Advertisement
ಹೌದು. ನದಿಗಳೇ ಇಲ್ಲದೇ ಧಾರವಾಡ ಜಿಲ್ಲೆಯಲ್ಲಿ ಇದೀಗ ಹೆಚ್ಚು ಕಡಿಮೆ ಹಳ್ಳಗಳೇ ನದಿ ಸ್ವರೂಪದಲ್ಲಿ ಮೈ ದುಂಬಿ ಹರಿಯುತ್ತಿದ್ದು, ಕಳೆದ 10 ದಿನಗಳಲ್ಲಿ ಜಿಲ್ಲೆಯ ಬರೊಬ್ಬರಿ 870ಕ್ಕೂ ಅಧಿಕ ಕೆರೆಗಳು ಸಂಪೂರ್ಣ ಭರ್ತಿಯಾಗಿ ಕೋಡಿ ಬಿದ್ದರೆ, ಆಯಕಟ್ಟಿನಲ್ಲಿರುವ ದೊಡ್ಡ ಕೆರೆಗಳು ಮುಕ್ಕಾಲು ಭಾಗ ನೀರು ತುಂಬಿಕೊಂಡಿವೆ.
Related Articles
Advertisement
ಇನ್ನು ಜಿಲ್ಲೆಯಲ್ಲಿ ಒಟ್ಟು 112ಕ್ಕೂ ಹೆಚ್ಚು ಕೆರೆಗಳು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಬರುತ್ತಿದ್ದು, ಈ ಕೆರೆಗಳಿಂದ ಜಿಲ್ಲೆಯ ಒಟ್ಟು 75 ಸಾವಿರ ಎಕರೆ ಪ್ರದೇಶಕ್ಕೆ ನೀರು ಪೂರೈಕೆಯಾಗುತ್ತಿತ್ತು. ಇದೀಗ ಸಣ್ಣ ನೀರಾವರಿ ವ್ಯಾಪ್ತಿಯಲ್ಲಿನ 73 ಕೆರೆಗಳು ಕೋಡಿ ಬಿದ್ದಿವೆ. ಕೆರೆಗಳನ್ನು ಅವಲಂಬಿಸಿ ಭತ್ತ ಬೆಳೆಯತ್ತಿದ್ದ ಧಾರವಾಡ-ಕಲಘಟಗಿ ತಾಲೂಕಿನ 87 ದೊಡ್ಡ ಕೆರೆಗಳು ಸಂಪೂರ್ಣ ತುಂಬಿಕೊಂಡಿದ್ದು, ಈ ವರ್ಷ ಭತ್ತ ಶೇ.50 ಉತ್ಪಾದನೆಗೆ ಪೂರಕ ವಾತಾವರಣ ಸದ್ಯಕ್ಕೆ ನಿರ್ಮಾಣವಾದಂತಾಗಿದೆ. ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ ಒಟ್ಟು112 ಕೆರೆಗಳಿದ್ದರೆ, ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಅಂಕಿ ಸಂಖ್ಯೆ ಪ್ರಕಾರ ಜಿಲ್ಲೆಯಲ್ಲಿರುವ 417 ಕೆರೆಗಳಲ್ಲಿ ಅರ್ಧಕ್ಕಿಂತ ಹೆಚ್ಚು ಕೆರೆಗಳು ಸಂಪೂರ್ಣ ಭರ್ತಿಯಾಗಿವೆ. ಇನ್ನು ಧಾರವಾಡ ಜಿಪಂ ವ್ಯಾಪ್ತಿಯಲ್ಲಿನ 305 ಕೆರೆಗಳಲ್ಲಿ 290 ಕೆರೆಗಳು ಸಂಪೂರ್ಣ ಭತ್ತಿಯಾಗಿವೆ.ಇನ್ನು ಜಿಪಂ ವ್ಯಾಪ್ತಿಯಲ್ಲಿರುವ ತಾಲೂಕುಗಳ ಅನ್ವಯ ಧಾರವಾಡ – 62, ಹುಬ್ಬಳ್ಳಿ-41,ಕಲಘಟಗಿ-66,ಕುಂದಗೋಳ-77,ನವಲಗುಂದ-59 ಕೆರೆಗಳಿದ್ದು, ಈ ಪೈಕಿ ಶೇ.ಪೈಕಿ ಶೇ.63 ಕೆರೆಗಳು ಸಂಪೂರ್ಣ ಭರ್ತಿಯಾಗಿದ್ದರೆ, ಶೇ.10 ಕೆರೆಗಳು ಕೋಡಿ ಬಿದ್ದಿವೆ.
