ಧೀರ ಭಗತ್‌ರಾಯ್ ಎಂಬ ಸಿನಿಮಾವೊಂದು ತಯಾರಾಗಿದ್ದು, ಬಿಡುಗಡೆಯ ಹಂತಕ್ಕೆ ಬಂದಿದೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ನಟ ದುನಿಯಾ ವಿಜಯ್ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು.
ಈ ವೇಳೆ ಮಾತನಾಡಿದ ನಿರ್ದೇಶಕ ಕರ್ಣನ್ ಎಸ್. ಮಾತನಾಡುತ್ತ, ಎರಡು ವರ್ಷಗಳ ಶ್ರಮ. ಒಂದು ಒಳ್ಳೆಯ ಸಿನಿಮಾದ ಟ್ರೇಲರ್‌ನ್ನು ಒಬ್ಬ ಸ್ಟಾರ್ ನಟರ ಕೈಯಲ್ಲಿ ಬಿಡುಗಡೆ ಮಾಡಿಸಬೇಕು ಎಂದುಕೊಂಡಾಗ, ನಮ್ಮ ಕಣ್ಮುಂದೆ ಬಂದಿದ್ದು ದುನಿಯಾ ವಿಜಯ್ ಅವರು. ಅವರದ್ದು ತಾಯಿಯಂಥ ಮನಸ್ಸು. ಪ್ರೀತಿಯಿಂದ ಮಾತನಾಡಿಸುತ್ತಾರೆ. ಟ್ರೇಲರ್ ನೋಡಿ ಮೆಚ್ಚಿಕೊಂಡರು. “ಸಿನಿಮಾ ಟ್ರೇಲರ್‌ನಲ್ಲೇ ಗೆದ್ದಿದೆ. ಈಗ ಸಿನಿಮಾ ಗೆಲ್ಲಬೇಕು. ಅದಕ್ಕಾಗಿ ನಾನು ನಿನ್ನ ಜೊತೆ ಇರುತ್ತೇನೆ’ ಎಂದು ಪ್ರೋತ್ಸಾಹಿಸಿದ್ದಾರೆ. ಸಿನಿಮಾ ಅದ್ಭುತವಾಗಿ ಮೂಡಿಬಂದಿದೆ. ಚಿತ್ರದ ಸಂಕಲನಕಾರ ವಿಶ್ವ ಅವರಿಂದ ಇದು ಚೆನ್ನಾಗಿ ಮೂಡಿಬಂದಿದೆ. ಅವರು ಸಿನಿಮಾದ ಎರಡನೇ ನಿರ್ದೇಶಕ ಎನ್ನಬಹುದು. ಜೊತೆಗೆ ಇಡೀ ತಾಂತ್ರಿಕ ವರ್ಗದವರು ಶ್ರಮವಹಿಸಿದ್ದಾರೆ. ಈ ಸಿನಿಮಾ ನಮ್ಮ ಕಥೆಯಲ್ಲ. ಪ್ರೇಕ್ಷಕರ ಕಥೆ. ನಿಮ್ಮ ಕಥೆಯನ್ನು ನೀವೇ ಚಿತ್ರಮಂದಿರಕ್ಕೆ ಬಂದು ನೋಡಬೇಕು. ಡಿಸೆಂಬರ್‌ನಲ್ಲಿ ಸಿನಿಮಾ ತೆರೆಗೆ ಬರಲಿದೆ ಎನ್ನುತ್ತಾರೆ ನಿರ್ದೇಶಕ ಕರ್ಣನ್.
“ಭೂ ಸುಧಾರಣೆ ಕಾಯ್ದೆ ಬಂದಾಗ, ಜಮೀನಾರನೊಬ್ಬ ರೈತರ ಭೂಮಿ ಕಬ್ಜ ಮಾಡುತ್ತಾನೆ. ಅವರ ವಿರುದ್ಧ ನಾಯಕ ಕಾನೂನು ಹೋರಾಟ ಮಾಡುತ್ತಾನೆ. ಈ ಹೋರಾಟದಲ್ಲಿ ಸಾಕಷ್ಟು ತಿರುವು, ಅಸೂಯೇ, ದ್ವೇಷ, ಸಂಘರ್ಷಗಳಿವೆ. ಎಲ್ಲರಿಗೂ ಬದುಕುವ ಹಕ್ಕು ಸಂವಿಧಾನ ಕೊಟ್ಟಿದೆ. ಆ ಸಂವಿಧಾನದ ಒಂದು ಅಂಶವೇ ನಮ್ಮ ಸಿನಿಮಾ. ಸರ್ಕಾರವನ್ನು ಪ್ರಶ್ನಿಸುವ ಕೆಲಸ ಈ ಸಿನಿಮಾದಲ್ಲಾಗಿದೆ. ತಮಿಳಿನ ಜೈ ಭೀಮ್, ಅಸುರನ್ ಶೈಲಿಯಲ್ಲಿ ಈ ಸಿನಿಮಾ ಮೂಡಿಬಂದಿದೆ’ ಎನ್ನಲು ಅವರು ಮರೆಯುವುದಿಲ್ಲ.
ರಂಗಭೂಮಿ ಕಲಾವಿದ ರಾಕೇಶ್ ದಳವಾಯಿ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದಾರೆ. ರಾಜನ್ ಅವರ ಪಾತ್ರದ ಹೆಸರು. ಭಗತ್ ಸಿಂಗ್ ಪ್ರೇರಣೆ, ಹೋರಾಟದ ಮನೋಭಾವ, ಯಾರಿಗೂ ಹೆದರದ ವ್ಯಕ್ತಿತ್ವ ಇದು ನಾಯಕನ ಪಾತ್ರ ವೈಶಿಷ್ಟ್ಯ. ವೃತ್ತಿಯಿಂದ ಎಚ್‌ಆರ್ ಮ್ಯಾನೇಜರ್ ಆಗಿರುವ ಸುಚಾರಿತಾ ಅವರು ಚಿತ್ರಕ್ಕೆ ನಾಯಕಿ. ಉಳಿದಂತೆ ಶರತ್ ಲೋಹಿತಾಶ್ವ, ನೀನಾಸಂ ಅಶ್ವತ್ಥ, ಎಂ.ಕೆ. ಮಠ, ಹರಿರಾಮ್, ಸಂದೇಶ್ ನಟಿಸಿದ್ದಾರೆ.
ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ, ಸೆಲ್ವಂ ಜಾನ್ ಛಾಯಾಗ್ರಹಣ, ಎನ್.ಎಂ. ವಿಶ್ವ ಸಂಕಲನ, ಥ್ರಿಲ್ಲರ್ ಮಂಜು ಹಾಗೂ ವಿಕ್ರಮ್ ಮೊರ್ ಅವರ ಸಾಹಸ ನಿರ್ದೇಶನ ಚಿತ್ರಕ್ಕಿದೆ. ಸಿನಿಮಾದಲ್ಲಿ ಐದು ಆ್ಯಕ್ಷನ್ ಸನ್ನಿವೇಶಗಳಿವೆ. ಮೂರು ಹಾಡುಗಳಿಗೆ ವಿಜಯ್ ಪ್ರಕಾಶ್, ಸಾಕ್ಷಿ ಕಲ್ಲೂರ್, ಪ್ರಭು ಸ್ವಾಮಿ, ಪಂಚಮ್ ಧ್ವನಿಯಾಗಿದ್ದಾರೆ.