Advertisement

ಮಧುಮೇಹಿಗಳು, ಸಕ್ರಿಯ ಸೋಂಕಿತರು ಹೆಚ್ಚಿರುವುದೇ ಫಂಗಸ್ ಹೆಚ್ಚಳಕ್ಕೆ ಕಾರಣ

08:50 AM May 29, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಮಧುಮೇಹಿಗಳ ಸಂಖ್ಯೆ ಹೆಚ್ಚಾಗಿರುವುದು ನಮಗೆ ಶಾಪವಾಗುತ್ತಿದೆಯೇ? ಇದು ಬ್ಲ್ಯಾಕ್‌ ಫಂಗಸ್‌ ನಿಯಂತ್ರಣಕ್ಕೆ ಅಡ್ಡಿಯಾಗಿದೆಯೇ? – ಹೌದು ಎನ್ನುತ್ತಾರೆ ತಜ್ಞ ವೈದ್ಯರು.

Advertisement

ಕಪ್ಪು ಶಿಲೀಂಧ್ರಕ್ಕೂ ಮಧುಮೇಹಕ್ಕೂ ನಂಟಿದೆ. ಅದೇ ತರಹ ಮಧುಮೇಹಕ್ಕೂ ಕರ್ನಾಟಕಕ್ಕೂ ನಂಟಿದೆ. ದೇಶದ ಒಟ್ಟಾರೆ ಮಧುಮೇಹಿಗಳಲ್ಲಿ ಶೇ.8 ರಾಜ್ಯದಲ್ಲಿದ್ದಾರೆ. ದೇಶದಲ್ಲಿ 8 ಕೋಟಿ ಇದ್ದು, ರಾಜ್ಯದಲ್ಲಿ 65 ಲಕ್ಷ ಮಂದಿ ಮಧುಮೇಹಿಗಳಿದ್ದಾರೆ. ಸದ್ಯ ದೇಶದಲ್ಲಿಯೇ ಕೊರೊನಾ ಸಕ್ರಿಯ  ಪ್ರಕರಣಗಳು ಕರ್ನಾಟಕದಲ್ಲಿ ಹೆಚ್ಚಿದ್ದು, ಮೂರು ಲಕ್ಷ ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 50 ಸಾವಿರಕ್ಕೂ ಅಧಿಕ ಮಂದಿ ಆಸ್ಪತ್ರೆಯಲ್ಲಿದ್ದಾರೆ.

ಸೋಂಕು ರಾಜ್ಯದಲ್ಲಿ ಹೆಚ್ಚಿರುವುದರಿಂದ ಸೋಂಕಿತರಲ್ಲಿ ಸಾಮಾನ್ಯವಾಗಿ ಮಧುಮೇಹಿಗಳು ಕೂಡ ಹೆಚ್ಚಿದ್ದಾರೆ.ಹೀಗಾಗಿಯೇ, ಕೊರೊನಾ ಸಕ್ರಿಯ ಪ್ರಕರಣಗಳು ಜತೆಗೆ ಮಧುಮೇಹ  ಪ್ರಕರಣಗಳಲ್ಲಿ ರಾಜ್ಯ ಮುಂಚೂಣಿಯಲ್ಲಿರುವುದು ಶಾಪವಾಗಿದ್ದು, ಬ್ಲ್ಯಾಕ್‌ ಫಂಗಸ್‌ ಪ್ರಕರಣಗಳು ಹೆಚ್ಚಳವಾಗುತ್ತಿವೆ. ಮುಖ್ಯವಾಗಿ ಸೋಂಕು ಗಂಭೀರವಾಗಿರುವರಲ್ಲಿ ಮಧುಮೇಹಿಗಳೇ ಹೆಚ್ಚಿದ್ದು, ಅದರಲ್ಲಿಯೇ ಫಂಗಸ್‌ ಹೆಚ್ಚು ಕಾಣಿಸಿಕೊಳ್ಳುತ್ತಿದೆ ಎಂದು ತಜ್ಞರು ತಿಳಿಸಿದ್ದಾರೆ.

