Advertisement

Dharwad: ಪ್ರಯಾಣ ರದ್ದು ಮಾಡಿದ ವಿಮಾನಯಾನ ಸಂಸ್ಥೆಗೆ ದಂಡ

10:53 PM Aug 28, 2023 | Team Udayavani |

ಧಾರವಾಡ :ಪ್ರಯಾಣ ಮಾಡಬೇಕಿದ್ದ ನಿಗದಿತ ದಿನದ ಹಿಂದಿನ ದಿನದಂದು ಏಕಾಏಕಿ ವಿಮಾನ ಸಂಚಾರ ರದ್ದುಗೊಳಿಸಿದ ಸ್ಟಾರ ಏರಲೈನ್ಸ್ ಕಂಪನಿಗೆ ದಂಡ ಹಾಕಿರುವ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗವು, 27 ಪ್ರಯಾಣಿಕರಿಗೆ ತಲಾ 25 ಸಾವಿರ ರೂ. ನೀಡುವಂತೆ ತೀರ್ಪು ನೀಡಿದೆ.

Advertisement

ಈ ದೂರಿನ ಬಗ್ಗೆ ವಿಚಾರಣೆ ಕೈಗೊಂಡ ಆಯೋಗ ಅಧ್ಯಕ್ಷರಾದ ಈಶಪ್ಪಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ ಒಳಗೊಂಡ ಆಯೋಗವು, ದಿಢೀರಾಗಿ ವಿಮಾನ ರದ್ದುಪಡಿಸಿ ಪ್ರವಾಸಿಗರಿಗೆ ಬೇರೆ ವ್ಯವಸ್ಥೆ ಮಾಡದೇ ಇರುವುದರಿಂದ ಸ್ಟಾರ್ ಏರಲೈನ್ಸ್ ನವರು ಎಲ್ಲ ದೂರುದಾರರಿಗೆ ಸೇವಾ ನ್ಯೂನ್ಯತೆ ಎಸಗಿದ್ದಾರೆ ಎಂದು ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದೆ.

ಈ ಹಿನ್ನಲೆಯಲ್ಲಿ ದೂರುದಾರರಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ತೊಂದರೆಗಾಗಿ ಸ್ಟಾರ್ ಏರಲೈನ್ಸ್ ನವರು ಎಲ್ಲ 27 ದೂರುದಾರರಿಗೆ ತಲಾ 25,000 ರೂ.ಗಳನ್ನು ಪರಿಹಾರ ಮತ್ತು 5,000 ರೂ.ಗಳನ್ನು ಪ್ರಕರಣದ ನಡೆಸಿದ ಖರ್ಚು ವೆಚ್ಚ ಸೇರಿದಂತೆ ಒಟ್ಟು 8,10,000 ರೂ.ಗಳನ್ನುತೀರ್ಪು ನೀಡಿದ ಒಂದ ತಿಂಗಳ ಒಳಗಾಗಿ ಸಂದಾಯ ಮಾಡುವಂತೆ ಸ್ಟಾರ್  ಏರಲೈನ್ಸ್ ನವರಿಗೆ ನಿರ್ದೇಶನ ನೀಡಿದೆ

ಇನ್ನು ಏಕಾಏಕಿ ವಿಮಾನ ರದ್ದಾಗಿ ತಕ್ಷಣ ಬೇರೆ ವಿಮಾನ ವ್ಯವಸ್ಥೆ ಮಾಡಿದ್ದರಿಂದ 1,66,823 ರೂ.ಗಳನ್ನು ಹೆಚ್ಚಿಗೆ ಖರ್ಚು ಮಾಡಿದ್ದೇನೆ ಅನ್ನುವ ಸುರಕ್ಷಾ ಟೂರ್ಸ್ ಮಾಲಕ ಸುನೀಲ ತೊಗರಿ ಅವರ ಬೇಡಿಕೆಯನ್ನೂ ಆಯೋಗವು ಪುರಸ್ಕರಿಸಿದೆ. ಹೀಗಾಗಿ ಆ ಹಣ 1,66,823 ರೂ.ಗಳನ್ನೂ ಕೂಡ ಒಂದು ತಿಂಗಳ ಒಳಗಾಗಿ ಸುರಕ್ಷಾ ಟೂರ್ಸ್ ನ ವರಿಗೆ ಕೊಡುವಂತೆ ಸ್ಟಾರ್‌ಏರಲೈನ್ಸ್ ನವರಿಗೆ ಆಯೋಗ ತಿಳಿಸಿದೆ. ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಮೇಲೆ ಹೇಳಿದ ಹಣ ಸ್ಟಾರ್ ಏರಲೈನ್ಸ್ ಕೊಡದೇ ಇದ್ದಲ್ಲಿ ಆ ಎಲ್ಲ ಹಣದ ಮೇಲೆ ಈ ತೀರ್ಪು ನೀಡಿದ ದಿನಾಂಕದಿಂದ ಶೇ.8 ರಂತೆ ಬಡ್ಡಿ ಕೊಡಲು ಆದೇಶಿಸಿದೆ.

