Advertisement

Dharwad: ಕಪ್ಪತ್ತಗುಡ್ಡದ ರಕ್ಷಣೆಗೆ ಹೋರಾಟ ನಿರಂತರ: ನಂದಿವೇರಿ ಸ್ವಾಮೀಜಿ

05:33 PM Oct 08, 2024 | Team Udayavani |

ಧಾರವಾಡ: ಸಸ್ಯಮತ್ತು ಜೀವ ಸಂಕುಲದ ಪ್ರತೀಕವಾಗಿರುವ ಕಪ್ಪತ್ತಗುಡ್ಡ ರಕ್ಷಣೆಗೆ ನಿರಂತರ ಹೋರಾಟ ಮತ್ತು ಜಾಗೃತಿ ನಡೆಯುವುದು ಅನಿವಾರ್ಯವಾಗಿದ್ದು, ಮುಂದಿನ ದಿನಗಳಲ್ಲಿಯೂ ಅದನ್ನು ಸಂರಕ್ಷಿಸುವ ಹೊಣೆ ಯುವ ಪೀಳಿಗೆ ಮೇಲಿದೆ ಎಂದು ಕಪ್ಪತ್ತಗುಡ್ಡ ನಂದಿವೇರಿ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಹೇಳಿದರು.

Advertisement

ಇಲ್ಲಿನ ಕವಿವಿಯ ಸಿನೆಟ್ ಹಾಲ್‌ನಲ್ಲಿ ಗಾಂಧಿ ಅಧ್ಯಯನ ವಿಭಾಗ ಹಮ್ಮಿಕೊಂಡಿದ್ದ ಸಮಕಾಲಿನ ಪರಿಸರ ಬಿಕ್ಕಟ್ಟಿನ ಸಂದರ್ಭದಲ್ಲಿ ಗಾಂಧಿ ಚಿಂತನೆ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿದರು.

ಔಷಧಿ ಸಸ್ಯ ಸಂಕುಲ, ಉತ್ತಮ ಹವಾಗುಣ, ಶುದ್ಧ ಜಲಸಂಪತ್ತು ಇರುವ ಕಪ್ಪತ್ತಗುಡ್ಡದ ಮೇಲೆ ದುಷ್ಟ ಶಕ್ತಿಗಳು ಕಣ್ಣಿಟ್ಟಿವೆ. ಇದನ್ನು ಲೂಟಿ ಹೊಡೆಯಲು ಕಾಲ ಕಾಲಕ್ಕೆ ನಾನಾ ತಂತ್ರ ಮಾಡುತ್ತಿದ್ದಾರೆ. ಆದರೆ ಅದನ್ನು ಉಳಿಸಿಕೊಳ್ಳಲು ಮುಂದಿನ ಪೀಳಿಗೆ ಸಜ್ಜಾಗಬೇಕು. ಯುವಕರು ವರ್ಷಕ್ಕೆ ಒಂದು ಬಾರಿಯಾದರೂ ಕಪ್ಪತ್ತಗುಡ್ಡಕ್ಕೆ ಚಾರಣ ಹೋಗಿ, ಅದರ ರಕ್ಷಣೆಗೆ ಕಂಕಣ ಕಟ್ಟಬೇಕು ಎಂದು ಸ್ವಾಮೀಜಿ ಹೇಳಿದರು.

ಪರಿಸರ ಜಾಗೃತಿ ಅಗತ್ಯ: ಚಿತ್ರನಟ ಸುರೇಶ ಹೆಬ್ಳಿಕರ್ ಮಾತನಾಡಿ, ತಂತ್ರಜ್ಞಾನ ಆಧಾರಿತ ಅಭಿವೃದ್ಧಿಯಿಂದ ಪರಿಸರ ತೀವ್ರ ನಾಶವಾಗುತ್ತಿದೆ. ದೇಶಿ ಸಿದ್ದಾಂತಗಳ ಮೇಲೆ ಗಾಂಧಿಜಿ ತತ್ವಗಳ ಮೇಲೆ ಮತ್ತೆ ಪರಿಸರ ಸುಧಾರಿಸಲು ಅವಕಾಶವಿದ್ದು, ಯುವ ಪೀಳಿಗೆ ಸರಳ ಜೀವನ ರೂಢಿಸಿಕೊಳ್ಳಬೇಕು. ಆರ್ಥಿಕ ಪ್ರಗತಿ ಪರಿಸರ ನಾಶಕ್ಕೆ ಕಾರಣವಾಗದಂತಹ ದಾರಿ ಹುಡುಕಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಪ್ರಭಾರ ಕುಲಪತಿ ಡಾ.ಬಿ.ಎಂ.ಪಾಟೀಲ್ ಮಾತನಾಡಿ, ಜಗತ್ತು ಎಲ್ಲರ ಆಸೆಗಳನ್ನು ಪೂರೈಸಬಲ್ಲದು, ಆದರೆ ದುರಾಸೆಗಳನ್ನಲ್ಲ ಎಂದು ಮಹಾತ್ಮ ಗಾಂಧೀಜಿ ಬಹಳ ವರ್ಷಗಳ ಹಿಂದೆಯೇ ನಮಗೆಲ್ಲ ಮನದಟ್ಟು ಮಾಡಿದ್ದಾರೆ. ಪರಿಸರ ಜಾಗೃತಿ ಯುವ ಪೀಳಿಗೆಯಲ್ಲಿ ಹೆಚ್ಚಬೇಕಿದೆ ಎಂದರು.

