ದೇವರು ಉದ್ದೇಶವಿಲ್ಲದೆ ನೋವು ನೀಡುವುದಿಲ್ಲ” ನೋವು, ಕಾರ್ಯನಿರ್ವಹಣ ಸಾಮರ್ಥ್ಯ ನಷ್ಟ, ಕೆಂಪಾಗುವುದು, ಬಿಸಿಯೇರುವುದು ಮತ್ತು ಬಾವು- ಇವು ಉರಿಯೂತದ ಐದು ಸ್ತಂಭಗಳು. ಉರಿಯೂತವು ಗಾಯಕ್ಕೆ ದೇಹದ ಮೊದಲ ಪ್ರತಿಕ್ರಿಯೆಯಾಗಿದ್ದು, ಗುಣ ಹೊಂದುವತ್ತ ಮೊದಲ ಹೆಜ್ಜೆಯಾಗಿದೆ.
ದೀರ್ಘಕಾಲೀನ ಮಧುಮೇಹ ರೋಗಿಗಳಲ್ಲಿ ಉರಿಯೂತ ಪ್ರತಿಕ್ರಿಯೆ ಕಡಿಮೆಯಾಗಿರುವುದರಿಂದ ಎರಡೂ ಪಾದಗಳಲ್ಲಿ ಸಂವೇದನೆ ಇರುವುದಿಲ್ಲ; ಇದರಿಂದಾಗಿ ನೋವು ಅನುಭವಕ್ಕೆ ಬರುವುದಿಲ್ಲ ಮತ್ತು ಕಾರ್ಯಸಾಮರ್ಥ್ಯ ನಷ್ಟವಾಗುವುದಿಲ್ಲ.
ಇದರಿಂದಾಗಿ ಪಾದದ ಅಡಿಭಾಗದಲ್ಲಿ ಉಂಟಾಗುವ ಗಾಯವು ಅನುಭವಕ್ಕೆ ಬರುವುದಿಲ್ಲ ಮತ್ತು ಒತ್ತಡ ಪುನರಾವರ್ತನೆ ಆಗುವುದರಿಂದ ಹಾಗೂ ಕೊಳೆ ಸೇರುವುದರಿಂದ ಕ್ಷಿಪ್ರವಾಗಿ ಉಲ್ಬಣವಾಗುತ್ತದೆ. ಇದು ಮುಂದುವರಿದರೆ ಕಾಲು/ ಪಾದ ಕತ್ತರಿಸಬೇಕಾಗಬಹುದು, ಪ್ರಾಣಾಪಾಯವೂ ಉಂಟಾಗಬಹುದು. ದುರದೃಷ್ಟವಶಾತ್ ಮಧುಮೇಹ ಮತ್ತು ನ್ಯುರೋಪತಿಯನ್ನು ಗುಣಪಡಿಸುವುದು ಅಸಾಧ್ಯ.
ಜಾಗತಿಕವಾಗಿ ಪ್ರತೀ ಅರ್ಧ ನಿಮಿಷಕ್ಕೆ ಒಂದರಂತೆ ಕಾಲುಗಳು ಹೀಗೆ ಮಧುಮೇಹಕ್ಕೆ ಬಲಿಯಾಗುತ್ತಿವೆ.
ಇದನ್ನು ತಡೆಯಬೇಕೆಂದರೆ ಕಳಪೆ ಪೋಷಣೆಯುಕ್ತ, ನೋವು ರಹಿತ ಪಾದಗಳನ್ನು ದಿನವೂ ಆರೈಕೆ ಮಾಡಬೇಕಾಗಿರುವುದರ ಪ್ರಾಮುಖ್ಯವನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ.
ಸ್ಥೂಲವಾಗಿ ಹೇಳಬೇಕಾದರೆ ಪಾದಗಳಿಗೆ ಗಾಯ ಉಂಟಾಗುವುದನ್ನು ತಡೆಯಬೇಕು, ಪ್ರತೀ ದಿನ ನಿದ್ದೆ ಮಾಡುವುದಕ್ಕೆ ಮುನ್ನ ಪಾದಗಳಲ್ಲಿ ಗಾಯ ಉಂಟಾಗಿದೆಯೇ ಎಂದು ಗಮನಿಸಬೇಕು ಮತ್ತು ಪಾದರಕ್ಷೆಗಳು ಗಾಯ ಉಂಟು ಮಾಡದಂತೆ ನೋಡಿಕೊಳ್ಳಬೇಕು.
