Advertisement
ಹೌದು, ಜಿಲ್ಲೆ ವ್ಯಾಪ್ತಿಯ ಜನಜೀವನ ಸುಸೂತ್ರವಾಗಿ ನಡೆಯುವುದಕ್ಕೆ ಆಸರೆಯಾಗಿದ್ದ ಕೆರೆಕುಂಟೆ, ಹಳ್ಳಕೊಳ್ಳ, ಗಾಂವಠಾಣಾ-ಗೋಮಾಳ ಹಾಗೂ ನಗರ ಪ್ರದೇಶದಲ್ಲಿನ ರಾಜಕಾಲುವೆಗಳು ಅತಿಕ್ರಮಣಕ್ಕೆ ಒಳಗಾಗಿದ್ದು, ಇವುಗಳನ್ನು ಗುರುತಿಸಿ ತೆರವುಗೊಳಿಸದೇ ಹೋದರೆ, ಬೆಂಗಳೂರು ನಗರದಲ್ಲಿ ಉಂಟಾದ ಪ್ರವಾಹದಂತೆಯೇ ಹುಬ್ಬಳ್ಳಿ-ಧಾರವಾಡಕ್ಕೂ ಜಲ ಗಂಡಾಂತರ ತಪ್ಪಿದ್ದಲ್ಲ. ಮುನ್ಸೂಚನೆ ಎಂಬಂತೆ 2020 ಮತ್ತು 2011ರಲ್ಲಿ ಧಾರವಾಡದ ಜನ್ನತ ನಗರ, ನೇಕಾರ ನಗರ, ದೈವಜ್ಞ ಕಲ್ಯಾಣ ಮಂಟಪ, ಕೋಳಿಕೇರಿ ಸುತ್ತಲಿನ ಪ್ರದೇಶಗಳು ಹಾಗೂ ಬಸ್ ಡಿಪೋ ವೃತ್ತದ ಸುತ್ತಲಿನ ಪ್ರದೇಶಗಳಲ್ಲಿ ರಾಜಕಾಲುವೆಗಳಲ್ಲಿನ ನೀರು ರಸ್ತೆ ಮೇಲೆ ಹರಿದು ಮನೆಗಳಿಗೆ ನುಗ್ಗಿ ಹಾನಿಯಾದರೆ, ಗ್ರಾಮಗಳಲ್ಲಿ ಕೆರೆಗಳು ಅತಿಕ್ರಮಣವಾಗಿದ್ದರಿಂದ ರೈತರ ಸಾವಿರಾರು ಎಕರೆ ಬೆಳೆ ಹಾನಿಗೆ ಒಳಗಾಗಿತ್ತು.
Related Articles
Advertisement
50 ಎಕರೆಗಿಂತಲೂ ಮೇಲ್ಪಟ್ಟ ದೊಡ್ಡ ಕೆರೆಗಳು ಜಿಲ್ಲೆಯಲ್ಲಿ 120ಕ್ಕೂ ಅಧಿಕ ಇವೆ. ನೀರಸಾಗರ, ಉಣಕಲ್, ಮುಗದ ಕೆರೆ, ಮುಗಳಿಕೆರೆ, ಹುಲಿಕೇರಿಕೆರೆ, ಹುಲಕೊಪ್ಪ ಕೆರೆ, ಬಣದೂರು ಕೆರೆ, ಮುರುಕಟ್ಟಿ ಕೆರೆ, ವೀರಾಪುರ ಕೆರೆ, ರಾಮಾಪುರ ಕೆರೆ,ದೇವಿಕೊಪ್ಪ ಕೆರೆ, ದಾಸ್ತಿಕೊಪ್ಪ ಕೆರೆ, ಮುತ್ತಗಿ ಕೆರೆ, ಡೋರಿ ಕೆರೆ, ಬೆಣಚಿ ಕೆರೆ, ಹಸರಂಬಿ ಕೆರೆ, ಶಿವಪುರ ಕೆರೆ, ನಿಗದಿ ಮತ್ತು ಬೆನಕಟ್ಟಿ ಕೆರೆ ಹಾಗೂ ಹೊನ್ನಾಪುರದ ಕೆರೆಗಳ ಅಂಗಳಗಳ ಅತಿಕ್ರಮಣ ಗುರುತಿಸುವುದೇ ಕಷ್ಟವಾಗಿ ಹೋಗಿದೆ. ಇನ್ನು 25-50 ಎಕರೆ ವಿಸ್ತೀರ್ಣ ಹೊಂದಿರುವ ಕೆರೆಗಳಲ್ಲಂತೂ ಅತಿಕ್ರಮಣವಾಗಿ ಮುಗಿದು ಹೋಗಿದೆ. ಅಲ್ಲಲ್ಲಿ ಜಿಲ್ಲಾಡಳಿತ ಮತ್ತು ಜಿಪಂ ವ್ಯಾಪ್ತಿಯಲ್ಲಿ ಅಧಿಕಾರಿಗಳು ಒಮ್ಮೊಮ್ಮೆ ಜೆಸಿಬಿಗಳನ್ನು ಬಳಕೆ ಮಾಡಿ ಘರ್ಜಿಸಿದ್ದಾಗಿದೆ. ಆದರೆ ಮತ್ತೆ ಮೂರು ನಾಲ್ಕು ವರ್ಷಗಳಲ್ಲಿ ಕೆರೆಗಳ ಅಂಗಳದೊಳಕ್ಕೆ ನುಂಗಣ್ಣರು ನುಗ್ಗಿ ಬೆಳೆ ತೆಗೆಯುತ್ತಿದ್ದಾರೆ.