ಪ್ರಕರಣದ ಹಿನ್ನಲೆ

Advertisement

ಧಾರವಾಡದ  ವಕೀಲೆಯಾ ದ ಮಹೇಶ್ವರಿ ಉಪ್ಪಿನ (ದೇಸಾಯಿ) ಮತ್ತು ಅವರ 26 ಸಂಗಡಿಗರು ಹುಬ್ಬಳ್ಳಿಯ ಸುರಕ್ಷಾ ಟೂರ್ಸ್ ಮೂಲಕ 09-10-2022 ರಿಂದ 19-10-2020 ರವರೆಗೆ ದೆಹಲಿ, ಹರಿದ್ವಾರ, ಅಯೋಧ್ಯೆ, ಕಾಶಿ, ಪ್ರಯಾಗರಾಜ, ಮಥುರಾ ಸೇರಿ ಉತ್ತರ ಭಾರತದ ಪ್ರವಾಸ ನಿಗದಿ ಮಾಡಿಕೊಂಡಿದ್ದರು. ದೆಹಲಿಯಿಂದ ಹೊರಟು ಆ ಎಲ್ಲ ಕ್ಷೇತ್ರಗಳ ದರ್ಶನ ಮಾಡಿಸಿಕೊಂಡು ವಾಪಸ್ಸು ದೆಹಲಿಗೆ ಕರೆತರುವ ಜವಾಬ್ದಾರಿ ಹುಬ್ಬಳ್ಳಿಯ ಸುರಕ್ಷಾ ಟೂರ್ಸ್ ಮತ್ತು ಟ್ರಾವಲ್ಸ್ ನವರದಾಗಿತ್ತು.

ಈ ಬಗ್ಗೆ ಎಲ್ಲ ಪ್ರವಾಸಿಗರೂ ಸುರಕ್ಷಾ ಟೂರ್ಸ್ ಮಾಲಕ ಸುನೀಲ ತೊಗರಿ ಅವರಿಗೆ ಅಂದಾಜು ತಲಾ 21,000 ರೂ.ಗಳಂತೆ ಹಣ ಸಂದಾಯ ಮಾಡಿದ್ದರು. ಹುಬ್ಬಳ್ಳಿಯಿಂದ ದೆಹಲಿಗೆ ತಲುಪಲು ಎಲ್ಲ 27 ಜನ ಪ್ರವಾಸಿಗರು ಜೂನ್-2022 ರಲ್ಲಿ ಸ್ಟಾರ್ ಏರಲೈನ್‌ಮೂಲಕ ಟಿಕೆಟ್ ಬುಕ್ ಮಾಡಿದ್ದರು. ಇದಲ್ಲದೇ 9-10-2022 ರಂದುಪ್ರಯಾಣಕ್ಕೆ ಎಲ್ಲ ಪ್ರವಾಸಿಗರು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ದಿಢೀರ್ ಆಗಿ 09/10/2022 ರಂದು ಹುಬ್ಬಳ್ಳಿಯಿಂದ ದೆಹಲಿಗೆ ಹೋಗಬೇಕಾದ ಸ್ಟಾರ್ ಏರಲೈನ್ಸ್ ರದ್ಧಾಗಿರುವುದಾಗಿ ಮಾಹಿತಿ ಬಂದಿದೆ. ಇದಲ್ಲದೇ ಸ್ಟಾರ್ ಏರಲೈನ್ಸ್ ದೆಹಲಿಗೆ ಹೋಗಲು ಬೇರೆ ವ್ಯವಸ್ಥೆ ಮಾಡಿರಲಿಲ್ಲ. ಹೀಗಾಗಿ ಸುರಕ್ಷಾ ಟೂರ್ಸ್ ನ ಮಾಲಕ ಸುನೀಲ ತೊಗರಿ ಅವರು, ಬೇರೆ ಹಣ ವ್ಯಯಿಸಿ ಬೇರೆ ಬೇರೆ ಮಾರ್ಗಗಳ ಮೂಲಕ 09-10-2022ರ ರಾತ್ರಿ ಎಲ್ಲ ಪ್ರವಾಸಿಗರನ್ನು ದೆಹಲಿ ತಲುಪುವ ವ್ಯವಸ್ಥೆ ಮಾಡಿದರು. ದೆಹಲಿಯಿಂದ ಎಲ್ಲ ಕಡೆ ಸುತ್ತಾಡಿ ಪೂರ್ವ ನಿಗದಿತ ಕಾರ್ಯಕ್ರಮದಂತೆ ಸುರಕ್ಷಾ ಟೂರ್ಸ್ ನವರು ಎಲ್ಲ ಪ್ರವಾಸಿಗರನ್ನು ವಾಪಸ್ಸು ಹುಬ್ಬಳ್ಳಿಗೆ ಕರೆ ತಂದುಬಿಟ್ಟದ್ದಾರೆ.

