Advertisement

ವಾಂಖೇಡೆಯಲ್ಲಿ ಧೋನಿ-ಪಂತ್‌ ಮೇಲಾಟ

11:04 PM Apr 09, 2021 | Team Udayavani |

ಮುಂಬಯಿ: ಟೀಮ್‌ ಇಂಡಿಯಾ ನಾಯಕ-ಉಪನಾಯಕರ “ಬಿಗ್‌ ಗೇಮ್‌’ ಬಳಿಕ ಹಾಲಿ-ಮಾಜಿ ವಿಕೆಟ್‌ ಕೀಪರ್‌ಗಳ ರೋಚಕ ಮೇಲಾಟವೊಂದಕ್ಕೆ ಶನಿವಾರ ರಾತ್ರಿ ಮುಂಬಯಿಯ “ವಾಂಖೇಡೆ ಸ್ಟೇಡಿಯಂ’ ಸಾಕ್ಷಿಯಾಗಲಿದೆ. ಇಲ್ಲಿ ಎದುರಾಗುವ ತಂಡಗಳೆಂದರೆ ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌.

Advertisement

ಧೋನಿ ಐಪಿಎಲ್‌ನ ಯಶಸ್ವಿ ನಾಯಕ ರಲ್ಲೊಬ್ಬರು. ಆರಂಭದಿಂದಲೂ “ಚೆನ್ನೈ ಮನೆ’ಯಲ್ಲೇ ಉಳಿದಿರುವ ಅವರು ತಂಡವನ್ನು 3 ಸಲ ಚಾಂಪಿಯನ್‌ ಪಟ್ಟಕ್ಕೇರಿಸಿದ್ದಾರೆ. ಇನ್ನೊಂದೆಡೆ ರಿಷಭ್‌ ಪಂತ್‌ ಪಾಲಿಗೆ ಇದು ಮೊದಲ ನಾಯಕತ್ವದ ಯೋಗ. ಶ್ರೇಯಸ್‌ ಅಯ್ಯರ್‌ ಗಾಯಾಳಾಗಿ ಹೊರಗುಳಿದ ಕಾರಣ ತಂಡದ ನೇತೃತ್ವ ಪಂತ್‌ ಹೆಗಲೇರಿತು. ಇಲ್ಲಿ ಇನ್ನಷ್ಟು ಮಂದಿ ರೇಸ್‌ನಲ್ಲಿದ್ದರೂ ಫ್ರಾಂಚೈಸಿ ಪಂತ್‌ ಮೇಲೆ ವಿಶೇಷ ನಂಬಿಕೆ ಇರಿಸಿದೆ. ಯಶಸ್ವಿಯಾದರೆ ಪಂತ್‌ ಅವರನ್ನು ಟೀಮ್‌ ಇಂಡಿಯಾದ ಭವಿಷ್ಯದ ನಾಯಕನನ್ನಾಗಿ ರೂಪಿಸುವುದು ಇಲ್ಲಿನ ಲಾಜಿಕ್‌ ಆಗಿರಬಹುದು.

ಇತ್ತಂಡಗಳ ತದ್ವಿರುದ್ಧ ಸಾಧನೆ
ಡೆಲ್ಲಿ ಕ್ಯಾಪಿಟಲ್ಸ್‌ 2020ರ ರನ್ನರ್ ಅಪ್‌ ತಂಡ. ಐಪಿಎಲ್‌ ಇತಿಹಾಸದಲ್ಲೇ ಡೆಲ್ಲಿ ಪ್ರಶಸ್ತಿ ಸುತ್ತು ಪ್ರವೇಶಿಸಿದ ಮೊದಲ ನಿದರ್ಶನ ಇದಾಗಿತ್ತು. ಆದರೆ ಮುಂಬೈ ವಿರುದ್ಧ ಜೋಶ್‌ ತೋರುವಲ್ಲಿ ವಿಫ‌ಲವಾಯಿತು. ಈ ಬಾರಿ ಇನ್ನೂ ಒಂದು ಮೆಟ್ಟಿಲು ಮೇಲೇರುವುದು ಡೆಲ್ಲಿಯ ಯೋಜನೆ.

2020ರ ಫ‌ಲಿತಾಂಶವನ್ನು ಉಲ್ಲೇಖೀಸಿ ಹೇಳುವುದಾದರೆ ಚೆನ್ನೈನದ್ದು ಡೆಲ್ಲಿಗೆ ವಿರುದ್ಧವಾದ ನಿರ್ವಹಣೆ. ಧೋನಿ ಪಡೆ ಮೊದಲ ಸಲ ಪ್ಲೇ ಆಫ್ ಪ್ರವೇಶಿಸಲು ವಿಫ‌ಲವಾಗಿ 7ನೇ ಸ್ಥಾನಕ್ಕೆ ಕುಸಿದಿತ್ತು. ಬಹಳ ಬೇಗನೇ ಕೂಟದಿಂದ ನಿರ್ಗಮಿಸಿದ್ದು ಧೋನಿ ಅಭಿಮಾನಿಗಳ ಪಾಲಿಗೆ ಅತ್ಯಂತ ನೋವಿನ ಸಂಗತಿಯಾಗಿತ್ತು. ಈ ಬಾರಿ ತಂಡಕ್ಕೆ ಇಂಥ ಸ್ಥಿತಿ ಮರುಕಳಿಸದಂತೆ ಮಾಡುವ ಅತ್ಯಂತ ಮಹತ್ವದ ಜವಾಬ್ದಾರಿ “ಕೂಲ್‌ ಕ್ಯಾಪ್ಟನ್‌’ ಮೇಲಿದೆ.

