ಧಾರವಾಡ: ಸಮಾಜದ ಶಾಂತಿ ಕದಡುವವರಿಗೆ ಶಿಕ್ಷೆಯ ಗ್ಯಾರಂಟಿಯಾದರೆ ಖಂಡಿತವಾಗಿಯೂ ಶಾಂತಿ ಕಾಪಾಡಲು ಸಾಧ್ಯವಿದ್ದು, ಈ ಕುರಿತಂತೆ ಸಿಎಂಗೆ ಪತ್ರ ಬರೆಯುವುದಾಗಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾಜದಲ್ಲಿ ಕೆಲವರು ಬೆಂಕಿ ಹಚ್ಚುವವರು ಇರುತ್ತಾರೆ. ಗಲಾಟೆ ಮಾಡುವ ಉದ್ದೇಶವನ್ನು ಇಟ್ಟುಕೊಂಡಿದ್ದಾರೆ. ಹೀಗಾಗಿ ಎಲ್ಲಿಯವರೆಗೆ ಸಮಾಜಘಾತುಕ ಶಕ್ತಿಗಳು ಇರುತ್ತವೆಯೋ ಅಲ್ಲಿಯವರೆಗೆ ಎಲ್ಲರೂ ಒಂದಾಗಲು ಸಾಧ್ಯವಿಲ್ಲ ಎಂದರು.
ಉತ್ತರ ಪ್ರದೇಶದಲ್ಲಿ ಮಾಡಿದಂತೆ ಬಂದೋಬಸ್ತ್ ಮಾಡಬೇಕು. ಶಿಕ್ಷೆ ಆಗುವಂತಹ ಕೆಲಸ ಆಗಬೇಕು. ಆದರೆ ನಮ್ಮಲ್ಲಿ ಶಿಕ್ಷೆ ಆಗುತ್ತದೆ ಎಂಬ ಗ್ಯಾರಂಟಿಯೇ ಇಲ್ಲ. ನಾಲ್ಕೈದು ದಿನ ಜೈಲಿನಟ್ಟಿದ್ದು, ಆ ಬಳಿಕ ಬಿಡುತ್ತಾರೆ ಎಂಬ ಅಸಡ್ಡೆ. ಇದು ತಪ್ಪಬೇಕು. ಹೀಗಾಗಿ ಈ ನಿಟ್ಟಿನಲ್ಲಿ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕಿದೆ. ಈ ಸಂಬಂಧ ನಾನೊಂದು ಪತ್ರ ಬರೆಯುತ್ತಿರುವೆ. ಈಗಾಗಲೇ ಅರ್ಧ ಪತ್ರ ಬರೆದಿದ್ದು, ಆ ಬಳಿಕ ಸರಕಾರಕ್ಕೆ ಕಳುಹಿಸುವೆ. ಸಭಾಪತಿಯಾಗಿ ನನಗೂ ಜವಾಬ್ದಾರಿ ಇದೆ. ಹೀಗಾಗಿ ಸಿಎಂಗೆ ಪತ್ರ ಬರೆದು ಗಮನ ಸೆಳೆಯುತ್ತೇನೆ ಎಂದರು.
ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ಒಪ್ಪಿ ದೊಡ್ಡವರಾದರಿಗೆ ಅಷ್ಟೇ ಗೌರವ ಕೂಡ ಸಿಕ್ಕಿದೆ. ಹೀಗಾಗಿ ಸೌಹರ್ದತೆಯಿಂದ ಹೋಗುವ ಕೆಲಸ ಮಾಡಬೇಕು. ಎಲ್ಲರೂ ಕೂಡಿ ಇರಬೇಕಾಗುತ್ತದೆ. ಎಲ್ಲರೂ ಹೊಂದಿಕೊಂಡು ಹೋಗುವ ಕೆಲಸ ಆಗಬೇಕು ಎಂದರು.
ಇಂದಿನ ರಾಜಕಾರಣದಲ್ಲಿ ಮೌಲ್ಯ ಕಡಿಮೆಯಾಗಿದೆ. ದುಡ್ಡು ಕೊಟ್ಟು ಮತ ಹಾಕಿಸಿಕೊಳ್ಳುತ್ತಾರೆ. ದುಡ್ಡು ತಗೊಂದು ಮತ ಹಾಕುತ್ತಾರೆ. ಇದು ಇರುವವರೆಗೂ ಏನಾದರೂ ಆಗಬಹುದು. ಹೀಗಾಗಿ ನಾನು ಬಹಳ ವಿಚಾರ ಮಾಡುತ್ತಿದ್ದೇವೆ. ಶಾಸಕರಿಗೆ ತರಬೇತಿ ಕೊಡುವ ವಿಚಾರವೂ ಮಾಡುತ್ತಿದ್ದೇವೆ ಎಂದರು.
ಇವತ್ತಿಗೂ ಒಕ್ಕುಲತನ ಬಿಟ್ಟಿಲ್ಲ
ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ವಿಶ್ವಕರ್ಮರ ಮೂಲ ವೃತ್ತಿ ಪ್ರಸ್ತಾಪಿಸುತ್ತಾ ತಮ್ಮ ಮೂಲ ವೃತ್ತಿ ಬಗ್ಗೆ ಹೇಳಿಕೊಂಡ ಸಭಾಪತಿ ಬಸವರಾಜ ಹೊರಟ್ಟಿ, ನಮ್ಮದು ಕೃಷಿ ಮೂಲ ವೃತ್ತಿ. ಇಂದಿಗೂ ನಾನು ಕೃಷಿ ಮಾಡುವೆ. ಹೀಗಾಗಿ ರಾಜಕಾರಣದ ಈ ಸ್ಥಾನ ಹೋದರೆ ಪೂರ್ಣ ಪ್ರಮಾಣದಲ್ಲಿಯೇ ಕೃಷಿ ಮಾಡುವೆ. ಹೀಗಾಗಿ ನಾನು ಇವತ್ತಿಗೂ ಒಕ್ಕುಲತನ ಬಿಟ್ಟಿಲ್ಲ ಎಂದರು.
ರಾಜಕಾರಣದ ಸ್ಥಾನ ಯಾವಾಗ ಹೋಗುತ್ತೋ ಬಿಡುತ್ತದೆಯೋ ಗೊತ್ತಿಲ್ಲ. ಇವತ್ತಿನ ರಾಜಕಾರಣವೇ ಬಹಳ ವಿಚಿತ್ರವಿದೆ. ನಮ್ಮ ಮೂಲ ಉದ್ಯೋಗವೇ ಸ್ಥಿರ. ರಾಜಕಾರಣ ಹೋದರೆ ನಾನು ಕೃಷಿ ಮಾಡುವೆ. ನಾವೀಗ ವಿಚಿತ್ರವಾದ ಕಾಲದಲ್ಲಿಯೇ ಬದುಕುತ್ತಿದ್ದೇವೆ. ರಾಜಕಾರಣದಲ್ಲಿ ಯಾವುದೂ ಶಾಶ್ವತವಲ್ಲ, ಇವತ್ತು ಇರುವ ಸ್ಥಾನ ನಾಳೆಗೆ ಹೋಗಬಹುದು. ಹೀಗಾಗಿ ನಮ್ಮ ಮೂಲ ಉದ್ಯೋಗ ಬಿಡಬಾರದು ಎಂದು ಸಲಹೆ ನೀಡಿದರು.