Advertisement

Dharwad: ತತ್ವಶಾಸ್ತ್ರವೇ ನನ್ನ ಕಾದಂಬರಿಗಳ ಮೂಲಸೆಲೆ: ಎಸ್.ಎಲ್.ಭೈರಪ್ಪ

07:21 PM Sep 19, 2024 | Team Udayavani |

ಧಾರವಾಡ: ಭಾರತೀಯ ತತ್ವಶಾಸ್ತ್ರ ಅಧ್ಯಯನದಿಂದಾಗಿಯೇ ವಿಷಯದ ಆಳಕ್ಕೆ ಇಳಿದು ಉತ್ತಮ ಕಾದಂಬರಿಗಳನ್ನು ಬರೆಯಲು ನನಗೆ ಸಾಧ್ಯವಾಯಿತು ಎಂದು ನಾಡೋಜ ಹಿರಿಯ ಕಾದಂಬರಿಕಾರ ಡಾ.ಎಸ್.ಎಲ್‌.ಬೈರಪ್ಪ ಹೇಳಿದರು.

Advertisement

ಇಲ್ಲಿನ ಕಲ್ಯಾಣ ನಗರದಲ್ಲಿ ಗುರುವಾರ ಉತ್ತರ ಕರ್ನಾಟಕ ಲೇಖಕಿಯರ ಸಂಘ ಹಮ್ಮಿಕೊಂಡಿದ್ದ ಬರಪ್ಪನವರೊಂದಿಗೆ ಮಾತುಕತೆ ಸಾಹಿತ್ಯ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಜನಮಾನಸದ ಕವಿ ಅಥವಾ ಲೇಖಕರು ಅಧ್ಯಯನ ಮಾಡಿ ಆಳಕ್ಕೆ ಇಳಿದು ಸಾಹಿತ್ಯ ರಚಿಸಬೇಕು. ಕಾದಂಬರಿ ಬರೆಯುವವರು ಆಯ್ದುಕೊಂಡ ವಿಷಯದ ಆಳಕ್ಕೆ ಇಳಿಯಲು ಆಗದಿದ್ದರೆ ಅವರು ಬರೆಯಲೇ ಬಾರದು. ದ.ರಾ.ಬೇಂದ್ರೆ ಅವರು ಕೂಡ ಅತ್ಯಂತ ಸರಳ ಭಾಷೆಯಲ್ಲಿ ಸಾಹಿತ್ಯ ರಚಿಸಿದ್ದರೂ, ಅವರು ವಿಷಯದ ಆಳಕ್ಕೆ ಇಳಿದಿದ್ದಾರೆ ಎಂದು ಹೇಳಿದರು.

ಜೀವನದಲ್ಲಿ ನನ್ನ ತಂದೆಯಿಂದ, ಬಂಧು ಬಾಂಧವರಿಂದ ನಾನು ಅನುಭವಿಸಿದ ಯಾತನೆ, ನೋವು ಮತ್ತು ವಿಪ್ಲವಗಳೇ ನನ್ನ ಕಾದಂಬರಿಗಳು ಉತ್ತಮವಾಗಿ ಹೊರಹೊಮ್ಮಲು ಸಾಧ್ಯವಾಯಿತು. ನಾನು ನನಗಾದ ನೋವುಗಳನ್ನೇ ಸಾಹಿತ್ಯದ ರೂಪದಲ್ಲಿ ಹೊರ ಹೊಮ್ಮಿಸಿದೆ. ನನ್ನ ತಾಯಿ ಕಥೆ ಹೇಳುವ ವಿಧಾನ ಮತ್ತು ನನ್ನ ತಂದೆ ನೀಡಿದ ನೋವುಗಳೇ ನನ್ನನ್ನ ಇನ್ನಷ್ಟು ಓದಿಗೆ ಅಂಟಿಕೊಳ್ಳುವಂತೆ ಮಾಡಿದವು ಎಂದರು.

ಕುಡಿತ ಸದಾ ಕೆಡಕು: ಕುಡಿದು ಸಾಹಿತ್ಯ ಬರೆಯಬೇಕು ಎನ್ನುವವರಿಗೆ ನಾನು ಏನು ಹೇಳಲಾರೆ. ಆದರೆ ಕುಡಿತ ಪ್ರತಿದಿನ ಸಂಜೆಗೆ ಅವರನ್ನು ತನ್ನತ್ತ ಸೆಳೆದುಕೊಂಡು ಬಿಡುತ್ತದೆ. ಅದೊಂದು ಚಟವಾಗಿ ರೂಪುಗೊಂಡು ನಂತರ ಅವರಿಂದ ಉತ್ತಮ ಸಾಹಿತ್ಯ ರಚನೆ ಅಸಾಧ್ಯವಾಗುತ್ತದೆ. ನನಗೆ ಎಷ್ಟೋ ಜನರು ಕುಡಿಯದೇ ಇರುವ ನಿಮಗೇನು ಗೊತ್ತು ಅದರ ವಿಚಾರ ಎಂದು ಚೇಷ್ಟೇ ಮಾಡುತ್ತಾರೆ ಎಂದು ಚಟಾಕಿ ಹಾರಿಸಿದರು.

