Advertisement

ಧಾರವಾಡ: ಹುಣಸೆಹಣ್ಣಿನ ಗೊಂಬೆ, ಡೋಕ್ಲಾ ಮಣ್ಣಿನ ರಂಭೆ-ಮಳಿಗೆ ಸಾಲಲ್ಲಿ ಮೊಳಕೆಯೊಡೆದ ಯುವ ಕನಸುಗಳು

04:41 PM Jan 14, 2023 | Team Udayavani |

ಧಾರವಾಡ: ಆಂಧ್ರದ ಹುಣಸೆಹಣ್ಣು ಗೊಂಬೆಯಾಗಿ ನಿಂತರೆ, ಸಾಣೆ ಕಲ್ಲಿನಲ್ಲಿ ಬೆಳ್ಳಿಯ ಲೇಪನವಾಗಿ ಬಸವಣ್ಣ ನಗುತ್ತಿದ್ದಾನೆ. ರದ್ದಿ ಪೇಪರ್‌ನಲ್ಲಿ ಬುಟ್ಟಿ ಸಿದ್ಧಗೊಂಡಿದ್ದು ವಿಸ್ಮಯವಲ್ಲ, ಆದರೆ ಇಂದಿನ ಅಗತ್ಯ. ಬಂಬೂ ಬಿದಿರು ಕುಡಿಯುವ ನೀರಿನ ಪರಿಸ್ನೇಹಿ ಬಾಟಲ್‌ ಆಗಿ ನಿಂತಿದೆ. ಪ್ಲಾಸ್ಟಿಕ್‌ ಬದಲು ತೆಂಗಿನ ಚಿಪ್ಪುಗಳೇ ಇಲ್ಲಿ ಚಮಚಗಳಾಗಿವೆ. ಒಟ್ಟಿನಲ್ಲಿ ದೇಶಿತನದ ಘಾಟು ಸ್ವದೇಶಿ ಆಂದೋಲನದ ಪ್ರತಿಫಲವಾಗಿ ಕಾಣಿಸುತ್ತಿದೆ.

Advertisement

ಹೌದು, ಇಡೀ ದೇಶದ ಮೂಲೆ ಮೂಲೆಯಿಂದ 26ನೇ ರಾಷ್ಟ್ರೀಯ ಯುವಜನೋತ್ಸವಕ್ಕೆ ಬಂದಿರುವ ಯುವಕರು ದೇಶಿತನದ ಸೊಬಗಿನಿಂದ ಹೇಗೆ ನವನವೀನ ಉತ್ಪಾದನಾ ಕೌಶಲ್ಯಗಳೊಂದಿಗೆ ಮುನ್ನಡೆಯಬೇಕು ಎನ್ನುವುದಕ್ಕೆ ಸಾಕ್ಷಿಯಾಗಿ ನಿಂತಿದೆ ಕರ್ನಾಟಕ ವಿಜ್ಞಾನ ಕಾಲೇಜಿನ ಮೈದಾನದಲ್ಲಿ ಶುಕ್ರವಾರ ಚಾಲನೆಗೊಂಡ ಆಹಾರ, ವಸ್ತು ಮತ್ತು ವಸ್ತ್ರದ ಮಳಿಗೆ ಸಾಲು.

110ಕ್ಕೂ ಅಧಿಕ ಮಳಿಗೆಗಳಲ್ಲಿ ಒಟ್ಟು 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳ ಊಟ, ಆಟಿಕೆ, ಆಹಾರ ಉತ್ಪನ್ನ, ಗೃಹೋಪಯೋಗಿ ವಸ್ತುಗಳು, ಅಲಂಕಾರಿಕ ವಸ್ತುಗಳು, ಕರಕುಶಲ ವಸ್ತುಗಳು, ಶಿಲ್ಪಕಲಾಕೃತಿಗಳು, ಮಣ್ಣಿನ ಕಲಾಕೃತಿಗಳು, ಚಿತ್ರ ಕಲಾಕೃತಿಗಳು, ಕಟ್ಟಿಗೆಯಲ್ಲಿ ಅರಳಿದ ನೂರಾರು ಕಲಾಕೃತಿಗಳು ವಿಶೇಷ ದೇಶಿ ಘಮದ ವಿವಿಧ ಮಜಲುಗಳನ್ನೇ ತೆರೆದಿಟ್ಟಿವೆ.

