ಈ ಚಿತ್ರದಿಂದ ತುಂಬಾ ದುಡ್ಡು ನಿರೀಕ್ಷಿಸಬಾರದು, ಇದೊಂದು ಅನುಭವವಾಗಿರಬೇಕು ಎಂದು ಮೊದಲೇ ನಿರ್ಧರಿಸಿದ್ದರಂತೆ ನಿರ್ಮಾಪಕ ಕೆ. ರಾಜು. ಆದರೂ ಚಿತ್ರ ಬಿಡುಗಡೆಯ ಹಿಂದಿನ ದಿನ ಪುಕಪುಕ ಎನ್ನುತ್ತಿತ್ತಂತೆ. ಆದರೆ, ಶುಕ್ರವಾರ ಚಿತ್ರ ಬಿಡುಗಡೆಯಾಗಿ, ಜನ ಒಳ್ಳೆಯ ಮಾತಾಡುತ್ತಿದ್ದಂತೆಯೇ ಸ್ವಲ್ಪ ಧೈರ್ಯ ಬಂತಂತೆ. ಯಾವಾಗ ಎಲ್ಲ ಕಡೆಯಿಂದ ಒಳ್ಳೆಯ ರಿಪೋರ್ಟು ಬಂತೋ, ಆಗ ಅವರ ಮುಖದಲ್ಲಿ ಖುಷಿ ಮೂಡಿದೆ. ಆದರೆ, ಅವರಿಗಿಂಥ ಅಂದು ಖುಷಿಯಾಗಿದ್ದು ನಿರ್ದೇಶಕ ಶಿವತೇಜಸ್. ಶಿವು ಅದೆಷ್ಟು ಖುಷಿಯಾಗಿದ್ದರೆಂದರೆ, ಅವರ ಬಾಯಿಂದ ಮಾತೇ ಹೊರಡುತ್ತಿರಲಿಲ್ಲ. ಮಾತು ಹೊರಟರು ಅದು ಪದೇಪದೇ ರಿಪೀಟ್ ಆಗುತ್ತಲೇ ಇತ್ತು.
“ಚಿತ್ರ ಎಲ್ಲಾ ಕಡೆ ಚೆನ್ನಾಗಿ ಓಡ್ತಿದೆ ಸಾರ್. ಅದಕ್ಕೆ ಇಡೀ ತಂಡ, ಮಾಧ್ಯಮದವರು, ಜನ ಎಲ್ಲರೂ ಕಾರಣ. ಅಜೇಯ್ ಅವರನ್ನ ಹೊಸ ತರಹ ತೋರಿಸಬೇಕು ಅಂತ ಆಸೆ ಇತ್ತು. ಅದಕ್ಕೆ ಸರಿಯಾಗಿ ಅವರೂ ಸಹ ಸಪೋರ್ಟ್ ಮಾಡಿದರು. ಅದರಿಂದ ಚಿತ್ರ ಚೆನ್ನಾಗಿ ಬಂದಿದೆ. ಒಟ್ಟಾರೆ ಕರ್ನಾಟಕದಾದ್ಯಂತ ಚಿತ್ರ ಚೆನ್ನಾಗಿ ಓಡ್ತಿದೆ’ ಎಂದು ಎರಡೂರು ಬಾರಿ ಹೇಳಿದರು.
“ಧೈರ್ಯಂ’ ಚಿತ್ರದ ಸಂತೋಷಕೂಟಕ್ಕೆ ಛಾಯಾಗ್ರಾಹಕ ಶೇಖರ್ ಚಂದ್ರು ಒಬ್ಬರನ್ನು ಹೊರತುಪಡಿಸಿದರೆ ಮಿಕ್ಕೆಲ್ಲರೂ ಬಂದಿದ್ದರು. ಶೇಖರ್ ಚಂದ್ರು ಚಿತ್ರೀಕರಣದಲ್ಲಿದ್ದ ಕಾರಣ ಅವರು ಬಂದಿರಲಿಲ್ಲ. ಮಿಕ್ಕಂತೆ ಅಜೇಯ್ ರಾವ್, ಅದಿತಿ ಪ್ರಭುದೇವ, ವಾಣಿಶ್ರೀ, ವಿಜಯಲಕ್ಷ್ಮೀ ಉಪಾಧ್ಯಾಯ, ಪದ್ಮಿನಿ ಪ್ರಕಾಶ್, ಮನಮೋಹನ್, ಸಂಗೀತ ನಿರ್ದೇಶಕ ಎಮಿಲ್ ಸೇರಿದಂತೆ ಹಲವರು ಇದ್ದರು ಮತ್ತು ಎಲ್ಲರೂ ಚಿತ್ರ ಗೆದ್ದ ಖುಷಿಯಲ್ಲಿ ಮಾತನಾಡಿದರು.
