Advertisement

ಮಧುಮೇಹ ಆರೈಕೆ; ತಂತ್ರಜ್ಞಾನದ ಸಹಾಯದಿಂದ ಪ್ರಗತಿ

02:49 PM Dec 11, 2022 | Team Udayavani |

“ಚಹಾಕ್ಕೆ ಸಕ್ಕರೆ ಹಾಕಲೋ ಬೇಡವೋ?’ ಎಂಬುದು ಅತಿಥಿಗಳನ್ನು ಸಾಮಾನ್ಯವಾಗಿ ಕೇಳುವ ಪ್ರಶ್ನೆ. ಈ ಪ್ರಶ್ನೆ ಹೆಚ್ಚು ಹೆಚ್ಚು ಕೇಳಿಬರುತ್ತಿರುವುದು ನಾವು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿಯನ್ನು ಬೆಳೆಸಿಕೊಂಡಿದ್ದೇವೆ ಎಂಬ ಕಾರಣಕ್ಕಾಗಿ ಅಲ್ಲ. ಬದಲಾಗಿ ಮಧುಮೇಹಿಗಳ ಸಂಖ್ಯೆ ಅತೀ ಹೆಚ್ಚು ಇರುವ ದೇಶಗಳ ಪೈಕಿ ಭಾರತ ಮೊದಲ ಸ್ಥಾನದಲ್ಲಿದೆ ಎಂಬುದು ನಿಜಾಂಶ (ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿ).

Advertisement

ನಮ್ಮ ದೇಶ ಮಾತ್ರವಲ್ಲದೆ ಜಾಗತಿಕವಾಗಿಯೂ ಮಧುಮೇಹಕ್ಕೆ ತುತ್ತಾಗುತ್ತಿರುವವರ ಸಂಖ್ಯೆ ಅಪಾಯಕಾರಿ ವೇಗದಲ್ಲಿ ಹೆಚ್ಚುತ್ತಿದೆ; ವಿಷಾದದ ಸಂಗತಿ ಎಂದರೆ, ಭಾರತದಲ್ಲಿ ಇರುವ ಮಧುಮೇಹ ರೋಗಿಗಳಲ್ಲಿ ದಕ್ಷಿಣ ಭಾರತದ ರಾಜ್ಯಗಳ ಪಾಲು ಅತೀ ಹೆಚ್ಚು, ಇದರಿಂದಾಗಿ ಭಾರತವು ಮಧುಮೇಹದ ರಾಜಧಾನಿ ಎಂಬ ಕುಖ್ಯಾತಿಯನ್ನು ಗಳಿಸುವಂತಾಗಿದೆ.

ಮಧುಮೇಹ ಕಾಯಿಲೆಯು ಮೇಲ್ನೋಟಕ್ಕೆ ಪ್ರಶಾಂತವಾಗಿದ್ದು ಆಳದಲ್ಲಿ ತೀವ್ರ ಸುಳಿ ಮತ್ತು ಪ್ರವಾಹಗಳನ್ನು ಹೊಂದಿರುವ ನೀರಿನಂತೆ – ಮೇಲ್ನೋಟಕ್ಕೆ ನಿರಪಾಯಕಾರಿಯಾಗಿ ಕಾಣಿಸುತ್ತದೆ, ಆದರೆ ಅದರ ಮಾರಕತೆಯನ್ನು ನಿರ್ಲಕ್ಷಿಸಿದರೆ ಅಪಾಯ ತಪ್ಪಿದ್ದಲ್ಲ. ಮಧುಮೇಹಕ್ಕೆ ಔಷಧ ಚಿಕಿತ್ಸೆ ಲಭ್ಯವಿದ್ದು, ಅನಿವಾರ್ಯವಾದರೂ ಅದರ ನಿಯಂತ್ರಣದಲ್ಲಿ ಸ್ವ ನಿಯಂತ್ರಣ ಕಾರ್ಯವಿಧಾನಗಳು (ಡಿಎಸ್‌ಎಂ ಕಾರ್ಯವಿಧಾನಗಳು) ಅಷ್ಟೇ ಪ್ರಾಮುಖ್ಯವನ್ನು ಹೊಂದಿವೆ.

