Advertisement

Dharwad: ರೇಷ್ಮೆ ಉತ್ಪಾದನೆ ಹೆಚ್ಚಳಕ್ಕೆ ಈಗ ಸಿಕ್ಕಿದೆ ಗುರುತ್ವಾಕರ್ಷಣೆಯ ಬಲ!

03:00 PM Aug 28, 2024 | Team Udayavani |

ಧಾರವಾಡ: ರೇಷ್ಮೆ ಕೃಷಿ ರಾಜ್ಯದಲ್ಲಿ ಕಡುಕಷ್ಟ ಎನ್ನುತ್ತಿರುವಾಗಲೇ ಹೆಚ್ಚಿನ ಇಳುವರಿ ಮತ್ತು ಗುಣಮಟ್ಟದ ರೇಷ್ಮೆ ಉತ್ಪಾದನೆಗೆ ಗುರುತ್ವ-ಜೈವಿಕ ತಂತ್ರಜ್ಞಾನದ ಮೂಲಕ ಧಾರವಾಡ ಕೃಷಿ ವಿಶ್ವವಿದ್ಯಾಲಯ ನಡೆಸಿದ ವಿನೂತನ ಸಂಶೋಧನೆ ಫಲ ಕೊಟ್ಟಿದ್ದು, ಬೌದ್ಧಿಕ ಹಕ್ಕು ಸ್ವಾಮ್ಯದ ಗರಿ (ಪೇಟೆಂಟ್‌) ಲಭಿಸಿದೆ.

Advertisement

ಹೌದು, ದೇಶದಲ್ಲಿಯೇ ಗುರುತ್ವಕ್ಕೆ ರೇಷ್ಮೆ ಹುಳಗಳನ್ನು ಇರಿಸಿ ನಡೆಸಿದ ಮೊಟ್ಟ ಮೊದಲ ಪ್ರಯೋಗ ಇದಾಗಿದೆ. 2021ರಲ್ಲಿ ಧಾರವಾಡದ ಕೃಷಿ ವಿವಿಯ ಜೈವಿಕ ತಂತ್ರಜ್ಞಾನ ವಿಭಾಗದ ಡಾ|ರವಿಕುಮಾರ ಹೊಸಮನಿ ಮತ್ತು ಕೀಟಶಾಸ್ತ್ರ ವಿಭಾಗದ ಡಾ|ಶಶಿಕಾಂತ ಜಿ.ರಾಯರ್‌ ಕೈಗೊಂಡ ಸಂಶೋಧನೆ ಸತತ ಎರಡು ವರ್ಷಗಳವರೆಗೆ ವಿಭಿನ್ನ ಪ್ರಯೋಗಕ್ಕೊಳಪಟ್ಟು ಕೊನೆಗೆ ಫಲ ನೀಡಿದೆ.

ಬೌದ್ಧಿಕ ಹಕ್ಕುಸ್ವಾಮ್ಯ: ಹತ್ತಕ್ಕೂ ಹೆಚ್ಚು ಬಾರಿ ಮರು ಪ್ರಯೋಗಕ್ಕೆ ಒಳಪಡಿಸಿದಾಗಲೂ ಅದೇ ಮಾದರಿಯಲ್ಲಿ ರೇಷ್ಮೆಯ ಉತ್ಪಾದನೆ ಮತ್ತು ಗುಣಮಟ್ಟ ಹೆಚ್ಚಾಗಿರುವುದು ರುಜುವಾತಾಗಿದೆ. ಸದ್ಯಕ್ಕೆ ಈ ಬಗೆಯ ಮಾದರಿಯನ್ನು ಧಾರವಾಡ ಕೃಷಿ ವಿವಿ ಮಾತ್ರ ಶೋಧಿಸಿದ್ದು, ಕೇಂದ್ರದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ವ್ಯಾಪ್ತಿಯ ಕಂಟ್ರೋಲರ್‌ ಜನರಲ್‌ ಆಫ್‌ ಪೇಟೆಂಟ್ಸ್‌ ಡಿಜೈನ್ಸ್‌ ಮತ್ತು ಟ್ರೇಡ್‌ ಮಾರ್ಕ್‌ ಸಂಸ್ಥೆಯೂ ದಿ ಇಂಡಿಯನ್‌ ಪೇಟೆಂಟ್‌ ಆಫೀಸ್‌ ಮೂಲಕ ಬೌದ್ಧಿಕ ಹಕ್ಕುಸ್ವಾಮ್ಯನೀಡಿದೆ.