ಈ ಚಿತ್ರ ಹಿಟ್ ಆಗಿದ್ದು ಮಾಧ್ಯಮದವರಿಂದ ಎಂದು ಅಜೇಯ್ ಹೇಳಿಕೊಂಡರು. “ಚಿತ್ರ ಬಿಡುಗಡೆಯಾಗುವ ಮುನ್ನ ಇದೊಂದು ಮಾಸ್ ಚಿತ್ರ ಎಂದು ಎಲ್ಲರೂ ಹೇಳಿದ್ದರು. ನಿರ್ಮಾಪಕರು ಮಾತ್ರ ಕ್ಲಾಸ್ ಸ್ಪರ್ಶವಿರುವ ಮಾಸ್ ಚಿತ್ರ ಎಂದು ಹೇಳಿದ್ದರು. ನಿಜ ಹೇಳಬೇಕೆಂದರೆ, ಕ್ಲಾಸ್ ಮತ್ತು ಮಾಸ್ ಎರಡೂ ಹದವಾಗಿ ಬೆರೆತಿರುವ ಚಿತ್ರ ಇದು. ಚಿತ್ರ ಬಿಡುಗಡೆಗೆ ಮುನ್ನ ನಾನು ಈ ಚಿತ್ರದ ಕಮರ್ಷಿಯಲ್ ಆಗಿ ಹೇಗೆ ಹೋಗಬಹುದು ಎಂದು ಯೋಚಿಸಿರಲಿಲ್ಲ. ಚಿತ್ರ ಬಿಡುಗಡೆಯಾದ ಮೇಲೆ, ಪ್ರೇಕ್ಷಕರ ನಿಟ್ಟಿನಿಂದ ಯೋಚಿಸಿದಾಗ ಈ ಚಿತ್ರವನ್ನು ಇನ್ನೊಂದು ಲೆವೆಲ್‌ಗೆ ತೆಗೆದುಕೊಂಡು ಹೋಗಬೇಕು, ಇನ್ನಷ್ಟು ಜನರಿಗೆ ಮುಟ್ಟಿಸಬೇಕು, ನಿರ್ಮಾಪಕರ ಜೇಬು ಇನ್ನೂ ತುಂಬಬೇಕು ಎಂದು ಆಸೆಯಾಗುತ್ತಿದೆ’ ಎಂದರು.
ಈ ಚಿತ್ರವನ್ನು ನಿರ್ಮಾಪಕ ಉದಯ್ ಮೆಹ್ತಾ ವಿತರಿಸುತ್ತಿದ್ದಾರೆ. ಟ್ರೇಲರ್ ಮತ್ತು ಪೋಸ್ಟರ್‌ಗಳನ್ನು ನೋಡಿಯೇ ಈ ಚಿತ್ರ ಚೆನ್ನಾಗಿ ಆಗುತ್ತದೆ ಎಂದು
ಅವರು ಹೇಳಿದ್ದರಂತೆ. ಆ ಭವಿಷ್ಯ ಈಗ ನಿಜವಾಯಿತು ಎಂದು ಖುಷಿಪಟ್ಟರು ಉದಯ್. ಮಾತು ಮುಗಿಸುವ ಮುನ್ನ, “ಧೈರ್ಯಂ 2′ ಅಲ್ಲದಿದ್ದರೂ, ಇನ್ನೊಂದು ಸಿನಿಮಾ ಮಾಡುವ ಧೈರ್ಯ ಮಾಡಿ’ ಎಂದು ಸಲಹೆ ನೀಡಿದರು.