ತಂತ್ರಜ್ಞಾನದ ಸಹಾಯದಿಂದ ಮಧುಮೇಹದ ಸ್ವ ನಿಯಂತ್ರಣವನ್ನು ಮಾಡಿಕೊಳ್ಳುವ ಬಗ್ಗೆ ತಂತ್ರಜ್ಞಾನದ ಸಹಾಯದಿಂದ ಪ್ರಗತಿ ಮಧುಮೇಹ ರೋಗಿಗಳಿಗೆ ಅರಿವು ಮೂಡಿಸಿ ಅವರು ಕಾರ್ಯಪ್ರವೃತ್ತರಾಗುವಂತೆ ಮಾಡಿದರೆ ಔಷಧ ಆರೈಕೆಯ ಮೇಲಣ ಹೊರೆ ತಂತಾನೇ ಕಡಿಮೆಯಾಗುತ್ತದೆ. ದೀರ್ಘ‌ಕಾಲೀನ ಮಧುಮೇಹ ರೋಗಿಗಳು ತಮ್ಮ ರಕ್ತದ ಸಕ್ಕರೆಯ ಅಂಶವನ್ನು ಆಗಾಗ ತಪಾಸಣೆ ಮಾಡಿಕೊಳ್ಳುತ್ತಾರೆ ಎಂಬುದು ಅಧ್ಯಯನಗಳಿಂದ ದೃಢಪಟ್ಟಿದೆ.

ಆದರೆ ಗ್ಲುಕೋಸ್‌ ಮಟ್ಟಗಳನ್ನು ಕಂಡುಕೊಂಡ ಬಳಿಕ ಏನು ಮಾಡುತ್ತಾರೆ ಎಂಬುದು ಬಹಳ ಮುಖ್ಯ. ಅಂದರೆ, ಅವರು ತಮ್ಮ ಆಹಾರಶೈಲಿಯ ಮೇಲೆ ಹೇಗೆ ನಿಗಾ ಇರಿಸಿದ್ದಾರೆ, ದೈಹಿಕ ಚಟುವಟಿಕೆಗಳನ್ನು ನಡೆಸುತ್ತಾರೆ ಎಂಬುದು ನಿರ್ಣಾಯಕ ಪಾತ್ರ ವಹಿಸುತ್ತದೆ.

Advertisement

ಜತೆಗೆ ಔಷಧಗಳನ್ನು ನಿಯಮಿತವಾಗಿ ಸೇವಿಸುತ್ತಾರೆಯೇ, ರಕ್ತ ಪರೀಕ್ಷೆಗಳನ್ನು ನಿಯಮಿತವಾಗಿ ಮಾಡಿಸಿಕೊಳ್ಳುತ್ತಾರೆಯೇ, ಮಧುಮೇಹದಿಂದಾಗಿ ಉಂಟಾಗುವ ಇತರ ಆರೋಗ್ಯ ಸಮಸ್ಯೆಗಳ ಬಗ್ಗೆ ನಿಗಾ ಹೊಂದಿರುತ್ತಾರೆಯೇ ಎಂಬ ಪ್ರಶ್ನೆಗಳಿವೆ.

ಈ ಎಲ್ಲ ಮಾಹಿತಿಗಳು ವೈದ್ಯರಿಗೆ ನಿಖರವಾಗಿ ಲಭ್ಯವಿದ್ದರೆ ಮಧುಮೇಹದ ಉತ್ತಮ ವೈದ್ಯಕೀಯ ನಿರ್ವಹಣೆಗೆ ಸಾಕಷ್ಟು ಅನುಕೂಲವಾಗುತ್ತದೆ. ಮಧುಮೇಹಿಗಳಾದ ವಯಸ್ಕರನ್ನು ದೊಡ್ಡ ಸಂಖ್ಯೆಯಲ್ಲಿ ಹೊಂದಿರುವ ದೇಶಗಳ ಪೈಕಿ ಭಾರತ ಜಗತ್ತಿನಲ್ಲಿಯೇ ದ್ವಿತೀಯ ಸ್ಥಾನದಲ್ಲಿದೆ ಎಂಬುದಾಗಿ ಭಾರತೀಯ ವೈದ್ಯಕೀಯ ಅಧ್ಯಯನ ಮಂಡಳಿ (ಐಸಿಎಂಆರ್‌) ಹೇಳುತ್ತದೆ.

ದೇಶದಲ್ಲಿ ಪ್ರತೀ ಆರು ಮಂದಿ ವಯಸ್ಕರಲ್ಲಿ ಒಬ್ಬರು ಮಧುಮೇಹಿಗಳಾಗಿರುತ್ತಾರೆ ಎಂಬುದು ಇದನ್ನು ಸಾಬೀತುಪಡಿಸುವ ಅಂಕಿಅಂಶ. ಉಡುಪಿ ಜಿಲ್ಲೆಯನ್ನು ತೆಗೆದುಕೊಂಡರೆ ಇಲ್ಲಿನ ಗ್ರಾಮೀಣ ಜನಸಮುದಾಯದಲ್ಲಿ ಶೇ. 85 ಮಂದಿ ಮಧುಮೇಹಿಗಳಾಗಿದ್ದಾರೆ.