ಏನಿದು ಅನ್ವೇಷಣೆ?: ರೇಷ್ಮೆ ಉತ್ಪಾದನೆಗೆ ಈವರೆಗೂ ರೇಷ್ಮೆ ಗೂಡಿನಲ್ಲಿ (ಚಂದ್ರಿಕೆ) ಹುಳಗಳನ್ನು ಬಿಟ್ಟು ರೇಷ್ಮೆ ಪಡೆಯಲಾಗುತ್ತಿತ್ತು. 45-50 ದಿನಗಳಲ್ಲಿ ಮೊಟ್ಟೆ, ಲಾರ್ವಾ, ಕೀಟ, ಕೊಕೊನ್‌ ಮತ್ತು ಚಿಟ್ಟೆ ಸ್ವರೂಪದ ಐದು ಹಂತಗಳಲ್ಲಿ ರೇಷ್ಮೆ ಹುಳು ರೂಪುಗೊಳ್ಳುತ್ತದೆ. ಈ ಪೈಕಿ ಲಾರ್ವಾ ಇದ್ದಾಗಿನ 5ನೇ ಹಂತದ ಹುಳಗಳನ್ನು ಭೂಮಿಯ ಗುರುತ್ವಾಕರ್ಷಣೆಗಿಂತಲೂ 20 ಪಟ್ಟು ಹೆಚ್ಚಿನ ಗುರುತ್ವದಲ್ಲಿ ಒಂದು ಗಂಟೆ ಇರಿಸಿ ನಿರ್ದಿಷ್ಟ ಘಟಕದಲ್ಲಿ ತಿರುಗಿಸಲಾಗುತ್ತದೆ. ಒಂದು ಅವಧಿಗೆ ಒಟ್ಟು 25 ಹುಳಗಳನ್ನು ಇರಿಸಿ ಅವುಗಳನ್ನು ಮರಳಿ ರೇಷ್ಮೆಗೂಡಿನಲ್ಲಿ ಹಾಕಲಾಗುತ್ತದೆ.

Advertisement

ಈ ಗುರುತ್ವದ ಸಹಾಯದಿಂದ ಅತ್ಯಧಿಕ ರೇಷ್ಮೆ ಉತ್ಪಾದನೆ ಮಾಡಲು ಸಹಾಯಕ್ಕೆ ಬರುತ್ತಿದೆ. ಈಗ ಈ ತಂತ್ರಜ್ಞಾನ ರೈತರ ಹೊಲಗಳಿಗೆ ಇಳಿಸಲು ಅಗತ್ಯವಾದ ಸಿದ್ಧತೆಯನ್ನು ಧಾರವಾಡ ಕೃಷಿ ವಿವಿ ಮಾಡಿಕೊಂಡಿದೆ. ಇದರಿಂದ 100 ಕೆ.ಜಿ. ರೇಷ್ಮೆ ಉತ್ಪಾದನೆ ಮಾಡುತ್ತಿದ್ದ ರೈತ ಅಷ್ಟೇ ಶ್ರಮ ಮತ್ತು ಖರ್ಚಿನಲ್ಲಿನ್ನು 112 ಕೆ.ಜಿ. ಉತ್ಪಾದನೆ ಮಾಡುತ್ತಾನೆ. ಜತೆಗೆ ಗುಣಮಟ್ಟದಲ್ಲೂ ಶೇ.15ರಷ್ಟು ಹೆಚ್ಚಳವಾಗಿದ್ದು ಸಾಬೀತಾಗಿದೆ.

