ಬಹುತೇಕ ಹೊಸ ಪ್ರತಿಭೆಗಳೆ ಸೇರಿ ನಿರ್ಮಿಸುತ್ತಿರುವ “ಧ್ರುವ 369′ ಚಿತ್ರದ ಮುಹೂರ್ತ ಇತ್ತೀಚೆಗೆ ನೆರವೇರಿತು.
ಹಿರಿಯ ನಟ ರಮೇಶ್ ಭಟ್ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರೆ, “ಟಕ್ಕರ್’ ಖ್ಯಾತಿಯ ನಟ ಮನೋಜ್ ಕುಮಾರ್ ಕ್ಯಾಮರಾ ಸ್ವಿಚ್ ಆನ್ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ. ಮ ಹರೀಶ್ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದು, ಚಿತ್ರತಂಡಕ್ಕೆ ಶುಭ ಹಾರೈಸಿದರು.
“ಅಚಿಂತ್ಯಃ ಸ್ಟುಡಿಯೋಸ್’ ಬ್ಯಾನರ್‌ನಲ್ಲಿ ಮಂಗಳೂರು ಮೂಲದ ಗ್ರಾಫ್ರಿಕ್ಸ್ ಡಿಸೈನರ್ ಹಾಗೂ ಉದ್ಯಮಿ ಶ್ರೀಕೃಷ್ಣ ಕಾಂತಿಲ ನಿರ್ಮಿಸುತ್ತಿರುವ “ಧ್ರುವ 369′ ಚಿತ್ರಕ್ಕೆ ಶಂಕರನಾಗ್ ಎಸ್. ಎಸ್ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಹಿರಿಯ ನಟ ರಾಘವೇಂದ್ರ ರಾಜಕುಮಾರ್, ರಮೇಶ್ ಭಟ್, ಪ್ರತಿಭಾ, ಅತೀಶ್ ಎಸ್. ಶೆಟ್ಟಿ, ರೋಹನ್ ಮೂಡಬಿದ್ರೆ, ಪ್ರೇಮ್ ಕನ್ನಡರಾಜು, ಅರವಿಂದ ಸಾಗರ್, ದೀಪಕ್ ಶೆಟ್ಟಿ, ಕೆ. ಸುಬ್ಬಣ್ಣ ಭಟ್, ಚಂದನ, ರಮ್ಯಾ, ಚಂದ್ರಿಕಾ, ಭಾಸ್ಕರ್ ಮಣಿಪಾಲ್, ಸಾಮ್ರಾಟ್ ಶ್ರೀನಿವಾಸ್, ಪ್ರಶಾಂತ್ ಮತ್ತಿತರರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
ಇದೇ ವೇಳೆ ಚಿತ್ರದ ಕಥಾಹಂದರದ ಬಗ್ಗೆ ಮಾತನಾಡಿದ ನಿರ್ದೇಶಕ ಶಂಕರ ನಾಗ್ ಎಸ್. ಎಸ್, “ಇದೊಂದು ಮೈಥಾಲಜಿ ಸಬ್ಜೆಕ್ಟ್ ಸಿನಿಮಾ. ವಿಜ್ಞಾನ ಮತ್ತು ಪುರಾಣ ವಿಷಯಗಳನ್ನು ತೆಗೆದುಕೊಂಡು ಈ ಸಿನಿಮಾ ಮಾಡಲಾಗುತ್ತಿದೆ. ಭೂಮಿಯಿಂದ ನೋಡಿದಾಗ ಧ್ರುವ ನಕ್ಷತ್ರ ಒಂದೇ ಎಂಬಂತೆ ಭಾಸವಾಗುತ್ತದೆ. ಆದರೆ, ವಾಸ್ತವದಲ್ಲಿ ಧ್ರುವ ನಕ್ಷತ್ರ ಅನ್ನೋದು ಆರು ನಕ್ಷತ್ರಗಳ ಒಂದು ಪುಂಜ. ಇನ್ನು 369 ಎಂಬುದು ಯುನಿವರ್ಸಲ್ ನಂಬರ್ ಆಗಿರುವುದರಿಂದ ಅದನ್ನು ಮ್ಯಾಜಿಕ್ ನಂಬರ್ ಅಂತಲೂ ಕರೆಯುತ್ತಾರೆ. ಅದಕ್ಕೂ ಕೂಡ ಬೇರೆಯದ್ದೇ ಆಯಾಮವಿದೆ. ಕಥೆಯಲ್ಲಿ ಇವರೆಡು ಸೇರಿದರೆ ಏನು ಆಗುತ್ತದೆ ಎಂಬುದನ್ನು ಹೇಳಲಾ ಗುತ್ತದೆ. ಹಾಗಾಗಿ ಸಿನಿಮಾದ ಟೈಟಲ್‌ಗೆ “ಧ್ರುವ 369′ ಅಂಥ ಟೈಟಲ್ ಇಡಲಾಗಿದೆ. ಇಡೀ ಸಿನಿಮಾ ಫ್ಯಾಂಟಸಿಯಾಗಿ ನಡೆಯುತ್ತದೆ. ಪುರಾತನ ಕಾಲದ ಕಥೆಗಳೇ ಈ ಸಿನಿಮಾದ ಕಥೆಗೂ ಪ್ರೇರಣೆಯಾಗಿದೆ. ಸನ್ನಿವೇಶಕ್ಕೆ ಅನುಗುಣವಾಗಿ ಸಂಸðತ ಶ್ಲೋಕಗಳು ಸಿನಿಮಾದಲ್ಲಿ ಬರಲಿದೆ’ ಎಂದು ವಿವರಣೆ ನೀಡಿದರು.
“ಧ್ರುವ 369′ ಚಿತ್ರಕ್ಕೆ ಹರ್ಷ ಪದ್ಯಾಣ ಛಾಯಾಗ್ರಹಣವಿದ್ದು, ಚಿತ್ರದ ಮೂರು ಹಾಡುಗಳಿಗೆ ಸತೀಶ್ ಬಾಬು ಸಂಗೀತ ಸಂಯೋಜಿಸುತ್ತಿದ್ದಾರೆ. ಬೆಂಗಳೂರು, ಮಂಗಳೂರು, ಉಡುಪಿ, ಮುರುಡೇಶ್ವರ, ಕೋಲಾರ, ಚಿಕ್ಕಬಳ್ಳಾಪುರ ಮೊದಲಾದ ಕಡೆಗಳಲ್ಲಿ “ಧ್ರುವ 369′ ಚಿತ್ರೀಕರಣ ನಡೆಯಲಿದೆ.