ಇದು ಪರಿಸ್ಥಿತಿಯ ಗಂಭೀರತೆಯನ್ನು ಸಾರಿ ಹೇಳುತ್ತದೆ. ಪರಿಸ್ಥಿತಿಯನ್ನು ಪರಿಗಣಿಸಿ ಹೇಳುವುದಾದರೆ, ಈ ಕಾಯಿಲೆ ವ್ಯಾಪಿಸುತ್ತಿರುವುದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸ್ವಯಂ ತಪಾಸಣೆ ಮತ್ತು ಸ್ವಯಂ ಆರೈಕೆಯಂತಹ ರೂಢಿಗತ ಮಧುಮೇಹ ನಿರ್ವಹಣ ಕ್ರಮಗಳನ್ನು ಮೀರಿದ ಕ್ರಮಗಳ ಬಗ್ಗೆ ನಾವು ಆಲೋಚನೆ ನಡೆಸಬೇಕಾಗಿದೆ.

ದೇಶದಲ್ಲಿ ಮೊಬೈಲ್‌ ಫೋನ್‌ ಜಾಲ ವ್ಯಾಪಕವಾಗಿ ವಿಸ್ತರಿಸಿರುವುದು ಈ ವಿಚಾರದಲ್ಲಿ ನಾವು ಹೊಂದಿರುವ ತಂತ್ರಜ್ಞಾನ ಸಂಬಂಧಿ ಅನುಕೂಲವಾಗಿದೆ. ವಿವಿಧ ಬೆಲೆ ಶ್ರೇಣಿಗಳಲ್ಲಿ ಗ್ಲುಕೋಮೀಟರ್‌ಗಳು ಲಭ್ಯವಿರುವುದನ್ನು ಕೂಡ ಈ ಉಪಕ್ರಮಕ್ಕೆ ಪೂರಕ ಅಂಶವಾಗಿ ಉಪಯೋಗಿಸಿಕೊಳ್ಳಬಹುದು.

ಈ ಎರಡು ತಾಂತ್ರಿಕ ಮುನ್ನಡೆಗಳನ್ನು ಸಂಯೋಜಿಸಿದರೆ ಅದು ಮಧುಮೇಹದ ಸ್ವಯಂ ಆರೈಕೆಯಲ್ಲಿ ಒಂದು ಬದಲಾವಣೆಯನ್ನು ತರಬಲ್ಲುದಾಗಿದೆ. ಮಧುಮೇಹದ ಮೇಲೆ ಸ್ವಯಂ ನಿಗಾ ಇರಿಸಿಕೊಳ್ಳುವುದು ಮತ್ತು ಗ್ಲುಕೋಮೀಟರ್‌ ತೋರಿಸುವ ಅಂಕೆಸಂಖ್ಯೆಗಳನ್ನು ಸರಿಯಾಗಿ ದಾಖಲೀಕರಣ ಮಾಡಿಕೊಳ್ಳುವುದು ಮಧುಮೇಹದ ಸ್ಥಿತಿಗತಿಯ ಮೇಲೆ ಸತತ ನಿರೀಕ್ಷಣೆ ಹೊಂದಿ ಅದನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ.

ಹೀಗಾಗಿ ಇದು ವೈದ್ಯರು ಮತ್ತು ರೋಗಿಯ ನಡುವೆ ಒಂದು ಉತ್ತಮ ಸಂವಹನ ಕಾರ್ಯತಂತ್ರವಾಗಬಲ್ಲುದು. ಇದು ರೋಗಿಯ ಪಾಲಿಗೂ ಒಂದು ಪರೀಕ್ಷಕ ವಿಷಯ ಮತ್ತು ಶಿಕ್ಷಣ ವಿಚಾರವಾಗಬಲ್ಲುದು. ವ್ಯಕ್ತಿ ತನ್ನ ವೈದ್ಯಕೀಯ ದಾಖಲೆಗಳನ್ನು ಹೀಗೆ ವ್ಯವಸ್ಥಿತವಾಗಿ ಇರಿಸಿಕೊಳ್ಳುವ ಪರಿಕಲ್ಪನೆಯನ್ನು ವೈಯಕ್ತಿಕ ಆರೋಗ್ಯ ದಾಖಲೆ (ಪರ್ಸನಲ್‌ ಹೆಲ್ತ್‌ ರೆಕಾರ್ಡ್‌-ಪಿಎಚ್‌ಆರ್‌) ಎಂದು ಕರೆಯಲಾಗುತ್ತದೆ.

ಉತ್ತಮ ಮತ್ತು ವಿವೇಕಯುತ ನಿರ್ಣಯಗಳನ್ನು ತೆಗೆದುಕೊಳ್ಳಲು ಇದು ವೈದ್ಯರು ಮತ್ತು ರೋಗಿ – ಇಬ್ಬರಿಗೂ ಸಹಾಯ ಮಾಡುತ್ತದೆ. ಈ ಪರಿಕಲ್ಪನೆಯು ನಗರ ಪ್ರದೇಶಗಳಲ್ಲಿ ಜನಪ್ರಿಯತೆ ಪಡೆದುಕೊಳ್ಳುತ್ತಿದ್ದು, ಇದನ್ನು ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸಬಹುದಾಗಿದೆ.

