Advertisement

ಕೊರೊನಾ ಐಸೋಲೇಷನ್‌ ವಾರ್ಡ್‌ಗೆ ಡಿಎಚ್‌ಒ ಭೇಟಿ

09:38 PM Mar 15, 2020 | Lakshmi GovindaRaj |

ತುಮಕೂರು: ನಗರದ ಶ್ರೀದೇವಿ ವೈದ್ಯಕೀಯ ಆಸ್ಪತ್ರೆಯಲ್ಲಿ ಭೇಟಿ ನೀಡಿ ಕೊರೊನಾ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ತೆರೆಯಲಾದ ವಿಶೇಷ ಐಸೋಲೇಷನ್‌ ವಾರ್ಡ್‌ಗಳಿಗೆ ಡಿಎಚ್‌ಒ ಡಾ.ಬಿ.ಆರ್‌ ಚಂದ್ರಿಕಾ ಭೇಟಿ ನೀಡಿ ಪರಿಶೀಲಿಸಿದರು.

Advertisement

ಕೊರೊನಾ ಸೋಂಕಿತರಿಗಾಗಿ ಕೊಠಡಿ ಹಾಗೂ ಚಿಕಿತ್ಸೆ ನೀಡಲು ಮಾಡಿಕೊಂಡ ಸಿದ್ಧತೆಗಳನ್ನು ಪರಿವೀಕ್ಷಣೆ ಮಾಡಿದರು. ಈ ವೇಳೆ ಮಾತನಾಡಿದ ಅವರು, ತುಮಕೂರು ಜಿಲ್ಲೆಯಲ್ಲಿ ಯಾವುದೇ ಕೊರೊನಾ ಪೀಡಿತರ ಪ್ರಕರಣ ದಾಖಲಾಗಿಲ್ಲ. ತುಮಕೂರು ಜಿಲ್ಲೆ ಸುರಕ್ಷಿತವಾಗಿದೆ. ಒಂದು ವೇಳೆ ಪತ್ತೆಯಾದಲ್ಲಿ ಚಿಕಿತ್ಸೆಗೆ ಬೇಕಾದ ಎಲ್ಲಾ ತಯಾರಿ ಮಾಡಿಕೊಳ್ಳಲಾಗಿದೆ ಎಂದರು.

ಮಾಹಿತಿ ಪಡೆಯಿರಿ: ಇತರೆ ದೇಶಗಳಿಂದ ಭಾರತಕ್ಕೆ ಬರುವವರನ್ನು ವಿಮಾನ ನಿಲ್ದಾಣ ಹಾಗೂ ಬಂದರುಗಳಲ್ಲಿಯೇ ತಪಾಸಣೆ ಮಾಡಲಾಗುತ್ತಿದೆ. ಒಂದು ವೇಳೆ ಯಾರಿಗಾದರೂ ವೈರಸ್‌ ಬಗ್ಗೆ ಸಂಶಯಗಳಿದ್ದಲ್ಲಿ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ ಎಂದು ಹೇಳಿದರು.

ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ: ಕಳೆದ ಎರಡ್ಮೂರು ದಿನಗಳಿಂದಲೂ ಪ್ರತಿಯೊಂದು ಮಾಹಿತಿಯನ್ನು ಪತ್ರಿಕೆಗಳ ಮೂಲಕ ತಿಳಿಸಲಾಗುತ್ತಿದೆ. ವಿದೇಶಗಳಿಂದ ಭಾರತಕ್ಕೆ ಬರುವವರನ್ನು ತಪಾಸಣೆ ಮಾಡಲಾಗುತ್ತಿದೆ. ಇಲ್ಲಿಯವರೆಗೆ ತಪಾಸಣೆ ಮಾಡಿದವರಲ್ಲಿಯೂ ಯಾವುದೇ ವೈರಸ್‌ ಪತ್ತೆಯಾಗಿಲ್ಲ. ಜನರು ಆತಂಕ ಪಡುವ ಅಗತ್ಯವಿಲ್ಲ. ರಾಜ್ಯದಿಂದ ಪ್ರತಿಯೊಂದು ಮಾಹಿತಿ ಡಿಎಚ್‌ಒಗಳಿಗೆ ತಿಳಿಯುತ್ತದೆ. ಈ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ವಿಶೇಷ ವಾರ್ಡ್‌ ಕಾರ್ಯಾರಂಭ: ಶ್ರೀದೇವಿ ಕಾಲೇಜಿನ ವೈದ್ಯಕೀಯ ನಿರ್ದೇಶಕ ಡಾ. ಆರ್‌.ರಮಣ್‌ ಹುಲಿನಾಯ್ಕರ್‌ ಮಾತನಾಡುತ್ತಾ, ಡಿಎಚ್‌ಒರವರು ನೀಡಿದ ಮಾರ್ಗದರ್ಶನದ ಪ್ರಕಾರ ಶ್ರೀದೇವಿ ಆಸ್ಪತ್ರೆಯಲ್ಲಿ 25 ಬೆಡ್‌ಗಳು ಐಸೋಲೇಷನ್‌ ವಾರ್ಡ್‌ ತೆರೆದಿದು, ಇದರಲ್ಲಿ 45ರವರೆಗೆ ಬೆಡ್‌ಗಳನ್ನು ಅಳವಡಿಸಬಹುದಾಗಿದೆ. ದಿನದ 24 ಗಂಟೆ ಚಿಕಿತ್ಸೆ ನೀಡಲು ಶ್ರೀದೇವಿ ಆಸ್ಪತ್ರೆ ಸನ್ನದ್ಧವಾಗಿದ್ದು ಅಗತ್ಯವಾದ ಔಷಧ, ಮೂಲಸೌಕರ್ಯಗಳನ್ನು ಒದಗಿಸಿದ ವಿಶೇಷ ವಾರ್ಡ್‌ ಕಾರ್ಯಾರಂಭ ಮಾಡಿದೆ. ಯಾವುದೇ ಪ್ರಕರಣ ದಾಖಲಾದರೂ ಅದನ್ನು ಎದುರಿಸಲು ಸನ್ನದ್ಧರಾಗಿದ್ದೇವೆ ಎಂದರು.

