ಬೆಂಗಳೂರು: ಮಕ್ಕಳ ದಿನಾಚರಣೆ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸಾಹಸ ಮೆರೆದ ಮಕ್ಕಳಿಗೆ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿಯನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನೀಡಿ ಗೌರವಿಸಿದರು.
ಇಲಾಖೆಯಿಂದ ಕೊಡಮಾಡುವ 10 ಸಾವಿರ ನಗದು, ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆಯನ್ನು ಈ ಪ್ರಶಸ್ತಿ ಒಳಗೊಂಡಿದೆ. ಪ್ರಶಸ್ತಿ ಪಡೆದವರಲ್ಲಿ ದ.ಕ.ದ ವೈಭವಿ ಮತ್ತು ಉಡುಪಿಯ ಬಿ. ಧೀರಜ್ ಐತಾಳ್ ಸೇರಿದ್ದಾರೆ.
ವೈಭವಿ ಅವರು ಕಿನ್ನಿಗೋಳಿಯಲ್ಲಿ ನಡೆದ ರಿಕ್ಷಾ ಅಪಘಾತದಲ್ಲಿ ಸಿಲುಕಿದ ತನ್ನ ತಾಯಿಯನ್ನು ಆಟೋ ರಿಕ್ಷಾವನ್ನು ಮೇಲೆತ್ತುವ ಮೂಲಕ ರಕ್ಷಿಸಿದ್ದರು. ಉಡುಪಿಯ ಬಿ. ಧೀರಜ್ ಐತಾಳ್ ಅವರು ಸಾಲಿಗ್ರಾಮದಲ್ಲಿ 16 ಅಡಿ ಉದ್ದದ 65 ಕೆ.ಜಿ. ತೂಕದ ಹೆಬ್ಟಾವ್ ಒಂದನ್ನು ಹಿಡಿದು ಸಾರ್ವಜನಿಕರ ರಕ್ಷಣೆ ಮಾಡಿದ್ದರು. ಅಲ್ಲದೇ, ಇತರ ಸಂದರ್ಭಗಳಲ್ಲಿ ಸುಮಾರು 70 ಹಾವುಗಳನ್ನು ಹಿಡಿದಿದ್ದರು.
ಇವರಿಬ್ಬರಲ್ಲದೇ ಧಾರವಾಡ ಜಿಲ್ಲೆಯ ಮಹಮ್ಮದ್ ಸಮೀರ ಬುಕ್ಕಿಟಗಾರ, ಬೆಳಗಾವಿಯ ಸ್ಫೂರ್ತಿ ವಿಶ್ವನಾಥ್, ಶಿವಮೊಗ್ಗ ಜಿಲ್ಲೆಯ ಮಾಸ್ಟರ್ ಮಣಿಕಂಠ ಆರ್., ಮಾಸ್ಟರ್ ನಿಶಾಂತ ಎಲ್ ಮತ್ತು ಎ.ಎನ್. ಅಶ್ವಿನ್ ಶೌರ್ಯ ಪ್ರಶಸ್ತಿ ಪಡೆದಿದ್ದಾರೆ. ಬೆಂಗಳೂರು ನಗರದ ಕು| ಆರುಣಿ ವಿ. ವಿಶೇಷ ಸಾಧನೆ ಪ್ರಶಸ್ತಿ ಪಡೆದರು.
ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಸ್ವಯಂ ಸೇವಾ ಸಂಸ್ಥೆ ಮತ್ತು ವ್ಯಕ್ತಿಗಳ ಸೇವೆಯನ್ನು ಗುರುತಿಸಿ ಪ್ರತಿ ವರ್ಷದಂತೆ ಈ ಬಾರಿಯೂ ನಾಲ್ಕು ಸಂಸ್ಥೆ ಮತ್ತು ನಾಲ್ಕು ಮಂದಿಗೆ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.