ವಾರಾಣಸಿ: ವಾರಾಣಸಿಯ ದೋಣಿ ವಿಹಾರದ ಸಂದರ್ಭದಲ್ಲಿ ಪಕ್ಷಿಗಳಿಗೆ ಆಹಾರ ತಿನ್ನಿಸುತ್ತಿರುವ ದೃಶ್ಯವನ್ನು ಪ್ರಕಟಿಸಿದ ಕ್ರಿಕೆಟಿಗ ಶಿಖರ್ ಧವನ್ ವಿವಾದಕ್ಕೀಡಾಗಿದ್ದಾರೆ. ಇದರಿಂದಾಗಿ ಬೋಟ್‌ಮ್ಯಾನ್ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.
ಬೋಟ್ ಸವಾರಿ ವೇಳೆ ಹಕ್ಕಿಗಳಿಗೆ ಕಾಳು ಎಸೆಯುತ್ತಿರುವ ಚಿತ್ರಗಳನ್ನು ಧವನ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು.
ನಿಯಮ ಉಲ್ಲಂಘನೆ
ಈ ಕುರಿತು ಪ್ರತಿಕ್ರಿಯೆ ನೀಡಿರುವ ಜಿಲ್ಲಾಡಳಿತ, “ಹಕ್ಕಿ ಜ್ವರ ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲಿ ಸರಕಾರ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಿದೆ. ಬೋಟ್‌ಮ್ಯಾನ್ ಇದನ್ನು ಉಲ್ಲಂಘಿಸಿ, ಪ್ರವಾಸಿಗ ಧವನ್ ಅವರನ್ನು ದೋಣಿ ವಿಹಾರಕ್ಕೆ ಕರೆದುಕೊಂಡು ಹೋಗಿದ್ದಾನೆ. ಆತನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಆತನ ದೋಣಿ ಪರವಾನಿಗೆಯನ್ನೂ ರದ್ದುಗೊಳಿಸುವ ಅಧಿಕಾರವಿದೆ’ ಎಂದು ತಿಳಿಸಿದೆ.
“ಧವನ್ ಓರ್ವ ಪ್ರವಾಸಿಗರಾದ ಕಾರಣ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗುವುದಿಲ್ಲ’ ಎಂದು ವಾರಾಣಸಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೌಶಲ್ ರಾಜ್ ಶರ್ಮ ತಿಳಿಸಿದ್ದಾರೆ.
ಆಸೀಸ್ ವಿರುದ್ಧ ಭಾರತ ಸಾಧಿಸಿದ ಸರಣಿ ಗೆಲುವಿನ ಬಳಿಕ ಧವನ್ ಕಾಶೀ ವಿಶ್ವನಾಥ ಹಾಗೂ ಕಾಲಭೈರವ ದೇವಸ್ಥಾನಗಳಿಗೆ ಯಾತ್ರೆ ಕೈಗೊಂಡಿದ್ದರು. ಆಗ ನಡೆದ ಘಟನೆ ಇದಾಗಿದೆ.