ಮುಂಬಯಿ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವವನ್ನು ಕೂಟದ ನಡುವಲ್ಲೇ ಧೋನಿಗೆ ವಹಿಸಲಾಗಿದೆ. ನಾಯಕತ್ವಕ್ಕೆ ರವೀಂದ್ರ ಜಡೇಜ ಸೂಕ್ತ ಅಭ್ಯರ್ಥಿ ಅಲ್ಲ ಎಂಬುದು ಈ ಮೂಲಕ ಸಾಬೀತಾಗಿದೆ.
ನಾಯಕತ್ವದ ಈ ಪರಿವರ್ತನೆ ಬಗ್ಗೆ ಚೆನ್ನೈ ಅಭಿಮಾನಿಗಳು ಬಹಳ ಖುಷಿ ಆಗಿದ್ದಾರೆ. ಆದರೆ ಪ್ರಶ್ನೆ ಇದಲ್ಲ. ಧೋನಿ ಇನ್ನೂ ಎಷ್ಟು ಕಾಲ ಚೆನ್ನೈ ತಂಡವನ್ನು ಮುಂದುವರಿಸಿಕೊಂಡು ಹೋಗಬಲ್ಲರು? ಇವರ ಉತ್ತರಾಧಿಕಾರಿ ಯಾರು? ಇದಕ್ಕೆ ಚೆನ್ನೈ ಫ್ರಾಂಚೈಸಿ ತುರ್ತಾಗಿ ಉತ್ತರ ಕಂಡುಕೊಳ್ಳಬೇಕಿದೆ.
ಧೋನಿ ನಿವೃತ್ತಿ ಯಾವಾಗ? ಮುಂದಿನ ವರ್ಷವೂ ಅವರು ಐಪಿಎಲ್ ಆಡುವರೇ? ಈ ಪ್ರಶ್ನೆಗಳೂ ಈಗ ಮಹತ್ವ ಪಡೆದಿವೆ. ಹೈದರಾಬಾದ್ ಎದುರಿನ ಟಾಸ್ ವೇಳೆ ಕಮೆಂಟೇಟರ್ ಡ್ಯಾನಿ ಮಾರಿಸನ್ ಅವರು ಧೋನಿಗೆ ಇಂಥದೊಂದು ಪ್ರಶ್ನೆ ಎಸೆದಿ ದ್ದಾರೆ. ಇದಕ್ಕೆ ನಗುತ್ತ ಪ್ರತಿಕ್ರಿಯಿಸಿದ ಧೋನಿ, “ಕಳೆದ ಸಲವೂ ಹಳದಿ ಜೆರ್ಸಿಯಲ್ಲಿ ಕಾಣಿಸಿಕೊಳ್ಳುತ್ತೇನೆ ಎಂದು ಹೇಳಿದ್ದೆ. ಈಗ ಆಡುತ್ತಿದ್ದೇನೆ. ಅದು ಹಳದಿ ಜೆರ್ಸಿಯಾಗಿರಲೀ, ಬೇರೆ ಯಾವುದೇ ಜೆರ್ಸಿಯಾಗಿರಲೀ… ಅದಕ್ಕಾಗಿ ನೀವು ಕಾಯಬೇಕಿದೆ’ ಎನ್ನುವ ಮೂಲಕ ತಾನು ಸದ್ಯ ಐಪಿಎಲ್‌ನಿಂದ ನಿವೃತ್ತಿಯಾಗುತ್ತಿಲ್ಲ ಎಂಬುದನ್ನು ಧೋನಿ ಪರೋಕ್ಷವಾಗಿ ತಿಳಿಸಿದ್ದಾರೆ.
ಇದನ್ನೂ ಓದಿ:ಐಪಿಎಲ್ 2022: ಗೆದ್ದು ನಿಟ್ಟುಸಿರು ಬಿಟ್ಟ ಕೋಲ್ಕತಾ ನೈಟ್ ರೈಡರ್ಸ್
ಹೀಗಾಗಿ ಮುಂದಿನ ವರ್ಷವೂ ಧೋನಿ ಐಪಿಎಲ್‌ನಲ್ಲಿ ಆಡುವುದು ಖಚಿತ. ಆಗ ಚೆನ್ನೈ ನಾಯಕನಾಗಿಯೂ ಮುಂದುವರಿಯಬಹುದು. ಈ ಕೂಟಕ್ಕೂ ಮುನ್ನ ಚೆನ್ನೈ ನಾಯಕತ್ವ ಬದಲಿಸಿದಾಗ ಧೋನಿ ನಿವೃತ್ತರಾಗುವರೆಂಬ ಊಹಾ ಪೋಹ ಹಬ್ಬಿತ್ತು. ಸದ್ಯ ಇದು ತಣ್ಣಗಾಗಿದೆ. ಆದರೆ ಧೋನಿ ಉತ್ತರಾಧಿಕಾರಿ ಯಾರು ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ.
ಗಾಯಕ್ವಾಡ್ ಮಾತ್ರ…
ಜಡೇಜ ಕೈಚೆಲ್ಲಿದ್ದಾರೆ. ಉಳಿದಿರುವ ಬ್ರಾವೊ, ರಾಯುಡು, ಉತ್ತಪ್ಪ ಅವರಿಗೆಲ್ಲ ವಯಸ್ಸಾಗಿದೆ. ಅಲ್ಲದೇ ಇವರ್ಯಾರೂ ಕ್ಯಾಪ್ಟನ್ಸಿ ಫಿಗರ್ ಅಲ್ಲ. ಇನ್ನುಳಿದಿರುವುದು ಋತುರಾಜ್ ಗಾಯಕ್ವಾಡ್ ಮಾತ್ರ. ಅವರನ್ನು ಈಗಲೇ ಮಾನಸಿಕವಾಗಿ ಸಜ್ಜುಗೊಳಿಸಿದರೆ ಚೆನ್ನೈಗೆ ಸಮರ್ಥ ನಾಯಕರೊಬ್ಬರು ಸಿಗಬಹುದು.