Advertisement
ಮೊದಲು ಬ್ಯಾಟಿಂಗ್ ಮಾಡಿದ್ದ ಬಂಗಾಲ ಭರ್ಜರಿ 329 ರನ್ ಬಾರಿಸಿತ್ತು. ಇದಕ್ಕುತ್ತರವಾಗಿ ಧೋನಿ ಮತ್ತು ಇಶಾಂಕ್ ಜಗ್ಗಿ ಅವರ ಹೋರಾಟದ ಹೊರತಾಗಿಯೂ ಝಾರ್ಖಂಡ್ ಸರಿಯಾಗಿ 50 ಓವರ್‌ಗಳಲ್ಲಿ 288 ರನ್ನಿಗೆ ಆಲೌಟಾಗಿ ಸೋಲನ್ನು ಒಪ್ಪಿಕೊಂಡಿತು.
ದೊಡ್ಡ ಮೊತ್ತ ಬೆನ್ನು ಹತ್ತಿದ ಧೋನಿ ಪಡೆ 20 ರನ್ ಸೇರಿಸಿದಾಗ ಪ್ರತ್ಯುಶ್ ಸಿಂಗ್ ವಿಕೆಟ್ ಕಳೆದುಕೊಂಡಿತು. ಬಂಗಾಲ ಬೌಲರ್‌ಗಳ ಚುರುಕಿನ ದಾಳಿಗೆ ಝಾರ್ಖಂಡ್ ಬ್ಯಾಟ್ಸ್‌ಮನ್‌ಗಳು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗಿಗೆ ಇಳಿದ ಧೋನಿ ಝಾರ್ಖಂಡ್‌ಗೆ ಗೆಲುವಿನ ಆಸೆ ತೋರಿಸಿದ್ದರು. 66 ಎಸೆತ ಎದು ರಿಸಿದ ಧೋನಿ 4 ಭರ್ಜರಿ ಸಿಕ್ಸರ್, 2 ಬೌಂಡರಿ ಸೇರಿದಂತೆ 70 ರನ್ ಬಾರಿಸಿದ್ದರು. ಆದರೆ ಸ್ಪಿನ್ನರ್ ಓಜಾ ಎಸೆತಕ್ಕೆ ಬೋಲ್ಡ್ ಆಗಿ ನಿರಾಸೆ ಮೂಡಿಸಿದರು. ಧೋನಿ ಮತ್ತು ಇಶಾಂಕ್ ಜಗ್ಗಿ 5ನೇ ವಿಕೆಟ್‌ಗೆ 97 ರನ್ ಜತೆಯಾಟ ನೀಡಿದ್ದರು. ಆದರೆ ಉಳಿದ ಬ್ಯಾಟ್ಸ್‌ಮನ್‌ಗಳು ದೊಡ್ಡ ಮೊತ್ತ ಬಾರಿಸುವಲ್ಲಿ ವೈಫಲ್ಯ ಎದುರಿಸಿದರು. ಇಶಾಂಕ್ ಜಗ್ಗಿ (59) ಅರ್ಧ ಶತಕ ದಾಖಲಿಸಿ ಘೋಷ್‌ಗೆ ವಿಕೆಟ್ ಒಪ್ಪಿಸಿದರು. ಸ್ಪಿನ್ನರ್ ಪ್ರಗ್ಯಾನ್ ಓಜಾ 71ಕ್ಕೆ 5 ವಿಕೆಟ್ ಪಡೆದು ಝಾರ್ಖಂಡ್‌ಗೆ ದೊಡ್ಡ ಹೊಡೆತ ನೀಡಿದರು.