ಆರೋಗ್ಯ ಮಾಹಿತಿ, ಅಂಕಿಅಂಶಗಳನ್ನು ದಾಖಲಿಸಿ ಇರಿಸಿಕೊಳ್ಳುವುದಕ್ಕೆ ಸಹಾಯ ಮಾಡುವ ಹಲವು ಆ್ಯಪ್‌ ಗಳು ಆ್ಯಪ್‌ ಸ್ಟೋರ್‌ಗಳಲ್ಲಿ ಲಭ್ಯವಿವೆ. ರಕ್ತದ ಗ್ಲುಕೋಸ್‌ ಮಟ್ಟದ ಸ್ವಯಂ ನಿಗಾ (ಎಸ್‌ಎಂಬಿಜಿ) ಅಭ್ಯಾಸ ಇರಿಸಿಕೊಂಡು ತಮ್ಮ ಮಧುಮೇಹದ ಸ್ವಯಂ ನಿರ್ವಹಣ ಚಟುವಟಿಕೆಗಳನ್ನು ನಿಖರವಾಗಿ ದಾಖಲಿಸಿಕೊಳ್ಳುವವರು ಗ್ಲುಕೋಸ್‌ ಮಟ್ಟ ನಿಯಂತ್ರಣದಲ್ಲಿ ಇರುವುದು, ಜೀವನ ಗುಣಮಟ್ಟ ಚೆನ್ನಾಗಿರುವುದು ಮತ್ತು ಆರೋಗ್ಯಪೂರ್ಣರಾಗಿ ಇರುವಂತಹ ಮಧುಮೇಹ ಸಂಬಂಧಿ ಉತ್ತಮ ಫ‌ಲಿತಾಂಶಗಳನ್ನು ಪಡೆದಿರುವುದನ್ನು ಪಾಶ್ಚಾತ್ಯ ದೇಶಗಳಲ್ಲಿ ನಡೆಸಲಾದ ಅಧ್ಯಯನಗಳು ತೋರಿಸಿಕೊಟ್ಟಿವೆ.

ಮೊಬೈಲ್‌ ಆಧಾರಿತ ವೈಯಕ್ತಿಕ ಆರೋಗ್ಯ ದಾಖಲೆ ಇರಿಸಿಕೊಳ್ಳುವ ಪರಿಕಲ್ಪನೆಯು ರೋಗಿಯನ್ನು ಸಶಕ್ತಗೊಳಿಸುತ್ತದೆ ಮಾತ್ರವಲ್ಲದೆ ತಮ್ಮ ಆರೋಗ್ಯ ಗುರಿಗಳನ್ನು ಕ್ಲಪ್ತ ಕಾಲದಲ್ಲಿ ಸಾಧಿಸುವ ಹೊಣೆಗಾರಿಕೆಯ ಪ್ರಜ್ಞೆಯನ್ನು ಜಾಗೃತಗೊಳಿಸುತ್ತದೆ. ಜತೆಗೆ ರೋಗಿಗಳು ತಾವು ಹೊಂದಿರುವ ಮಧುಮೇಹ ಎಂಬ ದೀರ್ಘ‌ಕಾಲೀನ ಆರೋಗ್ಯ ಸ್ಥಿತಿಯನ್ನು ಸ್ವಯಂ ನಿರ್ವಹಣೆ ಮಾಡಿಕೊಳ್ಳುವುದಕ್ಕೆ ವೈದ್ಯರಿಗೆ ಸಹಾಯ ಮಾಡುತ್ತದೆ.

-ಜೀನಾ ಮರಿಯಾ ಸ್ಕರಿಯಾ, ಅಸಿಸ್ಟೆಂಟ್‌ ಪ್ರೊಫೆಸರ್‌, ಹೆಲ್ತ್‌ ಇನ್‌ ಫಾರ್ಮೇಶನ್‌ ಮ್ಯಾನೇಜ್‌ಮೆಂಟ್‌ ವಿಭಾಗ, ಎಂಸಿಎಚ್‌ಪಿ, ಮಾಹೆ, ಮಣಿಪಾಲ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಜನರಲ್‌ ಮೆಡಿಸಿನ್‌ ವಿಭಾಗ, ಕೆಎಂಸಿ, ಮಾಹೆ, ಮಂಗಳೂರು)

Advertisement

Udayavani is now on Telegram. Click here to join our channel and stay updated with the latest news.

Next