ಕೆರೆಯಂಗಳದಲ್ಲಿ ಹೋಟೆಲ್ ಉದ್ಯಮ
ಜಿಲ್ಲೆಯ ಪಶ್ಚಿಮ ಭಾಗದ ಗುಡ್ಡಗಾಡು ಪ್ರದೇಶದಲ್ಲಿನ ಕೆರೆಗಳ ಅಂಗಳ ಅಥವಾ ಕೋಡಿಗಳ ಪಕ್ಕದಲ್ಲೇ ಇರುವ ಖಾಸಗಿ ಜಮೀನು ಖರೀದಿಸಿ, ಕೆರೆಯ ಕೋಡಿಗಳನ್ನು ಅತಿಕ್ರಮಿಸಿಕೊಂಡು ರೆಸಾರ್ಟ್‌ಗಳನ್ನು ನಿರ್ಮಿಸಲಾಗುತ್ತಿದೆ. ಹೊನ್ನಾಪುರ, ಡೋರಿ, ಕಂಬಾರಗಣವಿ, ವೀರಾಪುರ ಹಾಗೂ ಮಾವಿನಕೊಪ್ಪ ಸೇರಿದಂತೆ ಅನೇಕ ಕಡೆಗಳಲ್ಲಿ ಕೆರೆಯ ಅಂಗಳಕ್ಕೆ ಹೊಂದಿಕೊಂಡಿರುವ ಖಾಸಗಿ ಜಮೀನುಗಳನ್ನು ನಗರದ ಹೋಟೆಲ್ ಉದ್ಯಮಿಗಳು ಖರೀದಿಸಿ ಕೆರೆಯಂಗಳಕ್ಕೆ ಹೊಂದಿಕೊಂಡಂತೆ ರೆಸಾರ್ಟ್ ಅಥವಾ ದಾಬಾಗಳನ್ನು ಆರಂಭಿಸಿದ್ದಾರೆ. 1200 ಕೆರೆಗಳ ಪೈಕಿ 430ಕ್ಕೂ ಅಧಿಕ ಕೆರೆಗಳು ಜಿಪಂ ವ್ಯಾಪ್ತಿಯಲ್ಲಿದ್ದರೆ, ಉಳಿದವು ಸಣ್ಣ ನೀರಾವರಿ ಮತ್ತು ಅರಣ್ಯ ಇಲಾಖೆ ಅಡಿಯಲ್ಲಿವೆ. ಇಲಾಖೆಗಳ ಮಧ್ಯೆ ಹೊಂದಾಣಿಕೆ ಕೊರತೆಯೋ ಅಥವಾ ಬೇಜವಾಬ್ದಾರಿಯೋ ಗೊತ್ತಿಲ್ಲ. ನುಂಗಣ್ಣರಿಗೆ ಅನುಕೂಲವಾಗುವಂತಹ ವಾತಾವರಣ ನಿರ್ಮಾಣವಾಗಿದ್ದಂತೂ ಸತ್ಯ. ಇದನ್ನು ಕಠಿಣ ನಿಲುವುಗಳ ಮೂಲಕ ತೆರವುಗೊಳಿಸಿ ಕೆರೆಗಳ ಸಂರಕ್ಷಣೆ ಮಾಡಬೇಕು ಎಂದು ಆಗ್ರಹಿಸುತ್ತಿದ್ದಾರೆ ರೈತರು ಮತ್ತು ಪರಿಸರ ಪ್ರೇಮಿಗಳು.