Advertisement

ಗಾಂಧಿ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ.ಶಿವಾನಂದ ಶೆಟ್ಟರ ಪ್ರಾಸ್ತಾವಿಕವಾಗಿ ಮಾತನಾಡಿ, ಗಾಂಧಿ ಮಾರ್ಗ ರೂಪಿಸಿರುವ ಸರಳ ಜೀವನ, ಮಿತ ಬಳಕೆ ಖಂಡಿತವಾಗಿಯೂ ಪರಿಸರ ರಕ್ಷಣೆಗೆ ಸಹಕಾರಿ ಎಂದರು.

ಅರ್ಥಶಾಸ್ತ್ರಜ್ಞ ಡಾ.ಗೋಪಾಲ ಕಡಿಕೋಡಿ, ಪಕ್ಷಿ ತಜ್ಞ ಆರ್.ಜಿ.ತಿಮ್ಮಾಪೂರ, ಹರ್ಷವರ್ಧನ ಶೀಲವಂತ, ಬಾಲಚಂದ್ರ ಜಾಬಶೆಟ್ಟಿ ಅವರುಗಳು ಪರಿಸರ ಮತ್ತು ಗಾಂಧಿ ಚಿಂತನೆ ಕುರಿತು ವಿಷಯ ಮಂಡಿಸಿದರು. ಕವಿವಿ ಎನ್‌ಎಸ್‌ಎಸ್ ಘಟಕದ ಮುಖ್ಯಸ್ಥರಾದ ಡಾ.ಮಹಾದೇವ ದಳಪತಿ ಕಾರ್ಯಕ್ರಮ ನಿರೂಪಿಸಿದರು. ಡಾ.ಎಸ್.ಬಿ.ಬಸೆಟ್ಟಿ ಸ್ವಾಗತಿಸಿ, ವಂದಿಸಿದರು.

ಕಪ್ಪತ ಗುಡ್ಡದ ಕಾವಲುಗಾರ

ಕಪ್ಪತ್ತಗುಡ್ಡದಲ್ಲಿ ಚಿನ್ನದ ಗಣಿಗಾರಿಕೆ ಮಾಡಲು 28 ಕಂಪನಿಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ, ಮುಖ್ಯಮಂತ್ರಿಗಳು ಗಣಿಗಾರಿಕೆಗೆ ಅವಕಾಶ ಕೊಡದೇ ತಿರಸ್ಕರಿಸಿದ್ದು ಖುಷಿ ತಂದಿದೆ. ಸೋಡಿಯಂ ಸೈನಡ್ ಹಾಕಿ ಗಣಿಗಾರಿಕೆ ಮಾಡುವದರಿಂದ ತುಂಗಭದ್ರ ನದಿಗೆ ಈ ವಿಷ ಸೇರುವುದು ಪಕ್ಕಾ. ಹೀಗಾಗಿ ನಾನು ಕಪ್ಪತ್ತಗುಡ್ಡದ ಕಾವಲುಗಾರನಾಗಿದ್ದೇನೆ. – ಶಿವಕುಮಾರ ಸ್ವಾಮೀಜಿ, ನಂದಿವೇರಿಮಠ, ಕಪ್ಪತ್ತಗುಡ್ಡ.

ಧಾರವಾಡದ ಪರಿಸರವನ್ನಾದರೂ ಉಳಿಸಿಕೊಳ್ಳಲು ಈಗಲೇ ಯೋಜನೆ ರೂಪಿಸಬೇಕು. ಇಲ್ಲಿನ ಕೆರೆಗಳ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕಿದೆ.ಮುಂದಿನ ಪೀಳಿಗೆಗೆ ಸುಂದರ ಧಾರವಾಡ ಮರುಸೃಷ್ಠಿ ಅಗತ್ಯ. –ಸುರೇಶ ಹೆಬ್ಳಿಕರ್, ಚಿತ್ರನಟ, ಪರಿಸರವಾದಿ.

Advertisement

Udayavani is now on Telegram. Click here to join our channel and stay updated with the latest news.

Next