ಬಿದಿರು ನಾನಾರಿಗಲ್ಲದವಳು: ಬಿದಿರು ಮತ್ತು ಬೆತ್ತವನ್ನು ಇಂದಿನ ಪರಿಸರ ನಾಶದ ದಿನಗಳಲ್ಲಿ ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಏನೆಲ್ಲ ಕೆಲಸಗಳಿಗೆ ಬಳಸಬಹುದು ಎನ್ನುವುದಕ್ಕೆ ಸಾಕ್ಷಿಯಾಗಿ ನಿಂತಿದೆ ಬಿಹಾರದ ಪೂರ್ಣಿಯಾ ಬಂಬೂಬಜಾರ್‌ ಮಳಿಗೆ. ಇಲ್ಲಿನ ಬುಡಕಟ್ಟು ಸಮುದಾಯಗಳಿಗೆ ಬೆಟ್ಟಗುಡ್ಡಗಳಲ್ಲಿ ಸಿಗುವ ಬಿದಿರನ್ನು ಬಳಸಿಕೊಂಡು ಸಿದ್ಧಗೊಳಿಸುವ ಸಾಂಪ್ರದಾಯಿಕ ಶೈಲಿಯ ಉತ್ಪನ್ನಗಳನ್ನು ಹೊರತುಪಡಿಸಿ ದಿನನಿತ್ಯದ ಜೀವನಕ್ಕೆ ಬಳಕೆಯಾಗುವ ಗೃಹ ಉಪಯೋಗಿ ವಸ್ತುಗಳಾದ ಹಲ್ಲು ತೊಳೆಯುವ ಬ್ರೆಷ್‌, ಕುಡಿಯುವ ನೀರಿನ ಬಾಟಲ್‌, ಮೊಬೈಲ್‌ ಸ್ಟ್ಯಾಂಡ್‌, ಆಫೀಸ್‌ ಬಳಕೆಯ ಸ್ಟ್ಯಾಂಡ್‌, ಹವಾನಿಯಂತ್ರಿತ ಸಂದೇಶ ತೋರುವ ಪ್ಲಾಸ್ಕ್, ಚಹಾ ಮತ್ತು ಕಾಫಿಯನ್ನು ಸದಾ ಬಿಸಿಯಾಗಿ ಇಡುವ ಥರ್ಮಸ್‌, ಚಹಾ ಕುಡಿಯುವ ಕಪ್‌ಗಳು ಎಲ್ಲರ ಗಮನ ಸೆಳೆಯುತ್ತಿವೆ.

ಕರ ಕುಶಲ, ವ್ಯಾಪಾರ ಅಚಲ: ಪ್ರದರ್ಶನ ಮಳಿಗೆ ಸಾಲಿನಲ್ಲಿ ದೇಶದ ವಿವಿಧ ರಾಜ್ಯಗಳ ಕರಕುಶಲ ವಸ್ತುಗಳನ್ನು ಕಣ್ಣು ತುಂಬಿಕೊಳ್ಳುವುದೇ ಒಂದು ಸದವಕಾಶ. ಚಿತ್ರಪಟಗಳು, ಅಸ್ಸಾಮಿನ ಜಾಕೇಟುಗಳು, ಮಹಾರಾಷ್ಟ್ರದ ಖಾದಿ ಬಟ್ಟೆಗಳು, ರಾಜಸ್ಥಾನದ ಕುಶರಿ ಜಮಖಾನ, ಬಟ್ಟೆ, ನೆಲಹಾಸು, ಪಡದೆ, ಅರುಣಾಚಲ ಪ್ರದೇಶದ ಕರಿ ಮತ್ತು ಬಿಳಿ ಅಕ್ಕಿ, ಸಾಲದ್ದಕ್ಕೆ ಬಣ್ಣದ ಛತ್ರಿ, ಕಾಶ್ಮೀರದ ಪುಲ್ವಾಮಾದ ಕುಸರಿ ಶಾಲುಗಳು ಒಂದೆಡೆಯಾದರೆ, ಕೇರಳದ ಬಂಗಾರದಂತೆ ಮಿಂಚುವ ದಡಿ ಹಾಕಿದ ಪಂಚೆಗಳು ಎಲ್ಲರ ಗಮನ ಸೆಳೆಯುತ್ತಿವೆ.

Advertisement

ಕೇರಳದಿಂದ ಬಂದಿರುವ ಯುವಕರು ಪ್ರದರ್ಶಿಸಿದ ತೆಂಗಿನ ಚಿಪ್ಪಿನಲ್ಲಿ ಚಮಚ, ಆಹಾರದ ತಟ್ಟೆ ಸೇರಿದಂತೆ ವಿಭಿನ್ನ ಪರಿಸರ ಸ್ನೇಹಿ ಗೃಹ ಉಪಯೋಗಿ ವಸ್ತುಗಳು ನಿಜಕ್ಕೂ ಪ್ಲಾಸ್ಟಿಕ್‌ಗೆ ಪರ್ಯಾಯ ವಸ್ತುಗಳನ್ನು ದೇಶಿಯವಾಗಿ ತಯಾರಿಸಿಕೊಳ್ಳಬಹುದು ಎನ್ನುವಂತಿವೆ.