ಕೃಷಿ ವಿವಿಗೆ 3ನೇ ಪೇಟೆಂಟ್‌ ಗರಿ

ಧಾರವಾಡ ಕೃಷಿ ವಿವಿ ಶೋಧಿಸಿದ ಜೋಳ ಮತ್ತು ಸಾವಿ ತಳಿಗಳನ್ನು ಪ್ರಧಾನಿ ನರೇಂದ್ರ ಮೋದಿ ಈ ತಿಂಗಳ 11ರಂದು ದೆಹಲಿಯಲ್ಲಿ ಬಿಡುಗಡೆ ಮಾಡಿದ್ದಾರೆ. ಕೃಷಿ ವಿವಿ ಆರಂಭಗೊಂಡ 37 ವರ್ಷಗಳಲ್ಲಿ ಈಗಾಗಲೇ ಕೃಷಿ ವಿಜ್ಞಾನಿಗಳಾದ ಡಾ|ವಿ.ಪಿ.ಸಾವಳಗಿ ಮತ್ತು ಡಾ|ಆರ್‌.ವಾಸುದೇವ ಬೇರೆ ಬೇರೆ ಕೃಷಿ ಪ್ರಯೋಗಗಳಲ್ಲಿ ಬೌದ್ಧಿಕ ಹಕ್ಕುಸ್ವಾಮ್ಯ ಪಡೆದುಕೊಂಡಿದ್ದರು. ಈಗ ಡಾ|ರವಿಕುಮಾರ್‌ ಹಾಗೂ ತಂಡದಿಂದ ಕೃಷಿ ವಿವಿಗೆ ಮೂರನೇ ಬೌದ್ಧಿಕ ಹಕ್ಕುಸ್ವಾಮ್ಯ ಲಭಿಸಿದಂತಾಗಿದೆ.

ಗ್ರಾಮೀಣ ರೈತ ಕುಟುಂಬದಿಂದ ಬಂದ ನನಗೆ ಗುರುತ್ವ ಬಲ ಮತ್ತು ಜೈವಿಕತೆಯ ಪ್ರಯೋಗಗಳು ಅಚ್ಚುಮೆಚ್ಚು. ಕಷ್ಟದಲ್ಲಿರುವ ರೇಷ್ಮೆ ಕೃಷಿಗೆ ಏನಾದರೂ ಕೊಡುಗೆ ಕೊಡಬೇಕು ಎನ್ನುವ ನನ್ನ ಕನಸು ನನಸಾಗಿದೆ. ●ಡಾ|ರವಿಕುಮಾರ್‌ ಹೊಸಮನಿ, ಜೈವಿಕ ತಂತ್ರಜ್ಞಾನ ವಿಭಾಗ, ಕೃಷಿ ವಿವಿ,ಧಾರವಾಡ

ಕಳೆದ 2 ವರ್ಷಗಳಿಂದ ಯಶಸ್ವಿ ಯಾಗಿ ನಡೆಸಿರುವ ವಿಭಿನ್ನ ಪ್ರಯೋ ಗಗಳ ಒಟ್ಟು 10 ಪೇಟೆಂಟ್‌ಗಳನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿದ್ದೇವೆ. ಬಹುತೇಕ ಎಲ್ಲ ದಕ್ಕೂ ಪೇಟೆಂಟ್‌ ಸಿಕ್ಕುವ ಸಾಧ್ಯತೆ ಇದೆ. ●ಡಾ|ಪಿ.ಎಲ್‌.ಪಾಟೀಲ್‌, ಕುಲಪತಿ, ಕೃಷಿ ವಿವಿ-ಧಾರವಾಡ

■ ಬಸವರಾಜ್‌ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next