ಡೆಲ್ಲಿಗೆ ಬ್ಯಾಟಿಂಗ್‌ ಬಲ
ಡೆಲ್ಲಿ ಬಲಿಷ್ಠ ಬ್ಯಾಟಿಂಗ್‌ ಪಡೆಯನ್ನು ಹೊಂದಿರುವ ತಂಡ. ಕಳೆದ ಸಲ 600 ರನ್‌ ಪೇರಿಸಿದ ಧವನ್‌, ವಿಜಯ್‌ ಹಜಾರೆಯಲ್ಲಿ 800 ರನ್‌ ಬಾರಿಸಿದ ಪೃಥ್ವಿ ಶಾ, ರಹಾನೆ, ಸ್ಮಿತ್‌, ಪಂತ್‌ ಬ್ಯಾಟಿಂಗ್‌ ಲೈನ್‌ಅಪ್‌ನಲ್ಲಿದ್ದಾರೆ. ಸ್ಟೋಯಿನಿಸ್‌, ಹೆಟ್‌ಮೈರ್‌, ಬಿಲ್ಲಿಂಗ್ಸ್‌ ವಿದೇಶಿ ಹಿಟ್ಟರ್.

Advertisement

ಬೌಲಿಂಗ್‌ ವಿಭಾಗದಲ್ಲಿ ಕಳೆದ ಸಲದ ಹೀರೋಗಳಾದ ರಬಾಡ-ನೋರ್ಜೆ ಮೊದಲ ಪಂದ್ಯಕ್ಕೆ ಲಭ್ಯರಿರುವುದಿಲ್ಲ. ಆದರೂ ತಂಡದ ಪೇಸ್‌ ಬ್ಯಾಟರಿ ವೀಕ್‌ ಆಗಿಲ್ಲ. ಇಶಾಂತ್‌, ಉಮೇಶ್‌ ಯಾದವ್‌, ವೋಕ್ಸ್‌ ಇದ್ದಾರೆ. ಸ್ಪಿನ್‌ ವಿಭಾಗ ಭಾರತದ ತ್ರಿವಳಿಗಳಾದ ಅಶ್ವಿ‌ನ್‌, ಅಕ್ಷರ್‌ ಪಟೇಲ್‌, ಅಮಿತ್‌ ಮಿಶ್ರಾ ಅವರಿಂದ ವೈವಿಧ್ಯಮಯವಾಗಿದೆ. ಆದರೆ ಕೊರೊನಾ ಸೋಂಕಿಗೆ ಒಳಗಾಗಿರುವ ಪಟೇಲ್‌ ಮೊದಲ ಪಂದ್ಯಕ್ಕೆ ಲಭ್ಯರಿರುವುದಿಲ್ಲ.

ರೈನಾ ಪುನರಾಗಮನ
ಚೆನ್ನೈ ತಂಡದ 2020ರ ವೈಫ‌ಲ್ಯಕ್ಕೆ ಸ್ಟಾರ್‌ ಬ್ಯಾಟ್ಸ್‌ಮನ್‌ ಸುರೇಶ್‌ ರೈನಾ ಅನುಪಸ್ಥಿತಿ ಕೂಡ ಒಂದು ಕಾರಣ. ಈ ಬಾರಿ ರೈನಾ ಆಗಮನದಿಂದ ಟಾಪ್‌ ಆರ್ಡರ್‌ ಹೆಚ್ಚು ಶಕ್ತಿಶಾಲಿಯಾಗಿದೆ. ರಾಬಿನ್‌ ಉತ್ತಪ್ಪ ಮೊದಲ ಸಲ ಚೆನ್ನೈ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ರವೀಂದ್ರ ಜಡೇಜ ಸಂಪೂರ್ಣ ಫಿಟ್‌ನೆಸ್‌ನೊಂದಿಗೆ ಸಜ್ಜಾಗಿರುವುದು ಚೆನ್ನೈ ಆತ್ಮವಿಶ್ವಾಸವನ್ನು ಹೊಂದಿದೆ. ಜತೆಗೆ 9 ಕೋಟಿ ರೂ. ಬೆಲೆಬಾಳುವ ಕರ್ನಾಟಕದ ಸ್ಪಿನ್‌ ಬೌಲಿಂಗ್‌ ಆಲ್‌ರೌಂಡರ್‌ ಕೆ. ಗೌತಮ್‌ ಮೇಲೆ ಭಾರೀ ನಿರೀಕ್ಷೆ ಇರಿಸಲಾಗಿದೆ.

ಗಾಯಕ್ವಾಡ್‌, ಡು ಪ್ಲೆಸಿಸ್‌, ರಾಯುಡು, ಬ್ರಾವೊ, ಧೋನಿ, ಆಲ್‌ರೌಂಡರ್‌ಗಳಾದ ಸ್ಯಾಮ್‌ ಕರನ್‌, ಮೊಯಿನ್‌ ಅಲಿ, ಠಾಕೂರ್‌, ತಾಹಿರ್‌ ಅವರಿಂದ ತಂಡ ಹೆಚ್ಚು ಸಮತೋಲನದಿಂದ ಕೂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next