ನಿಂತಿಲ್ಲ ಕೆರೆ ನೀರು ಪೋಲು
ಕೆರೆಯ ಅಂಗಳದಲ್ಲಿ ನೀರು ನಿಲ್ಲುವುದರಿಂದ ಅಂತರ್ಜಲ, ಪಶುಪಕ್ಷಿ, ಹಳ್ಳಿಗರ ಜನ-ಜಾನುವಾರುಗಳ ದಾಹ ತಣಿಯುತ್ತದೆ. ಸಣ್ಣ ನೀರಾವರಿಗೆ ಯೋಗ್ಯವಾಗಿರುವ 200ಕ್ಕೂ ಹೆಚ್ಚು ಕೆರೆಗಳು ಈ ವರ್ಷ ಉತ್ತಮ ಮಳೆಯಿಂದ ತುಂಬಿಕೊಂಡಿವೆ. ಬೇಸಿಗೆವರೆಗೂ ಗ್ರಾಮಾಂತರ ಪ್ರದೇಶಗಳ ಜನ-ಜಾನುವಾರುಗಳಿಗೆ ಅಗತ್ಯ ನೀರು ಪೂರೈಸುವ ಶಕ್ತಿ ಈ ಕೆರೆಗಳಿಗಿದೆ. ಒಂದು ಬಾರಿ ಈ ಕೆರೆಗಳು ತುಂಬಿದರೆ ಮುಂದಿನ ಮಳೆಗಾಲದವರೆಗೂ ಅಷ್ಟೇಯಲ್ಲ ಎರಡು ವರ್ಷಗಳವರೆಗೂ ನೀರು ನಿಲ್ಲುವ ಸಾಮರ್ಥ್ಯವಿದೆ. ಆದರೆ ಸಣ್ಣ ನೀರಾವರಿ ಇಲಾಖೆಯ ನಿರ್ಲಕ್ಷ್ಯ ಎಂಬಂತೆ ಈ ಕೆರೆಗಳ ತೋಬುಗಳು ಅರ್ಥಾರ್ಥ ನೀರಾವರಿಗೆ ಬಳಕೆಯಾಗುವ ಕಿರುಗಾಲುವೆಯ ಗೇಟುಗಳನ್ನು ದುರಸ್ತಿಯೇ ಮಾಡಿಸಿಲ್ಲ. ಬೇಸಿಗೆ ಸಂದರ್ಭದಲ್ಲಿಯೇ ಕೆರೆಗಳ ತೋಬು ಮತ್ತು ನೀರು ಹರಿಯುವ ಗೇಟುಗಳ ದುರಸ್ತಿ ಕಾರ್ಯ ಮಾಡಿಟ್ಟರೆ ಮಳೆಗಾಲದಲ್ಲಿ ಕೆರೆ ಸಂಪೂರ್ಣವಾಗಿ ತುಂಬಿಕೊಳ್ಳಲು ಸಾಧ್ಯ. ಕಳೆದ ವರ್ಷ 10 ಟಿಎಂಸಿಗೂ ಅಧಿಕ ನೀರು ಜಿಲ್ಲೆಯಿಂದ ವೃಥಾ ಹರಿದು ಹೋಗಿದ್ದು ಕಣ್ಣ ಮುಂದೆಯೇ ಇರುವಾಗ ತೋಬು ರಿಪೇರಿಯಾಗದೇ ಕೆಲವು ಕೆರೆಗಳಿಂದ ನೀರು ವೃಥಾ ಪೋಲಾಗುತ್ತಿದೆ.
ಧಾರವಾಡ ಜಿಲ್ಲೆಯ ಪಾಲಿಗೆ ಹಳ್ಳ-ಕೆರೆಗಳೇ ಜೀವಜಲದ ಮೂಲಗಳಾಗಿವೆ. ಕೆರೆಯ ಅಂಗಳದಲ್ಲಿ ನೀರು ನರ್ತಿಸಿದರೆ ಮಾತ್ರವೇ ಇಲ್ಲಿನ ಜೀವ ವೈವಿಧ್ಯತೆಯ ವರ್ಷಪೂರ್ತಿ ಸಂಭ್ರಮ ಲಭಿಸಲು ಸಾಧ್ಯ. ದಾಂಡೇಲಿ ದಟ್ಟ ಅರಣ್ಯದಿಂದ ಹಿಡಿದು ಬೆಳವಲದ ಸಿರಿಯಲ್ಲಿ ತಿರುಗಾಡಿ ಗೂಡುಕಟ್ಟಿಕೊಳ್ಳುವ ಪಕ್ಷಿ ಸಂಕುಲಕ್ಕೆ ಈ ಕೆರೆಯಂಗಳವೇ ಆವಾಸದ ತಾಣ. ಹೀಗಾಗಿ ಈ ವರ್ಷದ ಮಟ್ಟಿಗೆ ಮತ್ತೆ ಕೆರೆಯಂಗಳಗಳಲ್ಲಿ ನೀರು ನರ್ತಿಸುತ್ತಿದ್ದು, ಪಕ್ಷಿ-ಜಲಚರಗಳಿಗೆ ಸಂಭ್ರಮ ಎನ್ನಬಹುದು.
ಸತತ ಮಳೆಯಿಂದಾಗಿ ಜಿಲ್ಲೆಯ ಹೆಚ್ಚು ಕಡಿಮೆ ಎಲ್ಲಾ ಕೆರೆಗಳಲ್ಲಿ ಉತ್ತಮ ನೀರು ಬಂದಿದೆ. ಹೆಚ್ಚು ಕೆರೆಗಳು ಕೋಡಿ ಬಿದ್ದಿದ್ದು, ಹಳ್ಳಗಳಲ್ಲಿಯೂ ನೀರು ಹರಿದಿದೆ. ನೀರಸಾಗರ ಸೇರಿದಂತೆ ಪ್ರಮುಖ ಕೆರೆಗಳು ಭರ್ತಿಯಾಗಿವೆ. ಆದರೆ ಎಲ್ಲಿಯೂ ಅಪಾಯ ಎದುರಾಗಿಲ್ಲ. ಬೆಳೆಹಾನಿ ಕುರಿತು ಸಮೀಕ್ಷೆ ನಡೆಸುತ್ತಿದ್ದು ಶೀಘ್ರವೇ ಅದನ್ನು ಸರ್ಕಾರಕ್ಕೆ ಕಳುಹಿಸುತ್ತೇವೆ. –ಗುರುದತ್ತ ಹೆಗಡೆ, ಜಿಲ್ಲಾಧಿಕಾರಿ
-ಬಸವರಾಜ ಹೊಂಗಲ್