ಆಹಾರ ಸಾಲಿನಲ್ಲಿ ಹರಿದಿನಿಸು: ಕಾಶ್ಮೀರದ ಕೇಸರಿ, ಪಂಜಾಬ್‌ನ ಲಸ್ಸಿ, ಜಾರ್ಖಂಡ್‌ನ‌ ಪಕೋಡಾ, ಮಹಾರಾಷ್ಟ್ರದ ಜುನಕಾ, ಹಿಮಾಚಲ ಪ್ರದೇಶದ ಘಿಲಾಡು, ಅರುಣಾಚಲ ಪ್ರದೇಶದ ಅಕ್ಕಿಯ ಕೇಕ್‌, 11 ತರಹದ ರಾಗಿಯ ತಿನಿಸುಗಳು, ತಿಪಟೂರಿನ ನೀರಾ, ರಾಜಸ್ಥಾನದ ಮಸಾಲೆ ಮಜ್ಜಿಗೆ, ಕೇರಳದ ಬಾಳೆಹಣ್ಣಿನ ಬಜ್ಜಿ, ಧಾರವಾಡದ ಫೇಡಾ ಸೇರಿ ಒಟ್ಟು 25ಕ್ಕೂ ಅಧಿಕ ರಾಜ್ಯಗಳ ತಿಂಡಿ ತಿನಿಸನ್ನು ಇಲ್ಲಿ ಸವಿದವರಿಗೆ ಗೊತ್ತು ರುಚಿಯ ಮಜಾ.

ದೇಶಿ ಕೌಶಲ್ಯ ಉದ್ಯಮಗಳು ಬರೀ ಪ್ರದರ್ಶನಕ್ಕೆ ಅಷ್ಟೇ ಸೀಮಿತವಾಗದೇ ಮಾರುಕಟ್ಟೆ ವಿಸ್ತರಣೆ ಮಾಡಿಕೊಳ್ಳಲು ಇರುವ ಅವಕಾಶಗಳ ಬಗ್ಗೆಯೂ ಇಲ್ಲಿನ ಮಳಿಗೆಗಳಲ್ಲಿ ಮಾಹಿತಿ ಲಭ್ಯವಿದೆ. ಕೊಲ್ಲಾಪುರದ ಜುರಕಿ ಕಾಲಮರಿ (ಚಪ್ಪಲಿ), ರಾಜಸ್ಥಾನದ ಒಂಟೆ ಚರ್ಮದ ಚಪ್ಪಲಿಗಳ ಉದ್ಯಮಸ್ನೇಹಿ ಪ್ರಯತ್ನಗಳಿಗೆ ಮಳಿಗೆ ಸಾಲಿನ ಅಂಗಡಿಗಳು ಸಾಕ್ಷಿಯಾಗಿ ನಿಂತಿವೆ.

ಸೆವೆನ್‌ ಸಿಸ್ಟರ್ ಯುವ ಬೂಸ್ಟರ್‌
ಕರಕುಶಲ ಮೇಳದ ಮಳಿಗೆ ಸಾಲಿನಲ್ಲಿ ಗಮನ ಸೆಳೆಯುತ್ತಿರುವುದು ಈಶಾನ್ಯ ರಾಜ್ಯಗಳ ಯುವ ಸಮೂಹ. ತಿಂಡಿ ತಿನಿಸಿನ ಮಳಿಗೆಗಳಲ್ಲೂ ಅವರ ಸಾಂಪ್ರದಾಯಕ ಶೈಲಿಯ ತಿನಿಸುಗಳು ಗಮನ ಸೆಳೆದರೆ, ಕಲಾಕೃತಿಗಳು ಮತ್ತು ಇತರೆ ಕರಕುಶಲ ವಸ್ತುಗಳನ್ನು ಅತ್ಯಂತ ಅಚ್ಚುಕಟ್ಟಾಗಿ ಪ್ರದರ್ಶಿಸುತ್ತಿದ್ದಾರೆ. ಇನ್ನು ಸಾಂಪ್ರದಾಯಿಕ ಉಡುಗೆಯಲ್ಲೇ ಮಣಿಪುರ, ಮೇಘಾಲಯ, ಅಸ್ಸಾಂ, ನಾಗಾಲ್ಯಾಂಡ್‌ ಮತ್ತು ಅರುಣಾಚಲ ಪ್ರದೇಶದ ಯುವಕ-ಯುವತಿಯರು ವಸ್ತ್ರ ಮತ್ತು ವಸ್ತು ಮಳಿಗೆಗಳಲ್ಲಿ ಮಿಂಚುತ್ತಿರುವುದು ವಿಶೇಷ

ಕರ್ನಾಟಕದ ಜನರು ತುಂಬಾ ಜಾಣರು. ನಮ್ಮ ಅನ್ವೇಷಣೆಗಳನ್ನು ಅತ್ಯಂತ ಜಾಣ್ಮೆಯಿಂದ ಪರೀಕ್ಷಿಸಿ ನೋಡುತ್ತಾರೆ. ಆಹಾರ, ವಸ್ತು ಮತ್ತು ವಸ್ತ್ರಗಳ ಉದ್ಯಮ ದೈನಂದಿನ ದೇಶಿತನದ ಒಡನಾಟ ಹೊಂದಿದೆ. ಇದಕ್ಕೆ ಯುವಕರು ಹೆಚ್ಚು ಪ್ರಾಧಾನ್ಯತೆ ಕೊಡಬೇಕು.
*ಸುಶೀಲ ಶರ್ಮಾ, ರಾಜಸ್ಥಾನ ಕುಸರಿ ಮಳಿಗೆ

*ಬಸವರಾಜ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next