ಮುಂಬಯಿ/ಹೊಸದಿಲ್ಲಿ: ಯೆಸ್ ಬ್ಯಾಂಕ್ ಗೆ ವಂಚಿಸಿದ ಪ್ರಕರಣದಲ್ಲಿ ಬಂಧಿತರಾಗಿರುವ ದಿವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (ಡಿಎಚ್‌ಎಫ್ಎಲ್) ಪ್ರವರ್ತಕರಾಗಿರುವ ಕಪಿಲ್ ವಾಧ್ವಾನಿ ಮತ್ತು ಧೀರಜ್ ವಾಧ್ವಾನಿ ಮತ್ತೂಂದು ಎಡವಟ್ಟು ಮಾಡಿಕೊಂಡಿದ್ದಾರೆ.
ಲಾಕ್‌ಡೌನ್ ಇದ್ದ ಹೊರತಾಗಿಯೂ ಮಹಾರಾಷ್ಟ್ರದ ಸತಾರ ಜಿಲ್ಲೆಯ ಖಂಡಾಲಾದಲ್ಲಿನ ಫಾರ್ಮ್ ಹೌಸ್‌ಗೆ ಪ್ರವಾಸ ತೆರಳಿದ ಆರೋಪ ಎದುರಿಸುತ್ತಿದ್ದಾರೆ. ಅವರಿಬ್ಬರ ಜತೆಗೆ ಕುಟುಂಬದ 23 ಮಂದಿ ಕೂಡ ಇದ್ದರು.
ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಕಣ್ಣುತಪ್ಪಿಸಿ 250 ಕಿಮೀ ದೂರದ ಸ್ಥಳಕ್ಕೆ ಐದು ಕಾರುಗಳಲ್ಲಿ ಅವರು ಬಂದಿದ್ದರು. ಈ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿಯನ್ನು ಆಧರಿಸಿ ಸತಾರ ಜಿಲ್ಲಾ ಪೊಲೀಸರು ದಾಳಿ ನಡೆಸಿ ಅವರನ್ನು ವಶಕ್ಕೆ ಪಡೆದಿದ್ದಾರೆ. ಈಗ ಅವರನ್ನೆಲ್ಲ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ.
ಮಹಾರಾಷ್ಟ್ರದ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ಇವರಿಗೆ ನೆರವು ನೀಡಿದ್ದಾರೆಂದು ಇದೀಗ ಆರೋಪಿಸಲಾಗುತ್ತಿದೆ. ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಕೂಡಲೇ ಕಡ್ಡಾಯ ರಜೆಯಲ್ಲಿ ತೆರಳಲು ಆದೇಶ ನೀಡಲಾಗಿದೆ. ಫ್ಯಾಮಿಲಿ ಎಮರ್ಜೆನ್ಸಿ ಎಂಬ ನೆಪವೊಡ್ಡಿ, ಮಹಾರಾಷ್ಟ್ರ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಅಮಿತಾಬ್ ಗುಪ್ತಾ ನೀಡಿದ್ದ ಪಾಸ್ ಹೊಂದಿದ್ದರು.
ತನಿಖೆಗೆ ಆದೇಶ: ಈ ಪ್ರಕರಣ ಮಹಾರಾಷ್ಟ್ರದಲ್ಲಿ ವಿವಾದಕ್ಕೆ ಕಾರಣವಾಗಿದೆ. ಸರಕಾರ ಈ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಒತ್ತಾಯಿಸಿದ್ದಾರೆ. ಈ ನಡುವೆ ಪ್ರಕರಣದ ಬಗ್ಗೆ ತನಿಖೆಗೆ ರಾಜ್ಯ ಸರಕಾರ ಆದೇಶ ನೀಡಿದೆ.