ಧಾರವಾಡ: ಜಿಲ್ಲೆಯಲ್ಲಿ ಆರಂಭಿಸಿರುವ 13 ಕಡಲೆ ಖರೀದಿ ಕೇಂದ್ರಗಳಲ್ಲಿ ಕಡಲೆ ಖರೀದಿ ಪ್ರಕ್ರಿಯೆಗೆ ಗುರುವಾರ ಚಾಲನೆ ದೊರೆತಿದ್ದು, ಇದಲ್ಲದೇ ರೈತರ ನೋಂದಣಿಯ ಅವಧಿಯನ್ನೂ ಜಿಲ್ಲಾಡಳಿತ ವಿಸ್ತರಿಸಿದೆ. ಸರಕಾರದ ಆದೇಶವಿದ್ದರೂ ಕಡಲೆ ಖರೀದಿ ಕೇಂದ್ರಗಳು ಬಂದ್ ಆಗಿರುವ ಹಾಗೂ ನೋಂದಣಿ ಅವಧಿ ವಿಸ್ತರಣೆ ಆಗದ ಕುರಿತು ಮತ್ತು ರೈತರಿಗಾಗಿರುವ ಸಮಸ್ಯೆ ಕುರಿತು ಉದಯವಾಣಿ ಮಾ.9ರಂದು “ಕಡಲೆ ಖರೀದಿ ಕೇಂದ್ರಗಳಿಗೆ ಗ್ರಹಣ’ ಶೀರ್ಪಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು.
ವರದಿ ಪ್ರಕಟಗೊಂಡ ಬೆನ್ನಲ್ಲೇ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಕಡಲೇ ಖರೀದಿ ಕೇಂದ್ರಗಳ ಕಾರ್ಯಾರಂಭ ಮಾಡುವುದರ ಜತೆ ರೈತರ ನೋಂದಣಿ ಅವಧಿಯನ್ನೂ ಏ.12ರ ಬದಲಿಗೆ ಏ.30ರವರೆಗೆ ವಿಸ್ತರಿಸಿದೆ. ಡಿಸಿ ನೇತೃತ್ವದಲ್ಲಿ ಸಭೆ: ಕಡಲೆ ಖರೀದಿ ಕುರಿತು ರೈತ ಮುಖಂಡರ ಹಾಗೂ ಕೃಷಿ ಉತ್ಪನ್ನ ಮಾರಾಟ ಇಲಾಖೆ ಅ ಧಿಕಾರಿಗಳೊಂದಿಗೆ ಸಭೆ ನಡೆಸಿದ ಡಿಸಿ ದೀಪಾ ಚೋಳನ್, 2019-20 ಹಿಂಗಾರು ಹಂಗಾಮಿನಲ್ಲಿ ಬೆಳೆದ ಕಡಲೆಯನ್ನು ಕೇಂದ್ರ ಸರ್ಕಾರದ ಬೆಂಬಲ ಬೆಲೆಯ ಯೋಜನೆಯಡಿ ಜಿಲ್ಲೆಯ 13 ಖರೀದಿ ಕೇಂದ್ರಗಳಲ್ಲಿ ಏ.30 ರವರೆಗೆ ನೋಂದಾಯಿಸಿಕೊಂಡು ಮೇ 12 ರವರೆಗೆ ಖರೀದಿ ಪ್ರಕ್ರಿಯೆ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಎಫ್‌ಎಕ್ಯೂ ಗುಣಮಟ್ಟದ ಕಡಲೆ ಕಾಳು ಉತ್ಪನ್ನಕ್ಕೆ ಪ್ರತಿ ಕ್ವಿಂಟಲ್‌ಗೆ 4875 ರೂ. ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಲಾಗಿದ್ದು,ಹುಬ್ಬಳ್ಳಿ, ಧಾರವಾಡ ಎಪಿಎಂಸಿ ಮುಖ್ಯ ಮಾರುಕಟ್ಟೆ ಪ್ರಾಂಗಣ ಸೇರಿದಂತೆ ಜಿಲ್ಲೆಯ ಹೆಬ್ಬಳ್ಳಿ, ಉಪ್ಪಿನಬೆಟಗೇರಿ, ನೂಲ್ವಿ, ಹೆಬಸೂರು, ಕುಂದಗೊಳ, ಯಲಿವಾಳ, ಯರಗುಪ್ಪಿ, ಅಣ್ಣಿಗೇರಿ, ನವಲಗುಂದ, ಮೊರಬ ಹಾಗೂ ತಿರ್ಲಾಪುರ ಗ್ರಾಮಗಳಲ್ಲಿ ಆರಂಭಿಸಿರುವ (13) ಖರೀದಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ ಎಂದರು. ಜಿಪಂ ಸಿಇಒ ಡಾ|ಬಿ.ಸಿ.ಸತೀಶ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ವ್ಯವಸ್ಥಾಪಕ ಸಚೀನ್ ಪಾಟೀಲ್, ಕೃಷಿ ಉತ್ಪನ್ನ ಮಾರಾಟ ಇಲಾಖೆ ಉಪನಿರ್ದೇಶಕ ಪ್ರಭಾಕರ ಅಂಗಡಿ ಇದ್ದರು.
ಕಡಲೆ ಖರೀದಿ ಕೇಂದ್ರಗಳಲ್ಲಿ ಸಿಬ್ಬಂದಿ ಮಾಸ್ಕ್ ಧರಿಸಿ ಕಾರ್ಯ ನಿರ್ವಹಿಸುತ್ತಿದ್ದರೆ ಕಡಲೆ ಚೀಲ ತೂಕ ಮಾಡಿ ಹೊತ್ತು ಹಾಕುವ ಹಮಾಲರು ಮಾಸ್ಕ್, ಸ್ಯಾನಿಟೈಜರ್ ಇಲ್ಲದೇ ಹಾಗೆ ಕೆಲಸ ನಿರ್ವಹಿಸುತ್ತಿದ್ದು, ಮಾಸ್ಕ್ ಹಾಗೂ ಸ್ಯಾನಿಟೈಜರ್ ನೀಡುವಂತೆ ಆಯಾ ಸಹಕಾರಿ ಸಂಘಗಳಿಗೆ ಸೂಚಿಸಿದ್ದರೂ ಅದು ಕಾರ್ಯರೂಪಕ್ಕೆ ಬಂದಿಲ್ಲ.
ಜಿಲ್ಲೆಯಲ್ಲಿ 18088 ನೋಂದಾಯಿತ ಕಡಲೆ ಬೆಳೆಗಾರರಿದ್ದು, 1.6 ಲಕ್ಷ ಕ್ವಿಂಟಲ್ ಖರೀದಿ ಗುರಿ ಹೊಂದಲಾಗಿದೆ. ಈಗಾಗಲೇ 8885 ರೈತರಿಂದ 2533 ಕ್ವಿಂಟಲ್ ಕಡಲೆ ಖರೀದಿಸಲಾಗಿದೆ. ಉಳಿದ ರೈತರು ಏ.30ರವರೆಗೆ ನೋಂದಣಿ ಮಾಡಿಕೊಳ್ಳಬೇಕು.
ಐ.ಬಿ. ರಾಜಶೇಖರ್,
ಜಂಟಿ ಕೃಷಿ ನಿರ್ದೇಶಕ