Advertisement

ಸಹಾಯಕ ಪ್ರಾಧ್ಯಾಪಕ ಹುದ್ದೆ ನೇಮಕ ಅಕ್ರಮ: ಧಾರವಾಡ ಕುಲಸಚಿವ ನಾಗರಾಜ್‌ ಬಂಧನ

08:08 AM Apr 28, 2022 | Team Udayavani |

ಬೆಂಗಳೂರು: ರಾಜ್ಯ ಸರಕಾರಿ ಪದವಿ ಕಾಲೇಜು ಸಹಾಯಕ ಪ್ರಾಧ್ಯಾಪಕ ಹುದ್ದೆ ನೇಮಕಾತಿಗೆ ನಡೆದ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿ ಧಾರವಾಡ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಡಾ| ಎಚ್‌. ನಾಗರಾಜ್‌ ಅವರನ್ನು ಮಲ್ಲೇಶ್ವರ ಪೊಲೀಸರು ಬಂಧಿಸಿದ್ದಾರೆ. ಮತ್ತೊಂದೆಡೆ ನಾಗರಾಜ್‌ ಸೋದರ ಸಂಬಂಧಿ ಕುಸುಮಾ ಹಾಗೂ ರಾಮಕೃಷ್ಣ, ಮಹಾಲಕ್ಷ್ಮೀ ಅವರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಮೂವರ ಮೊಬೈಲ್‌ ಜಪ್ತಿಮಾಡಲಾಗಿದೆ.

Advertisement

ಈ ಮಧ್ಯೆ ಪೊಲೀಸ್‌ ಕಸ್ಟಡಿಯಲ್ಲಿರುವ ಸೌಮ್ಯಾ ಪ್ರಕರಣ ಕುರಿತು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದು, ಕಳೆದ ಆರೇಳು ವರ್ಷಗಳಿಂದ ನಾಗರಾಜ್‌ ಪರಿಚಯವಿದೆ ಎಂದು ಹೇಳಿಕೊಂಡಿದ್ದಾರೆ.

ಆರೋಪಿತೆ ಸೌಮ್ಯಾ ಮೈಸೂರಿನ ಗಂಗೋತ್ರಿಯಲ್ಲಿ ನಾಗರಾಜ್‌ ಮಾರ್ಗದರ್ಶನದಲ್ಲಿ ಪೋಸ್ಟ್‌ ಡಾಕ್ಟರಲ್‌ ಫೆಲೋಶಿಪ್‌ ಸಂಶೋಧನಾ ವಿದ್ಯಾರ್ಥಿಯಾಗಿದ್ದರು..

ಸೌಮ್ಯಾ ಹೇಳಿಕೆ ಏನು?
“ಏಳು ವರ್ಷಗಳಿಂದ ಡಾ. ನಾಗರಾಜ್‌ ಪರಿಚಯವಿತ್ತು. 2021ರ ನವೆಂಬರ್‌ನಲ್ಲಿ 1242 ಸಹಾಯಕ ಉಪನ್ಯಾಸಕ ಹುದ್ದೆಗಳಿಗೆ ಆಹ್ವಾನಿಸಲಾಗಿತ್ತು. ಅದಕ್ಕೆ ಮೂರು ಬಾರಿ ಅರ್ಜಿ ಸಲ್ಲಿಸಿದ್ದೆ. ಮೊದಲನೇ ಬಾರಿ ಜನ್ಮ ದಿನಾಂಕ ತಪ್ಪಾಗಿತ್ತು. 2ನೇ ಬಾರಿ ಆದಾಯ ಪ್ರಮಾಣ ಪತ್ರದ ದಿನಾಂಕದಲ್ಲಿ ವ್ಯತ್ಯಾಸದಿಂದ ರಿಜೆಕ್ಟ್ ಆಗಿತ್ತು. 3ನೇ ಬಾರಿ ಎಲ್ಲವೂ ಸರಿ ಮಾಡಿಕೊಂಡು ಅರ್ಜಿ ಸಲ್ಲಿಸಿದ್ದೆ. ಅದೇ ವೇಳೆ ನಾಗರಾಜ್‌ ಪ್ರಶ್ನೆ ಪತ್ರಿಕೆ ಆಯ್ಕೆ ಸಮಿತಿ ಸದಸ್ಯರು ಎಂದು ಗೊತ್ತಾಗಿತ್ತು.

ನಾಗರಾಜ್‌ ಮನೆಯಲ್ಲಿದ್ದ ಅವರ ಸೋದರ ಸಂಬಂಧಿ ಕುಸುಮಾ ಆತ್ಮೀಯಳಾಗಿದ್ದಳು. ಮಾರ್ಚ್‌ನಲ್ಲಿ ನಾಗರಾಜ್‌ ಮನೆಗೆ ಹೋದಾಗ ಪ್ರಶ್ನೆ ಪತ್ರಿಕೆಗಳಿದ್ದ ಕವರ್‌ಗಳು ಇದ್ದವು. ಅದನ್ನು ಗಮನಿಸಿ ಫೋಟೋ ತೆಗೆದುಕೊಂಡು ಬಂದಿದ್ದೆ. ಪ್ರಶ್ನೆ ಪತ್ರಿಕೆಯ ಎಲ್ಲ ಫೋಟೋಗಳನ್ನು ಕುಸುಮಾ ಕಳುಹಿಸಿದ್ದಳು. ಅದನ್ನು ತನ್ನ ಸ್ನೇಹಿತೆ ಮಹಾಲಕ್ಷ್ಮೀಗೆ ಕಳುಹಿಸಿದ್ದೆ. ಆಕೆ ರಾಮಕಷ್ಣ ಅವರಿಗೆ ಕಳುಹಿಸಿದ್ದರು. ಬಳಿಕ ಎಲ್ಲೆಡೆ ಸೋರಿಕೆಯಾಗಿದೆ. ಈ ವಿಚಾರ ನಾಗರಾಜ್‌ಗೆ ಗೊತ್ತಿಲ್ಲ ಎಂದು ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

Advertisement

ಸಹಾಯಕ ಪ್ರಾಧ್ಯಾಪಕ ಹುದ್ದೆ ಪ್ರಶ್ನೆ ಪತ್ರಿಕೆ ಒಬ್ಬ ವ್ಯಕ್ತಿಯಿಂದ ಚೈನ್‌ ಲಿಂಕ್‌ ರೀತಿಯಲ್ಲಿ ಮೂವರಿಗೆ ಹಂಚಿಕೆಯಾಗಿದೆ. ಹಾಗಾಗಿ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ. ಪ್ರಶ್ನೆ ಪತ್ರಿಕೆ ಹೇಗೆ ಹೊರಬಂತು? ಅದನ್ನು ಯಾರು ಫೋಟೊ ತೆಗೆದು ಕಳುಹಿಸಿದ್ದರು? ಎಷ್ಟು ಜನರಿಗೆ ಇದು ತಲುಪಿದೆ? ಎಂಬ ಬಗ್ಗೆ ಮಲ್ಲೇಶ್ವರ ಎಸಿಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.
-ಕಮಲ್‌ ಪಂತ್‌,  ನಗರ ಪೊಲೀಸ್‌ ಆಯುಕ್ತ

 

Advertisement

Udayavani is now on Telegram. Click here to join our channel and stay updated with the latest news.

Next