ಈ ಪೈಕಿ 09-10-2022 ರಂದು ತಮ್ಮ ಪ್ರಯಾಣಕ್ಕೆ ಜೂನ್ ತಿಂಗಳಲ್ಲೇ ಟಿಕೆಟ್ ನಿಗದಿಯಾಗಿದ್ದರೂ ಪ್ರಯಾಣದ ಹಿಂದಿನ ದಿವಸ ಸ್ಟಾರ್ ಏರಲೈನ್ಸ್ ರದ್ದುಪಡಿಸಿದ್ದರಿಂದ ಅನಾನುಕೂಲ ಆಗಿದ್ದು, ಇದರಿಂದ ಮಾನಸಿಕ ತೊಂದರೆಯಾಗಿದೆ. ಇದರಿಂದ ಸೇವಾ ನ್ಯೂನ್ಯತೆ ಎಸಗಿದ್ದಾರೆ ಎಂದು

ಸುರಕ್ಷಾ ಟೂರ್ಸ್ ಮತ್ತು ಸ್ಟಾರ್ ಏರಲೈನ್ಸ್ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಎಲ್ಲ 27 ಜನ ದೂರುದಾರರು ಗ್ರಾಹಕರಕ್ಷಣಾ ಕಾಯ್ದೆ ಅಡಿ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ 01-02-2023 ದೂರನ್ನು ಸಲ್ಲಿಸಿದ್ದರು.

ಈ ದೂರಿನ ವಿಚಾರಣೆ ಕೈಗೊಂಡಿದ್ದ ಆಯೋಗವು, ಹುಬ್ಬಳ್ಳಿಯಿಂದ ದೆಹಲಿಗೆ ಪ್ರಯಾಣಿಸುವ ವಿಮಾನವನ್ನು ಸ್ಟಾರ್ ಏರಲೈನ್ಸ್ ರದ್ದುಪಡಿಸಿದ್ದರೂ ಸುರಕ್ಷಾ ಟೂರ್ಸ್ ನ ಮಾಲಕ ಸುನೀಲ ತೊಗರಿ ಶ್ರಮ ವಹಿಸಿ ತನ್ನದೇ ಹಣ ಖರ್ಚು ಮಾಡಿ ಹೈದರಾಬಾದ್ ಮೂಲಕ ಕೆಲವು ದೂರುದಾರರಿಗೆ, ಮುಂಬೈ ಮೂಲಕ ಕೆಲವು ದೂರುದಾರರಿಗೆ ವಿಮಾನ ಮೂಲಕ ಬೇರೆ ವ್ಯವಸ್ಥೆ ಮಾಡಿ ಎಲ್ಲ ದೂರುದಾರರು ನಿಗದಿತ ಸಮಯಕ್ಕೆ ದೆಹಲಿ ತಲುಪುವಂತೆ ಮಾಡಿದ್ದಾರೆ. ದೆಹಲಿಯಿಂದ ಎಲ್ಲ ಪ್ರವಾಸಿ ತಾಣಗಳನ್ನು ತೋರಿಸಿ ನಿಗದಿತ ಕಾರ್ಯಕ್ರಮದಂತೆ ಹುಬ್ಬಳ್ಳಿಗೆ ಕರೆತಂದಿರುವುದರಿಂದ ಹುಬ್ಬಳ್ಳಿಯ ಸುರಕ್ಷಾ ಟೂರ್ಸ್ ನವರದ್ದು ಯಾವುದೇ ರೀತಿ ಸೇವಾ ನ್ಯೂನ್ಯತೆ ಆಗಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ಹುಬ್ಬಳ್ಳಿಯಿಂದ ದೆಹಲಿಗೆ ಕರೆದೊಯ್ಯುವ ಹೊಣೆಗಾರಿಕೆ ತನ್ನದಲ್ಲದಿದ್ದರೂ ಸುರಕ್ಷಾ ಟೂರ್ಸ್ ನ ಮಾಲಕ ಸುನೀಲ ತೊಗರಿ ತನ್ನ ಗ್ರಾಹಕರಿಗೆ ತೊಂದರೆ ಆಗಬಾರದೆಂಬ ಉದ್ದೇಶದಿಂದ ಪರ್ಯಾಯ ವ್ಯವಸ್ಥೆ ಮಾಡಿರುವುದು ಪ್ರಶಂಸನೀಯ ಎಂಬ ನಡವಳಿಕೆಗೆ ಆಯೋಗ ಮೆಚ್ಚುಗೆ ವ್ಯಕ್ತಪಡಿಸಿದೆ. ಇದಲ್ಲದೇ ಸ್ಟಾರ್ ಏರಲೈನ್ಸ್ ಗೆ ದಂಡ ಹಾಕಿದೆ.

Advertisement

Udayavani is now on Telegram. Click here to join our channel and stay updated with the latest news.

Next