ಎಷ್ಟೇ ಸಣ್ಣ ಗಾಯ ಉಂಟಾಗಿರಲಿ; ಅದನ್ನು ನಿರ್ಲಕ್ಷಿಸದೆ ಆ್ಯಂಟಿಸೆಪ್ಟಿಕ್‌ನಿಂದ ಶುಚಿಗೊಳಿಸಬೇಕು, ಶುದ್ಧ ಹತ್ತಿಯ ಬಟ್ಟೆಯಿಂದ ಗಾಯವನ್ನು ಮುಚ್ಚಬೇಕು, ಗಾಯವುಂಟಾದ ಪಾದದ ಆ ಭಾಗಕ್ಕೆ ಹೆಚ್ಚು ಭಾಗ ಹಾಕಬಾರದು ಹಾಗೂ ಐದು ದಿನಗಳ ಕಾಲ ಆ ಭಾಗ ಒದ್ದೆಯಾಗದಂತೆ ಕಾಪಾಡಬೇಕು. ಆದರೂ ಗುಣ ಹೊಂದದೆ ಇದ್ದರೆ ಮಧುಮೇಹ ಪಾದ ತಜ್ಞ (ಪೋಡಿಯಾಟ್ರಿಸ್ಟ್)ರನ್ನು ಸಂಪರ್ಕಿಸಬೇಕು.
ನಿಮ್ಮ ಪಾದ, ನಿಮ್ಮ ಪ್ರಾಣ ಮತ್ತು ನಿಮ್ಮ ಕುಟುಂಬವನ್ನು ಕಾಪಾಡಿಕೊಳ್ಳಲು ಈ ಕೆಳಗಿನ ಸಲಹೆಗಳನ್ನು ಚಾಚೂತಪ್ಪದೆ ಪಾಲಿಸಿ:
ಬರಿಗಾಲಿನಲ್ಲಿ ನಡೆಯಬೇಡಿ.
ಪ್ರತೀ ರಾತ್ರಿ ನಿಮ್ಮ ಪಾದಗಳನ್ನು ಗಮನಿಸಿ, ಯಾವುದೇ ಗಾಯ ಇಲ್ಲದೆ ಇದ್ದರೆ ಮಾಯಿಶ್ಚರೈಸರ್ ಹಚ್ಚಿರಿ.
ಪ್ರತೀ ದಿನ ಬೆಳಗ್ಗೆ ಪಾದರಕ್ಷೆಗಳನ್ನು ಗಮನಿಸಿ, ಧರಿಸುವುದಕ್ಕೆ ಮುನ್ನ ಅವುಗಳನ್ನು ಶುಚಿಗೊಳಿಸಿ.
ಉಗುರುಗಳನ್ನು ಸ್ವತಃ ಕತ್ತರಿಸುವುದು, ಪಾದಗಳನ್ನು ಬಿರುಸಾಗಿ ಮಸಾಜ್ ಮಾಡುವುದು, ಸðಬ್ ಮಾಡುವುದು, ಪಾದಗಳಿಗೆ ಅತಿಯಾದ ಬಿಸಿ ನೀರು ಹಾಕುವುದು ಮಾಡಬಾರದು.
ಪಾದರಕ್ಷೆ/ಶೂಗಳನ್ನು ಖರೀದಿಸುವುದಕ್ಕೆ ಮುನ್ನ ನಿಮ್ಮ ಪಾದಗಳ ಅಳತೆ ತೆಗೆದುಕೊಳ್ಳಿ; ಪಾದಗಳಿಗಿಂತ ಅವು ಸ್ವಲ್ಪ ಉದ್ದವೂ ಅಗಲವೂ ಆಗಿರಲಿ. ಬಿಗಿಯಾಗುವ ಪಾದರಕ್ಷೆಗಳು ಬೇಡ.
ನೀವು ಮಧುಮೇಹಿಯಾಗಿದ್ದರೆ ಪೋಡಿಯಾಟ್ರಿಸ್ಟ್‌ರನ್ನು ಸಂಪರ್ಕಿಸಿ.
-ಡಾ| ಪ್ರವೀಣ್‌ಚಂದ್ರ ನಾಯಕ್, ಕನ್ಸಲ್ಟಂಟ್ ಪೋಡಿಯಾಟ್ರಿಕ್ ಸರ್ಜನ್,
ಕೆಎಂಸಿ ಆಸ್ಪತ್ರೆ, ಡಾ| ಬಿ.ಆರ್. ಅಂಬೇಡ್ಕರ್ ವೃತ್ತ, ಮಂಗಳೂರು
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಮೆಡಿಸಿನ್ ವಿಭಾಗ, ಕೆಎಂಸಿ, ಅತ್ತಾವರ, ಮಂಗಳೂರು)