡ ರೋಗಿಗಳ ಅನುಕೂಲಕ್ಕಾಗಿ ಜೆನೆರಿಕ್ ಔಷಧ ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಇದರಿಂದ ಖಾಸಗಿ ಔಷಧ ಅಂಗಡಿಗಳಲ್ಲಿ ದುಬಾರಿ ಬೆಲೆ ತೆತ್ತು ಔಷಧ ಕೊಳ್ಳುವುದಕ್ಕೆ ಕಡಿವಾಣ ಹಾಕಿದಂತಾಗುತ್ತದೆ ಎಂದರು.
ಆ್ಯಂಬುಲೆನ್ಸ್ ಸೌಲಭ್ಯ: ಬಡ ರೋಗಿಗಳ ಜೀವ ಸಂರಕ್ಷಿಸುವ ಯೋಜನೆಯಡಿ ಪ್ರಾಥಮಿಕ ಆರೊಗ್ಯ ಕೇಂದ್ರಗಳಿಗೆ ಆ್ಯಂಬುಲೆನ್ಸ್ ವಾಹನ ಮುಂದಿನ ದಿನಗಳಲ್ಲಿ ನೀಡುವುದಾಗಿ ತಿಳಿಸಿದ ಸಚಿವರು, ಪ್ರತಿ 15 ಕಿ.ಮೀ. ದೂರದ ವರೆಗೆ ಇದರ ಸೇವೆ ದೊರೆಯುವಂತೆ ಮಾಡಲಾಗುವುದು. ಹೊಸೂರಿಗೆ ಸಮುದಾಯ ಆಸ್ಪತ್ರೆಯ ಅಂಗವಾಗಿ 10 ಹಾಸಿಗೆಗಳ ತಾಯಿ-ಮಗುವಿನ ಆಸ್ಪತ್ರೆಯನ್ನು ಇನ್ನು 1 ತಿಂಗಳಲ್ಲಿ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು.
ವಿಧಾನಸಭೆ ಉಪಾಧ್ಯಕ್ಷ ಎನ್.ಎಚ್.ಶಿವಶಂಕರರೆಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಪಂ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ, ಉಪಾದ್ಯಕ್ಷೆ ನಿರ್ಮಲಾ, ಜಿಪಂ ಸಿಇಒ ಮಂಜುನಾಥ್, ಜಿಪಂ ಸದಸ್ಯರಾದ ಡಿ.ನರಸಿಂಹಮೂರ್ತಿ, ಭವ್ಯಾ, ಅರುಂಧತಿ, ಪಿ.ಎನ್ ಪ್ರಕಾಶ್, ಪ್ರಮೀಳಾ, ತಾಪಂ ಅಧ್ಯಕ್ಷ ನಾರಪ್ಪ ರೆಡ್ಡಿ, ತಾಪಂ ಸದಸ್ಯ ಲೋಕೇಶ್, ಹೊಸೂರು ಗ್ರಾಪಂ ಅಧ್ಯಕ್ಷ ಅಶ್ವತ್ಥನಾರಾಯಣ ರಾವ್,ಎಪಿಎಂಸಿ ಅಧ್ಯಕ್ಷ ಬೊಮ್ಮಣ್ಣ, ಡಿಸಿಸಿ ಬ್ಯಾಂಕ್ ನಿರ್ದೇಶಕ ಮರಳೂರು ಹನುಮಂತರೆಡ್ಡಿ, ಪುರಸಭೆ ಅಧ್ಯಕ್ಷ ಕಲೀಂವುಲ್ಲಾ, ಡಿಎಚ್‌ಒ ಡಾ.ರವಿಶಂಕರ್, ಡಾ.ಎನ್.ಅರುಂಧತಿ ಮುಂತಾದವರಿದ್ದರು.