ಹುಬ್ಬಳ್ಳಿ: ಅಖೀಲ ಭಾರತ ತೇರಾಪಂಥ ಯುವಕ ಪರಿಷದ್ ವತಿಯಿಂದ ನಗರದ ದೇಸಾಯಿ ಕ್ರಾಸ್ ವಿವೇಕಾನಂದ ಕಾರ್ನರ್‌ನಲ್ಲಿ ಆಚಾರ್ಯ ತುಲಸಿ ಡಯಾಗ್ನಾಸ್ಟಿಕ್ ಸೆಂಟರ್ ಉದ್ಘಾಟನೆ ಶನಿವಾರ ನಡೆಯಿತು. ಶಾರದಾದೇವಿ ಹೀರಾಲಾಲ್ಜಿ ಮಾಲು ಸೆಂಟರ್ ಉದ್ಘಾಟನೆ ನೆರವೇರಿಸಿದರು.
ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತೇರಾಪಂಥ ಯುವಕ ಪರಿಷದ್ ಹುಬ್ಬಳ್ಳಿ ಅಧ್ಯಕ್ಷ ವಿಮಲ್ ಕಟಾರಿಯಾ, ಜನರು ಚಿಕಿತ್ಸೆಗಿಂತ ಮುಂಚೆ ಆರೋಗ್ಯ ಸಮಸ್ಯೆ ಪತ್ತೆ ಮಾಡುವುದಕ್ಕೆ ದೊಡ್ಡ ಮೊತ್ತ ಖರ್ಚು ಮಾಡಬೇಕಿದೆ. ಜನರಿಗೆ ಅನೂಕಲ ಕಲ್ಪಿಸುವ ಉದ್ದೇಶದಿಂದ ಡೈಗ್ನಾಸ್ಟಿಕ್ ಸೆಂಟರ್ ಆರಂಭಿಸಲಾಗಿದೆ ಎಂದರು.
ಮಾರುಕಟ್ಟೆಗಿಂತ ಕಡಿಮೆ ಹಣದಲ್ಲಿ ಇಲ್ಲಿ ಪರೀಕ್ಷೆ ಮಾಡಲಾಗುತ್ತದೆ. ಎಂಆರ್‌ಐ ಹಾಗೂ ಸಿಟಿ ಸ್ಕ್ಯಾನ್ ಹೊರತುಪಡಿಸಿ ರಕ್ತ ಪರೀಕ್ಷೆ, ಮಧುಮೇಹ, ಥೈರಾಯ್ಡ ಸೇರಿದಂತೆ ಎಲ್ಲ ಪರೀಕ್ಷೆಗಳನ್ನು ಇಲ್ಲಿ ಮಾಡಲಾಗುತ್ತದೆ. ಉತ್ತಮ ಗುಣಮಟ್ಟದ ಪರೀಕ್ಷಾ ಯಂತ್ರಗಳನ್ನು ಅಳವಡಿಸಲಾಗಿದೆ. ಇತರ ಡೈಗ್ನಾಸ್ಟಿಕ್ ಸೆಂಟರ್‌ಗಳ ದರಕ್ಕಿಂತ ಶೇ.50ರಿಂದ ಶೇ.80 ಕಡಿಮೆ ಹಣದಲ್ಲಿ ಪರೀಕ್ಷೆ ಮಾಡಿ ವರದಿ ನೀಡಲಾಗುವುದು. ಸಮಾಜದ ದಾನಿಗಳ ಸಹಕಾರದಿಂದ ಇದನ್ನು ನಡೆಸಲಾಗುತ್ತದೆ. ಲಾಭ ಹಾಗೂ ನಷ್ಟವಿಲ್ಲದೇ ಸೆಂಟರ್ ನಡೆಸುವುದು ನಮ್ಮ ಉದ್ದೇಶ. ಜನರ ಪ್ರತಿಕ್ರಿಯೆ ಪರಿಗಣಿಸಿ ಡೈಗ್ನಾಸ್ಟಿಕ್ ಸೆಂಟರ್ ವಿಸ್ತರಿಸಲಾಗುವುದು ಎಂದರು.
ದೇಶದಲ್ಲಿ ಈಗಾಗಲೇ 40 ಡೈಗ್ನಾಸ್ಟಿಕ್ ಸೆಂಟರ್‌ಗಳು ಕಾರ್ಯ ನಿರ್ವಹಿಸುತ್ತಿದ್ದು, ಇದು 41ನೇ ಸೆಂಟರ್ ಆಗಿದೆ. ರಾಜ್ಯದಲ್ಲಿ ಬೆಂಗಳೂರಿನಲ್ಲಿ 4, ಮೈಸೂರು 1, ಸಿಂಧನೂರು 1 ಸೆಂಟರ್ ಇದ್ದು, ಇದು ರಾಜ್ಯದ 7ನೇ ಸೆಂಟರ್ ಆಗಿದೆ ಎಂದು ತಿಳಿಸಿದರು.
ಆಚಾರ್ಯ ತುಲಸಿ ಅವರು ಮಾನವತೆಗೆ ಹೆಸರುವಾಸಿಯಾಗಿದ್ದರು. ಅವರ ಜನ್ಮಶತಮಾನೋತ್ಸವ ಸಂದರ್ಭ ದಲ್ಲಿ ಸೆಂಟರ್ ಆರಂಭಿಸಲಾಗುತ್ತಿದೆ. ತೇರಾಪಂಥ ಯುವಕ ಪರಿಷದ್ ಸೇವಾ, ಸಂಸ್ಕಾರ ಹಾಗೂ ಸಂಘಟನೆಯಲ್ಲಿ ತೊಡಗಿಕೊಂಡಿದೆ. ಪರಿಷದ್ 28 ಕಾರ್ಯಕ್ರಮಗಳನ್ನು ನಡೆಸುತ್ತಿದೆ ಎಂದರು.
ಮುಕೇಶ ಗುಗಲಿಯಾ, ಪಂಕಜ್ ಡಾಗಾ, ಸಂದೀಪ ಕೊಠಾರಿ, ರಮೇಶ ಡಾಗಾ, ಅಭಿನಂದನ್ ನಾಹಟಾ, ಪವನ್ ಮಾಂಡೋತ್ ಇದ್ದರು.