Advertisement
2023-24ನೇ ಸಾಲಿನಲ್ಲಿ ಹಿರಿಯ ರಂಗಕರ್ಮಿ ರಂಗ ಸಂಘಟಕ ಶಂಕರ ಹಲಗತ್ತಿ ಅವರಿಗೆ, 2022-23ನೇ ಸಾಲಿನಲ್ಲಿ ಪಟ್ಟಿಯಲ್ಲಿ ರಜನಿ ಗರುಡ ಅವರಿಗೆ ಹಾಗೂ 2024-25ನೇ ಸಾಲಿಗಾಗಿ ಹುಬ್ಬಳ್ಳಿಯ ಚೆನ್ನಬಸಪ್ಪ ಕಾಳೆ ಅವರಿಗೆ ಕಲ್ಚರ್‍ಡ್ ಕಾಮಿಡಿಯನ್ ಕೆ.ಹಿರಣ್ಣಯ್ಯ ದತ್ತಿ ಪುರಸ್ಕಾರ ಹಾಗೂ ನಂದರಾಣಿ ಕಲ್ಕತ್ತಾ ಅವರಿಗೆ ಪದ್ಮಶ್ರೀ ಚಿಂದೋಡಿ ವೀರಪ್ಪ ದತ್ತಿ ಪುರಸ್ಕಾರ ಲಭಿಸಿದೆ.
Related Articles
Advertisement
ರಜನಿ ಬಗ್ಗೆ ಒಂದಿಷ್ಟು: ಉತ್ತರ ಕನ್ನಡ ಜಿಲ್ಲೆಯ ಶಿರಸಿ ಬಳಿಯ ಪುಟ್ಟ ಹಳ್ಳಿಯವರು. ನೀನಾಸಮ್ ರಂಗಶಿಕ್ಷಣ ಕೇಂದ್ರದಲ್ಲಿ ತರಬೇತಿ ಪಡೆದು ನಂತರ ತಿರುಗಾಟದಲ್ಲಿ ನಟಿಯಾಗಿದ್ದರು. ಮೊದಲು ಶಿರಸಿ, ಗದಗದಲ್ಲಿ ಮಕ್ಕಳಿಗೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ರಂಗತರಬೇತಿ ಶಿಬಿರ ಮಾಡಿದ್ದಾರೆ. ಕವಿ-ಕಾವ್ಯ ಟ್ರಸ್ಟ್ ಹೆಗ್ಗೋಡು ಮತ್ತು ಯುನಿಸೆಫ್ ನಡೆಸಿದ ಅಂಗನವಾಡಿ ಶಿಕ್ಷಕರಿಗೆ ಸಾಂಸ್ಕೃತಿಕ ತರಬೇತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ನಂತರ ಸಂಗಾತಿ ಡಾ. ಪ್ರಕಾಶ ಗರುಡರೊಡನೆ ಧಾರವಾಡದಲ್ಲಿ ನೆಲೆಸಿ, ಬಾಲಬಳಗ ಸೃಜನಶೀಲ ಶಿಕ್ಷಣ ಸಂಸ್ಥೆಯನ್ನು ಹುಟ್ಟುಹಾಕಿ, ಪರ್ಯಾಯ ಶಿಕ್ಷಣ ಕ್ರಮದ ಶಾಲೆಯನ್ನು ಪ್ರಾರಂಭಿಸಿದರು.
ನಿರಂತರ ರಂಗಚಟುವಟಿಕೆಗಳಲ್ಲಿ ತೊಡಗಿಕೊಂಡಿರಲು ‘ಗೊಂಬೆಮನೆ’ಟ್ರಸ್ಟನ್ನು 1997ರಲ್ಲಿ ಪ್ರಾರಂಭಿಸಿದರು. ಆ ಮೂಲಕ ಮಕ್ಕಳ ರಂಗತರಬೇತಿ, ಶಿಕ್ಷಕರಿಗೆ, ಹವ್ಯಾಸಿ ಕಲಾವಿದರಿಗೆ ರಂಗತರಬೇತಿ, ನಾಟಕ, ಶಿಕ್ಷಣ ಕುರಿತಾದ ಕಾರ್ಯಾಗಾರ – ತರಬೇತಿ ಮಾಡಿದ್ದಾರೆ. ಸಾಂಪ್ರದಾಯಿಕ ತೊಗಲುಗೊಂಬೆಯಾಟವನ್ನು ಮಕ್ಕಳಿಗಾಗಿ ಹೊಸದಾಗಿ ವಿನ್ಯಾಸ ಮಾಡಿ, ಅದರ ಛಾಯಾಚಲನೆ ರೆಪರ್ಟರಿಯು ದೇಶದಾದ್ಯಂತ ಸಂಚರಿಸಿ, 6000 ಕ್ಕೂ ಅಧಿಕ ಪ್ರದರ್ಶನಗಳನ್ನು ನೀಡಿದ್ದಾರೆ. ಶಿಕ್ಷಣಕ್ಕಾಗಿ ರಂಗಭೂಮಿ ಕಾರ್ಯಕ್ರಮದ ತರಬೇತಿಯನ್ನು ಶಿಕ್ಷಕರಿಗೆ ಮತ್ತು ಪ್ರಶಿಕ್ಷಕರಿಗೆ ಕರ್ನಾಟಕದಾದ್ಯಂತ ಮಾಡಿದ್ದಾರೆ. ಉತ್ತರಕರ್ನಾಟಕದ ಬಯಲಾಟ ಪರಂಪರೆಯ ಸದ್ಯದ ಸ್ಥಿತಿಗತಿಯ ಕುರಿತು ಅಧ್ಯಯನ ಮತ್ತು ದಾಖಲೆಯನ್ನು ಮಾಡಿದ್ದಾರೆ. ಕನ್ನಡ ರಂಗಭೂಮಿಯ ಮುಖ್ಯವಾಹಿನಿಯಲ್ಲಿ ಕಳೆದ 35 ವರ್ಷಗಳಿಂದ ನಟನೆ, ನಿರ್ದೇಶನ, ವಸವಿನ್ಯಾಸ, ಬರವಣಿಗೆ ಸಂಘಟನೆಯ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.