ಸಕ್ರಿಯ ಪ್ರಕರಣಗಳು ಹೆಚ್ಚಿರುವ ಮೈಸೂರು, ತುಮಕೂರು, ಧಾರವಾಡ, ಶಿವಮೊಗ್ಗ, ಕಲಬುರಗಿ, ಕೋಲಾರ, ವಿಜಯಪುರದಲ್ಲಿ ಹೆಚ್ಚಿವೆ. ಇನ್ನು ಒಟ್ಟಾರೆ ಫಂಗಸ್‌ ಪ್ರಕರಣಗಳು ಒಂದು ವಾರದಲ್ಲಿಯೇ ನಾಲ್ಕು ಪಟ್ಟು ಹೆಚ್ಚಳವಾಗಿ ಒಂದು ಸಾವಿರ ಗಡಿದಾಟಿವೆ. ಫಂಗಸ್‌ ಪ್ರಕರಣ ಹೆಚ್ಚಿರುವ ರಾಜ್ಯಗಳಲ್ಲಿ ಕರ್ನಾಟಕ ಐದನೇ ಸ್ಥಾನದಲ್ಲಿದೆ.

ಮಧುಮೇಹಿಗಳಲ್ಲಿ ಯಾಕೆ ಹೆಚ್ಚು?: ರೋಗ ನಿರೋಧಕಶಕ್ತಿ ಕಡಿಮೆ ಇರುವವರಿಗೆ ಮಾತ್ರ ಫಂಗಸ್‌ ಹಾನಿ ಮಾಡುತ್ತದೆ. ಮಧುಮೇಹಿಗಳಲ್ಲಿ ಸಾಮಾನ್ಯ ಜನರಿಗೆ ಹೋಲಿಸಿದರೆ ಮೊದಲೇ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಅವರಿಗೆ ಸ್ಟಿರಾಯ್ಡ ನೀಡುವುದರಿಂದ ಅಡ್ಡಪರಿಣಾಮವಾಗಿ ಮಧುಮೇಹ ಮತ್ತಷ್ಟು ಹೆಚ್ಚಳವಾಗುತ್ತದೆ. ಇದರಿಂದ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ ಎಂದು ಮಧುಮೇಹಿಗಳ ಸಂಶೋ ಧನಾ ಸಂಸ್ಥೆಯ ಸದಸ್ಯ ತಜ್ಞ ಡಾ.ಅರವಿಂದ್‌ ತಿಳಿಸಿದ್ದಾರೆ.

Advertisement

ಮಧುಮೇಹಿಗಳು ಎರಡು ವಾರ ಎಚ್ಚರ: ಗುಣಮುಖರಾದವರಲ್ಲಿಯೂ ಫಂಗಸ್‌ ಕಾಣಿಸಿಕೊಳ್ಳುತ್ತಿದೆ. ಕೊರೊನಾ ಸೋಂಕಿನಿಂದ ಗುಣಮುಖರಾದ ಮಧುಮೇಹಿಗಳು ಕನಿಷ್ಠ 2 ವಾರ ಮುನ್ನೆಚ್ಚರಿಕೆ ವಹಿಸಬೇಕು. ಅನಗತ್ಯ ಓಡಾಟ ಮಾಡಬಾರದು. ಸ್ವತ್ಛತೆ ಕಾಪಾಡಿಕೊಳ್ಳಬೇಕು. ಮಧುಮೇಹ ನಿಯಂತ್ರಣಕ್ಕೆ ಒತ್ತು ನೀಡಬೇಕು. ಫಂಗಸ್‌ ಲಕ್ಷಣ ಕಾಣಿಸಿಕೊಂಡರೆ ತಡ ಮಾಡದೇ ವೈದ್ಯರನ್ನು ಸಂಪರ್ಕಿಸಬೇಕು ಎಂದು ಖ್ಯಾತ ವೈದ್ಯ ಎಚ್‌.ಅಂಜನಪ್ಪ ತಿಳಿಸಿದ್ದಾರೆ.

