ಹುಬ್ಬಳ್ಳಿ: ಹುಬ್ಬಳ್ಳಿ ಪ್ರೀಮಿಯರ್ ಲೀಗ್ ದ್ವಿತೀಯ ಆವೃತ್ತಿಯಲ್ಲಿ ಮಿಲನ್ ವಾರಿಯರ್ ಧಾರವಾಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ರವಿವಾರ ನಡೆದ ಅಂತಿಮ ಪಂದ್ಯದಲ್ಲಿ ಮಿಲನ್ ವಾರಿಯರ್ ತಂಡ 89 ರನ್ ಗಳಿಂದ ಕರಾವಳಿ ಕಿಂಗ್ಸ್ ತಂಡವನ್ನು ಪರಾಭವಗೊಳಿಸಿ, ಟ್ರೋಫಿಗೆ ಮುತ್ತಿಟ್ಟಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಮಿಲನ್ ವಾರಿಯರ್ತಂಡ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 140 ರನ್ ಗಳಿಸಿತು. ಸಮರ್ಥ ಊಟಿ ತಂಡದ ಪರ ವೈಯಕ್ತಿಕ ಗರಿಷ್ಠ ಮೊತ್ತ (39) ದಾಖಲಿಸಿದರು. ನವೀನ್ ಗಡದಿನ್ನಿ, ರಾಹುಲ್ ನಾಯಕ್ ತಲಾ 2 ವಿಕೆಟ್ ಪಡೆದರು.
ನಂತರ ಬ್ಯಾಟ್ ಮಾಡಿದ ಕರಾವಳಿ ಕಿಂಗ್ಸ್ ಇಶ್ಫಾಕ್ ನಜೀರ್ ಹಾಗೂ ಆನಂದ ಕುಂಬಾರ ಅವರ ದಾಳಿಗೆ ತತ್ತರಿಸಿತು. ಕಿಶೋರ ಕಾಮತ (10) ತಂಡದ ಪರ ಗರಿಷ್ಠ ಮೊತ್ತ ಗಳಿಸಿದ ಬ್ಯಾಟ್ಸ್‌ಮನ್. ಉಳಿದ ಯಾವುದೇ ಬ್ಯಾಟ್ಸ್‌ಮನ್‌ಗಳು ಎರಡಂಕಿ ಮೊತ್ತ ದಾಖಲಿಸುವಲ್ಲಿ ಸಫಲರಾಗಲಿಲ್ಲ.
ತಂಡ 10.5 ಓವರ್‌ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು ಕೇವಲ 51 ರನ್ ಗಳಿಸಿ ಹೀನಾಯ ಸೋಲು ಕಂಡಿತು.ಆನಂದ ಕುಂಬಾರ 2 ಓವರ್‌ಗಳಲ್ಲಿ 3 ರನ್ ನೀಡಿ 3 ವಿಕೆಟ್ ಪಡೆದರೆ, ಇಶ್ಫಾಕ್ ನಜೀರ್ 3.5 ಓವರ್‌ಗಳಲ್ಲಿ 23 ರನ್ ನೀಡಿ 3 ವಿಕೆಟ್ ಪಡೆದರು.
ಮಿಲನ್ ವಾರಿಯರ್ ತಂಡದ ಇಶ್ಫಾಕ್ ನಜಿರ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಸಮರ್ಥ ಊಟಿ (ಮಿಲನ್ ವಾರಿಯರ್) ಉತ್ತಮ ಬ್ಯಾಟ್ಸ್ ಮನ್ ಪ್ರಶಸ್ತಿ, ಇಶ್ಫಾಕ್ ನಜಿರ್ (ಮಿಲನ್ ವಾರಿಯರ್) ಉತ್ತಮ ಬೌಲರ್ ಪ್ರಶಸ್ತಿ, ಕಿಶೋರ ಕಾಮತ (ಕರಾವಳಿ ಕಿಂಗ್ಸ್) ಸರಣಿ ಶ್ರೇಷ್ಠ ಪ್ರಶಸ್ತಿ, ಸ್ವಪ್ನಿಲ್ ಯೆಳವೆ (ಕರಾವಳಿ ಕಿಂಗ್ಸ್) ಭರವಸೆಯ ಆಟಗಾರ ಪ್ರಶಸ್ತಿಗೆ ಭಾಜನರಾದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಟ್ರೋಫಿ ನೀಡಲಾಯಿತು. ಈ ಸಂದರ್ಭದಲ್ಲಿ ಕೆಎಸ್‌ಸಿಎ ಧಾರವಾಡ ವಲಯದ ಅಧ್ಯಕ್ಷ ವೀರಣ್ಣ ಸವಡಿ, ಸಂಯೋಜಕ ಬಾಬಾ ಭೂಸದ ಮೊದಲಾದವರಿದ್ದರು.