ಆಳಂದ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಚಲವರಾಜ ಅವರು ಶುಕ್ರವಾರ ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಅವ್ಯವಸ್ಥೆ, ಸಿಬ್ಬಂದಿ ಅಶಿಸ್ತು ಕುರಿತು ತರಾಟೆ ತೆಗೆದುಕೊಂಡಿದ್ದರೂ ಶನಿವಾರ ಪರಿಸ್ಥಿತಿ ಎಂದಿನಂತೆ ಮುಂದುವರೆದಿದ್ದು ವಿಪರ್ಯಾಸ.
ಶನಿವಾರ ಆಸ್ಪತ್ರೆ ಮುಖ್ಯ ಆಡಳಿತಾಧಿಕಾರಿ ಅವರನ್ನು ಒಳಗೊಂಡು ಎಲ್ಲ ವೈದ್ಯರು ಹಾಗೂ ಕೆಲವು ಸಿಬ್ಬಂದಿ ಎರಡು ಗಂಟೆ ಕಾಲ ವಿಳಂಬವಾಗಿ ಕರ್ತವ್ಯಕ್ಕೆ ಹಾಜರಾಗಿದ್ದು, ರೋಗಿಗಳು ಹಾಗೂ ಅವರನ್ನು ಕರೆದುಕೊಂಡು ಬಂದಿದ್ದ ಸಾರ್ವಜನಿಕರಲ್ಲಿ ಅಸಮಾಧಾನ ಉಂಟು ಮಾಡಿದೆ.
ಹೊರ ರೋಗಿಗಳ ತಪಾಸಣೆ ಮತ್ತು ಚಿಕಿತ್ಸೆಗೆ ಬೆಳಗ್ಗೆ 9 ಗಂಟೆಗೆ ಆಸ್ಪತ್ರೆ ಕಾರ್ಯ ಆರಂಭವಾಗುತ್ತದೆ ಎಂದು ಬರೆಯ ಲಾಗಿದೆ. ಆದರೆ ಶನಿವಾರ ಬೆಳಗ್ಗೆ 11:15 ಗಂಟೆಯಾದರೂ ವೈದ್ಯರು, ಕೆಲಸ ಸಿಬ್ಬಂದಿ ಬಂದಿರಲೇ ಇಲ್ಲ. ಹಲವಾರು ರೋಗಿಗಳು, ಸಂಬಂಧಿಕರು ಗಂಟೆಗಟ್ಟಲೇ ಕಾಯ್ದು ಖಾಸಗಿ ಆಸ್ಪತ್ರೆಗಳಿಗೆ ತೋರಿಸಲು ಹೋಗಬೇಕಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಷ್ಟಾದ ಮೇಲೂ ಬೆಳಗ್ಗೆ 11:15ಕ್ಕೆ ಬಂದ ವೈದ್ಯರು ರೋಗಿಗಳ ತಪಾಸಣೆ ಕೈಗೊಳ್ಳದೇ, ಬಾಯಿ ಮಾತಿನಲ್ಲೇ ಔಷಧ ಹೇಳಿ ಕಳಿಸಿದ್ದಾರೆ ಎಂದು ಆಸ್ಪತ್ರೆಗೆ ಆಗಮಿಸಿದ್ದ ಸಾರ್ವಜನಿಕರು ದೂರಿದ್ದಾರೆ.
ಹೃದಯ ಚಿಕಿತ್ಸೆಗೆ ಇಸಿಜಿ ಯಂತ್ರ ಸಣ್ಣ ಪ್ರಮಾಣದಲ್ಲಿದೆ. ದೊಡ್ಡ ಪ್ರಮಾಣದ ಯಂತ್ರ ಒದಗಿಸಲು ಮೇಲಧಿಕಾರಿಗಳಿಗೆ ಕೋರಿದ್ದೇವೆ. ಬೆಳಗಿನ ಜಾವ ಕಡ್ಡಾಯವಾಗಿ 9ರಿಂದ 10 ಗಂಟೆ ವರೆಗೆ ಕರ್ತವ್ಯ ನಿರತ ಎಲ್ಲ ವೈದ್ಯರಿಗೂ ಹಾಜರಿರುವಂತೆ ಶನಿವಾರವೇ ಸಭೆ ಕರೆದು ಸೂಚಿಸಿದ್ದೇನೆ. ಬಯೋಮೆಟ್ರಿಕ್ ಅಳವಡಿಸಲಾಗಿದೆ. ಒಪಿಡಿ ಕೇಂದ್ರಕ್ಕೆ ಮತ್ತು ಸಮಯಕ್ಕೆ ಸರಿಯಾಗಿ ಹಾಜರಿರುವಂತೆ ವೈದ್ಯರಿಗೆ ತಾಕೀತು ಮಾಡಲಾಗಿದೆ. ಮುಂದೆ ಹೀಗಾಗದಂತೆ ಎಚ್ಚರವಹಿಸಲಾಗುವುದು. ಸಮಯ ಪಾಲನೆ ಅಥವಾ ಕರ್ತವ್ಯದಲ್ಲಿ ನಿಷ್ಕಾಳಜಿ ತೋರುವ ಸಿಬ್ಬಂದಿ ವೇತನ ಕಡಿತಗೊಳಿಸಲಾಗುವುದು.
-ಚಂದ್ರಕಾಂತ ನರಿಬೋಳ, ಮುಖ್ಯ ಆಡಳಿತಾಧಿಕಾರಿ, ಸಾರ್ವಜನಿಕ ಆಸ್ಪತ್ರೆ
ಇದನ್ನೂ ಓದಿ: ಯುವ ರತ್ನ ಜತೆಗಿನ ಒಡನಾಟದ ಮೆಲುಕು…
ಆಕ್ಸಿಜನ್ ಘಟಕ ಅರಂಭ ಕುರಿತು ಪರಿಶೀಲನೆ ಮಾಡಿದ್ದೇವೆ, 3ನೇ ಹಂತದ ಕೋವಿಡ್ ಅಲೆ ತಡೆಗಟ್ಟಲು ಐಸಿಯು ಘಟಕ ತೆರೆಯಲು ಯೋಜಿಸಲಾಗಿದೆ. ಆಸ್ಪತ್ರೆಯಲ್ಲಿ ಸಾಮಾನ್ಯ ಎಕ್ಸರೆ ಇದೆ. ಪ್ರತಿನಿತ್ಯದ ತಪಾಸಣೆ ನಡೆಯುತ್ತಿದೆ. ಎಲ್ಲ ರೀತಿಯ ತಜ್ಞರನ್ನು ನೇಮಿಸಲಾಗಿದೆ. ವೈದ್ಯರು, ಸಿಬ್ಬಂದಿ ಸಮಯ ಪಾಲನೆ ಮಾಡಲು ಆಡಳಿತಾಧಿಕಾರಿಗೆ ಸೂಚಿಸಲಾಗಿದೆ. ಇಷ್ಟಾಗಿಯೂ ದುರ್ನಡತೆ ಕಂಡುಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು.
-ಚಲುವರಾಜ, ಡಿಎಚ್‌ಒ, ಕಲಬುರಗಿ