Related Articles
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಬಂಗಾಲ ತಂಡಕ್ಕೆ ಶ್ರೀವತ್ಸ ಗೋಸ್ವಾಮಿ (101), ಅಭಿಮನ್ಯು ಈಶ್ವರನ್ (101) ಆಸರೆಯಾದರು. ತಂಡ ದೊಡ್ಡ ಮೊತ್ತ ಕಲೆಹಾಕುವಲ್ಲಿ ನೆರವಾದರು. ಈ ಜೋಡಿ ಮೊದಲ ವಿಕೆಟಿಗೆ 198 ರನ್ ದಾಖಲಿಸಿದರು. ಉಳಿದಂತೆ ಮನೋಜ್ ತಿವಾರಿ ಕೇವಲ 49 ಎಸೆತದಲ್ಲಿ 75 ರನ್ ಬಾರಿಸಿ ತಂಡದ ಮೊತ್ತ ತ್ರಿಶತಕದ ಗಡಿ ದಾಟಿಸಿದರು. ಜಾರ್ಖಂಡ್ ಪರ ವರುಣ್ ಏರಾನ್ 89ಕ್ಕೆ 2 ವಿಕೆಟ್ ಪಡೆದರು.
Advertisement
ಸಂಕ್ಷಿಪ್ತ ಸ್ಕೋರ್ಬಂಗಾಳ 50 ಓವರ್‌ಗಳಲ್ಲಿ ನಾಲ್ಕು ವಿಕೆಟಿಗೆ 329 (ಶ್ರೀವತ್ಸ ಗೋಸ್ವಾಮಿ 101, ಈಶ್ವರನ್ 101, ಮನೋಜ್ ತಿವಾರಿ 75, ವರುಣ್ ಅರಾನ್ 89ಕ್ಕೆ 2), ಝಾರ್ಖಂಡ್ 50 ಓವರ್‌ಗಳಲ್ಲಿ 288 (ವಿರಾಟ್ ಸಿಂಗ್ 24, ಕುಮಾರ ದೇವಭ್ರತ್ 37, ಸೌರಭ್ ತಿವಾರಿ 48, ಧೋನಿ 70, ಇಶಾಂಕ್ ಜಗ್ಗಿ 59, ಕಾನಿಷ್R ಸೇಥ್ 48ಕ್ಕೆ 2, ಸಯನ್ ಘೋಷ್ 52ಕ್ಕೆ 2, ಪ್ರಗ್ಯಾನ್ ಓಜಾ 71ಕ್ಕೆ 5). ಮಾ. 20ಕ್ಕೆ ಫೈನಲ್
ನಿಗದಿತ ವೇಳಾಪಟ್ಟಿಯಂತೆ ವಿಜಯ್ ಹಜಾರೆ ಟ್ರೋಫಿಯ ಫೈನಲ್ ಪಂದ್ಯ ಮಾ.19ಕ್ಕೆ ನಿಗದಿಯಾಗಿತ್ತು. ಆದರೆ ಮಾ.17 ರಂದು ದಿಲ್ಲಿಯಲ್ಲಿ ಝಾರ್ಖಂಡ್ ತಂಡ ಉಳಿದುಕೊಂಡಿದ್ದ ಹೊಟೇಲ್‌ನಲ್ಲಿ ಬೆಂಕಿ ಅವಘಡ ಸಂಭವಿಸಿತ್ತು. ಹೀಗಾಗಿ ಮಾ.17ರಂದು ನಡೆಯಬೇಕಿದ್ದ ಬಂಗಾಲ ಮತ್ತು ಝಾರ್ಖಂಡ್ ನಡುವಿನ ಸೆಮಿಫೈನಲ್ ಪಂದ್ಯವನ್ನು ಮಾ.18ಕ್ಕೆ ಮುದೂಡಲಾಗಿತ್ತು. ಹಾಗಾಗಿ ಫೈನಲ್ ಪಂದ್ಯವನ್ನು ಒಂದು ದಿನ ಮುಂದೂ ಡಲಾಗಿದ್ದು ಮಾ. 19ರ ಬದಲು ಮಾ. 20ರಂದು ನಡೆಯಲಿದೆ.