Advertisement

ಲೇಖಕನಿಗೆ ಒಂದು ಶಿಸ್ತು ಬೇಕು. ಅದನ್ನು ಮೀರಿ ಕ್ಷೇತ್ರಕಾರ್ಯ ಮಾಡಬೇಕು. ಆಯ್ದುಕೊಂಡ ವಿಷಯ ವಸ್ತುಗಳಿಗೆ ತಕ್ಕಂತೆ ವರ್ಷಾನುಗಟ್ಟಲೇ ಅಧ್ಯಯನ ಮಾಡಬೇಕು. ಅದರ ಫಲಿತಗಳನ್ನು ದಾಖಲಿಸುವಾಗ ಅದಕ್ಕೆ ಕಾದಂಬರಿಯ ಸ್ವರೂಪ ನೀಡಬೇಕು. ನಾನು ಮಾಡಿದ್ದು ಕೂಡ ಹಾಗೆ. ಪರ್ವ ಬರೆಯುವಾಗ ಹಿಮಾಲಯದ ಬುಡಕಟ್ಟುಗಳ ಜೊತೆಗೆ ಹೋಗಿ ವಾಸ ಮಾಡಿ ಮಾಹಿತಿ ಪಡೆದುಕೊಂಡಿದ್ದೇ. ಇಡೀ ದೇಶದ ಎಲ್ಲಾ ರಾಜ್ಯಗಳಲ್ಲಿನ ಹಳ್ಳಿ ಹಳ್ಳಿ, ಗಲ್ಲಿ ಗಲ್ಲಿಗಳಲ್ಲಿ ಸುತ್ತಾಡಿ ಅಲ್ಲಿನ ಭಾಷೆ, ಸಂಸ್ಕೃತಿ, ಆಚಾರ ವಿಚಾರಗಳನ್ನು ಅಧ್ಯಯನ ಮಾಡಿ ನಾನು ಅವುಗಳನ್ನು ಕಾದಂಬರಿ ವಸ್ತುಗಳನ್ನಾಗಿ ಮಾಡಿಕೊಂಡೆ ಎಂದು ಬೈರಪ್ಪ ಹೇಳಿದರು.

ಉತ್ತರ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ರಾಜೇಶ್ವರಿ ಮಹೇಶ್ವರಯ್ಯ ಮಾತನಾಡಿ, ಎಸ್.ಎಲ್.ಬೈರಪ್ಪ ಅವರು ಕನ್ನಡ ಭಾಷೆ ಮತ್ತು ಕಾದಂಬರಿ ಲೋಕದ ಅನರ್ಘ್ಯ ರತ್ನ. ಕನ್ನಡ ಸಾರಸ್ವತ ಲೋಕಕ್ಕೆ ಅವರು ನೀಡಿದ ಕೊಡುಗೆ ಪರ್ವತಕ್ಕಿಂತಲೂ ದೊಡ್ಡದಾಗಿದೆ. ಅವರ ಪತಿಯೊಂದು ಕಾದಂಬರಿಯೂ ಒಂದೊಂದು ಉತ್ತಮ ಸಂದೇಶವನ್ನು ಮುಂದಿನ ಪೀಳಿಗೆಗೆ ಸಾರಿ ಹೇಳುವಂತಿವೆ ಎಂದರು.

ಲೇಖಕಿಯರ ಸಂಘದ ಉಪಾಧ್ಯಕ್ಷೆ ಪ್ರಜ್ಞಾ ಮತ್ತಿಹಳ್ಳಿ, ಕೋಶಾಧ್ಯಕ್ಷೆ ಮೇಘಾ ಹುಕ್ಕೇರಿ, ಕಾರ್ಯದರ್ಶಿ ಉಷಾ ಗದ್ದಗಿಮಠ, ಮತ್ತು ಸುನಿತಾ ಮೂರಶಿಳ್ಳಿ ಸೇರಿದಂತೆ ಸದಸ್ಯರೆಲ್ಲರೂ ಉಪಸ್ಥಿತರಿದ್ದರು.

94ರ ಹರೆಯದ ಕಾದಂಬರಿಕಾರ ಎಸ್.ಎಲ್.ಬೈರಪ್ಪ ಅವರು ಮೂರು ದಿನಗಳ ಕಾಲ ಅವಳಿ ನಗರದ ವಿವಿಧ ಸಂಘ ಸಂಸ್ಥೆಗಳಿಗೆ, ಸ್ನೇಹಿತರ ನಿವಾಸಗಳಿಗೆ ಭೇಟಿಕೊಟ್ಟರು. ಅವರು ಹೋದಲ್ಲೆಲ್ಲ ಅವರ ಅಭಿಮಾನಿಗಳು ನೂರಾರು ಸಂಖ್ಯೆಯಲ್ಲಿ ನರೆದು ಅವರ ಜೊತೆ ಸೆಲ್ಪಿ ಕ್ಲಿಕ್ಕಿಸಿಕೊಂಡರು. ಧಾರವಾಡದಲ್ಲಿ ಉತ್ತರ ಕರ್ನಾಟಕ ಲೇಖಕಿಯ ಸಂಘದಲ್ಲಿ ಹಮ್ಮಿಕೊಂಡಿದ್ದ ಸಾಹಿತ್ಯ ಸಂವಾದದಲ್ಲಿ ಹಿರಿಯ ಲೇಖಕಿಯರು ಪಾಲ್ಗೊಂಡು ಬೈರಪ್ಪನವರ ವಿವಿಧ ಕಾದಂಬರಿಗಳ ವಿಷಯ ವಸ್ತು ಮತ್ತು ನಿರೂಪನಾ ಶೈಲಿ ಸೇರಿದಂತೆ ಅನೇಕ ವಿಚಾರಗಳನ್ನು ಚರ್ಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next