Advertisement

ಕಂಟ್ರೋಲ್‌ ರೂಂ: ಕೊರೊನಾ ವೈರಸ್‌ ಲಕ್ಷಣ ಕಂಡು ಬರುವ ವ್ಯಕ್ತಿಗಳಿಗೆ ಚಿಕಿತ್ಸೆ ನೀಡಲು ಸಕಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿಯಲ್ಲಿ ಕಂಟ್ರೋಲ್‌ ರೂಂ ತೆರೆಯಲಾಗಿದ್ದು, ಜನರು ಗೊಂದಲ ಪರಿಹರಿಸಿಕೊಳ್ಳಬಹುದು ಎಂದರು.  ಇತ್ತೀಚೆಗೆ ವಿದೇಶದಿಂದ ಬಂದಂತಹ ನೆರೆ-ಹೊರೆಯವರಲ್ಲಿ ಕೊರೊನಾ ಲಕ್ಷಣ ಕಂಡು ಬಂದರೆ ಜನಸಾಮಾನ್ಯರು ಕಂಟ್ರೋಲ್‌ ರೂಂಗೆ ಕರೆ ಮಾಡಿ ಮಾಹಿತಿ ತಿಳಿಸಬೇಕು. ವ್ಯಕ್ತಿಯ ಮಾಹಿತಿ ಆಧರಿಸಿ, ಆತನನ್ನು ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ತಿಳಿಸಿದರು.

ಸುಳ್ಳು ಸುದ್ದಿ ಹರಡಿದರೆ ಕ್ರಮ: ನಗರದಲ್ಲಿ ಸುಳ್ಳು ಸುದ್ದಿಗಳು ಪ್ರಚಾರವಾಗುತ್ತಿರುವುದರಿಂದ ಜನರು ಆತಂಕಗೊಳ್ಳುತ್ತಿದ್ದಾರೆ. ಈ ಬಗ್ಗೆ ಯಾವುದೇ ಗೊಂದಲಗಳಿದ್ದರೂ ನೇರವಾಗಿ ಜಿಲ್ಲಾಧಿಕಾರಿಗಳು ಹಾಗೂ ಆರೋಗ್ಯಾಧಿಕಾರಿಗಳು ಮಾಹಿತಿ ನೀಡುತ್ತಾರೆ. ಈ ಬಗ್ಗೆ ಮಾಧ್ಯಮಗಳು ಕೂಡ ಸರಿಯಾದ ಮಾಹಿತಿ ಇಲ್ಲದೆ, ಸುದ್ದಿಗಳನ್ನು ವರದಿ ಮಾಡಬಾರದು ಎಂದು ಮನವಿ ಮಾಡಿದರು.

ಶ್ರೀದೇವಿ ವೈದ್ಯಕೀಯ ವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಶಾಲಿನಿ, ಉಪಪ್ರಾಂಶುಪಾಲ ಡಾ.ರೇಖಾಗುರುಮೂರ್ತಿ, ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಚೆನ್ನಮಲ್ಲಯ್ಯ, ಮಾನವ ಸಂಪನ್ಮೂಲ ಮತ್ತು ಮಾಹಿತಿ ತಂತ್ರಜಾನ ನಿರ್ದೇಶಕ ಎಂ.ಎಸ್‌.ಪಾಟೀಲ್‌, ಶ್ರೀದೇವಿ ಆಡಳಿತಾಧಿಕಾರಿ ಟಿ.ವಿ.ಬಹ್ರದೇವಯ್ಯ, ಡಾ.ಸತ್ಯನಾರಾಯಣ, ಡಾ.ಕೇಶವರಾಜ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next