ಬಹುತೇಕರು ಲಸಿಕೆ ಪಡೆದಿಲ್ಲ: ಬ್ಲ್ಯಾಕ್‌ ಫಂಗಸ್‌ ಸೋಂಕಿತರಲ್ಲಿ ಶೇ.90ರಷ್ಟು ಮಧು ಮೇಹಿಗಳು ಎಂಬ ಅಂಶವು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಅಧ್ಯಯನದಿಂದ ತಿಳಿದುಬಂದಿದೆ. ಜತೆಗೆ ಫ‌ಂಗಸ್‌ ಸೋಂಕಿತರಲ್ಲಿ ಶೇ.80 ಮಂದಿ ಲಸಿಕೆ ಪಡೆದಿಲ್ಲ ಎಂದು ಹೇಳಿದ್ದಾರೆ. ಶೇ.5ಕ್ಕಿಂತಲೂ ಕಡಿಮೆ ಮಂದಿ ಕೊರೊನಾ ಲಸಿಕೆ ಪಡೆದಿದ್ದಾರೆ ಎಂಬುದು ಪ್ರಾಥಮಿಕ ಅಧ್ಯಯನದಿಂದ ತಿಳಿದು ಬಂದಿದೆ ಎಂದು ಮಿಂಟೋ ಆಸ್ಪತ್ರೆ ನಿರ್ದೇಶಕಿ ಡಾ.ಸುಜಾತಾ ರಾಥೋಡ್‌ ತಿಳಿಸಿದ್ದಾರೆ.

ರಾಜ್ಯದಲ್ಲಿ ಕೊರೊನಾ ಸೋಂಕು ಗಂಭೀರವಾಗಿ ಐಸಿಯು ಚಿಕಿತ್ಸೆ ಪಡೆಯುತ್ತಿರುವವರಲ್ಲಿ ಮಧುಮೇಹಿಗಳ ಪಾಲು ಹೆಚ್ಚಿದೆ. ಅದೇ ಕಾರಣಕ್ಕೆ ಬ್ಲ್ಯಾಕ್‌  ಫಂಗಸ್‌ ಪ್ರಕರಣಗಳು ಹೆಚ್ಚಿವೆ. ಫಂಗಸ್ ಸೋಂಕಿತರಲ್ಲಿ ಮಧುಮೇಹಿಗಳು ಶೇ.80ಕ್ಕೂ ಅಧಿಕ.- ಡಾ.ಭುಜಂಗ ಶೆಟ್ಟಿ. ಸರ್ಕಾರ ಸಲಹಾ ಸಮಿತಿ ಸದಸ್ಯರು, ನೇತ್ರತಜ್ಞರು

ದೇಶದ ಒಟ್ಟಾರೆ ಮಧುಮೇಹಿಗಳಲ್ಲಿ ಕರ್ನಾಟದ ಪಾಲು ಶೇ.8ರಷ್ಟಿದೆ. ಸೋಂಕು ತಗುಲಿ, ಚಿಕಿತ್ಸೆ ಸ್ಟಿರಾಯ್ಡ ನೀಡುವುದರಿಂದ ಮಧುಮೇಹ ಇನ್ನಷ್ಟು ಹೆಚ್ಚಾಗುತ್ತದೆ. ಇದು ಫಂಗಸ್‌ಗೆ ಕಾರಣವಾಗಿದೆ.- ಡಾ.ಅರವಿಂದ್‌, ಸದಸ್ಯರು, ಭಾರತೀಯ ಮಧುಮೇಹ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆ (ಆರ್‌ ಎಸ್‌ಎಸ್‌ಡಿಐ)

 

ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next