ನದಿಗಳಿಲ್ಲದ ಜಿಲ್ಲೆಗೆ ಕೆರೆಗಳೇ ಜೀವಸೆಲೆ
ಯಾವುದೇ ನದಿಗಳು ಇಲ್ಲದೇ ಇರುವ ಧಾರವಾಡ ಜಿಲ್ಲೆಯಲ್ಲಿ 1200 ಕೆರೆಗಳಿದ್ದು, ಪ್ರತಿ ಕೆರೆಯಿಂದಲೂ ಒಂದೊಂದು ಕೋಡಿ ಬಿದ್ದು ಹರಿಯುವ ಚಿಕ್ಕಪುಟ್ಟ ಹಳ್ಳಗಳು ಇವೆ. ಅವುಗಳಲ್ಲಿ ಕೆಲವಷ್ಟು ಆಗಲೇ ಅತಿಕ್ರಮಣವಾಗಿದ್ದು, ಇನ್ನುಳಿದವುಗಳನ್ನಾದರೂ ಜಿಲ್ಲಾಡಳಿತ ಮತ್ತು ಜಿಪಂ ತನ್ನ ಸುಪರ್ದಿಗೆ ಪಡೆದು ರಕ್ಷಣೆ ಮಾಡಿಕೊಳ್ಳಬೇಕಾಗಿದೆ. 430ಕ್ಕೂ ಅಧಿಕ ಕೆರೆಗಳ ತೋಬು ದುರಸ್ತಿಯಾಗದೇ ಕೆರೆಗಳಲ್ಲಿ ಸರಿಯಾಗಿ ನೀರು ನಿಲ್ಲುತ್ತಿಲ್ಲ. ಇನ್ನು ಜಿಲ್ಲೆಯ ಶೇ.60 ರೈತರು ನೀರಾವರಿಗಾಗಿ ಕೊಳವೆಬಾವಿಗಳನ್ನು ಅವಲಂಬಿಸಿದ್ದಾರೆ. ಇದಕ್ಕೆ ಅಂತರ್ಜಲ ಹಿಡಿದಿಡುವುದೊಂದೇ ದಾರಿ. ಈ ಕೆಲಸವನ್ನು ಕೆರೆಗಳು ಮಾಡುತ್ತಿವೆ. ಇದೀಗ ಕೆರೆಗಳು ವರ್ಷದಿಂದ ವರ್ಷಕ್ಕೆ ಅತಿಕ್ರಮಣಗೊಳ್ಳುತ್ತ ಸಾಗಿದರೆ ಮುಂದೇನು ಗತಿ ಎಂಬ ಪ್ರಶ್ನೆ ಎದುರಾಗಲಿದೆ.
ಕೆರೆಗಳ ಅತಿಕ್ರಮಣ ತೆರವು ಆಗಾಗ ನಡೆಯುತ್ತಲೇ ಬಂದಿದೆ. ನಾವೆಂದೂ ಅತಿಕ್ರಮಣಕಾರರಿಗೆ ಸೊಪ್ಪು ಹಾಕುವುದಿಲ್ಲ. ಈಗಲೂ ಅಷ್ಟೇ, ಬೆಳೆಗಳಿದ್ದರೂ ಅವುಗಳನ್ನು ತೆರವುಗೊಳಿಸಿ ನಮ್ಮ ಜಿಲ್ಲೆಯ ಕೆರೆಗಳನ್ನು ನಾವು ರಕ್ಷಣೆ ಮಾಡಿಕೊಳ್ಳುತ್ತೇವೆ. –ಡಾ| ಸುರೇಶ ಇಟ್ನಾಳ, ಜಿಪಂ ಸಿಇಒ
ಕೆರೆಗಳ ಅತಿಕ್ರಮಣ ಅವ್ಯಾಹತವಾಗಿ ನಡೆದಿದ್ದು, ಅವುಗಳನ್ನು ಒಮ್ಮೆಯೂ ಚೆನ್ನಾಗಿ ಸಮೀಕ್ಷೆ ಮಾಡಿಸಿಲ್ಲ. ರಾಜಕೀಯ ಪಕ್ಷಗಳ ಸ್ಥಳೀಯ ಮುಖಂಡರೇ ಕೆರೆಯಂಗಳಗಳನ್ನು ನುಂಗಿ ಹಾಕಿದ್ದಾರೆ. ಕೆರೆಗಳ ನಕ್ಷೆ ಹಿಡಿದು ಪಹಣಿಯೊಂದಿಗೆ ಸರಿಯಾಗಿ ಅಳೆದರೆ ನಿಜಕ್ಕೂ ಕೆರೆ ಅತಿಕ್ರಮಣ ಗೊತ್ತಾಗುತ್ತದೆ. –ಜಿ.ಬಿ. ಟೊಂಗಳಿ, ದೇವಿಕೊಪ್ಪ ರೈತ ಮುಖಂಡ