Advertisement

ಧಾರವಾಡ: ಕಿತ್ತೂರು ಚೆನ್ನಮ್ಮ ನಾಟಕ ಪ್ರದರ್ಶನಕ್ಕೆ ಸಜ್ಜು

04:32 PM Nov 15, 2022 | Team Udayavani |

ಧಾರವಾಡ: ಝಳಪಿಸುವ ಕತ್ತಿ ಸದ್ದಿಗೆ ಮೈಯೆಲ್ಲಾ ರೋಮಾಂಚನಗೊಳ್ಳುತ್ತದೆ. ಬ್ರಿಟಿಷರ ವಿರುದ್ಧ ಚೆನ್ನಮ್ಮ ಕೂಗುವ ವೀರ ಕೂಗಿಗೆ ಎಂತಹವರ ಮೈಯಲ್ಲೂ ರಕ್ತ ಕುದ್ದು ಹೋಗುತ್ತದೆ. ರಾಯಣ್ಣನ ಹಾರಾಟಕ್ಕೆ ವೇದಿಕೆಯೇ ನಡುಗಿ ಹೋಗುತ್ತದೆ. ರಂಗ ಪರಿಕರಗಳ ಹೊಳಪು ನೋಡುಗರ ಮನದಲ್ಲಿ ನಾಟಿ ನಿಲ್ಲುತ್ತದೆ. ಹಿನ್ನೆಲೆ ಸಂಗೀತ ದೇಶಭಕ್ತಿಯ ಗುಂಗು ಹಿಡಿಸುತ್ತದೆ. ಒಟ್ಟಿನಲ್ಲಿ ಆನೆ, ಕುದುರೆಗಳ ಸಮೇತ ಕಿತ್ತೂರು ರಾಣಿ ಚೆನ್ನಮ್ಮ ಇನ್ನೇನು ಕನ್ನಡಿಗರ ಎದುರು ನಿಲ್ಲುವ ಕಾಲ
ಸನ್ನಿಹಿತವಾಗಿದೆ!

Advertisement

ಹೌದು. ಬ್ರಿಟಿಷರ ವಿರುದ್ಧ ಹೋರಾಡಿದ ಕಿತ್ತೂರು ರಾಣಿ ಚೆನ್ನಮ್ಮನ ಜೀವನ ಚರಿತ್ರೆಯನ್ನು ರಾಜ್ಯದ ಮನೆ-ಮನಕ್ಕೆ ತಲುಪಿಸಲು ಧಾರವಾಡ ರಂಗಾಯಣ ದೊಡ್ಡ ಸಾಹಸಕ್ಕೆ ಕೈ ಹಾಕಿದೆ. 150 ಜನ ಕಲಾವಿದರು ಚೆನ್ನಮ್ಮನ ನಾಟಕಕ್ಕೆ ಕಳೆದ ಒಂದು ತಿಂಗಳಿಂದ ಹಗಲು ರಾತ್ರಿ ರಂಗ ತಾಲೀಮು ನಡೆಸುತ್ತಿದ್ದಾರೆ.

ಇಲ್ಲಿನ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿರುವ ದೈತ್ಯ ಸಭಾಂಗಣದಲ್ಲಿ ನಾಟಕದ ತಾಲೀಮು ಜೋರಾಗಿ ಸಾಗಿದ್ದು, ಶೇ.80ರಷ್ಟು ಕೆಲಸಗಳು ಪೂರ್ಣಗೊಂಡಿವೆ. ಧ್ವನಿ ಮತ್ತು ಬೆಳಕಿನ ಆರ್ಭಟಕ್ಕೆ ಪೂರಕ ತಂತ್ರಜ್ಞಾನ ಜೋಡಿಸಿ ಸಜ್ಜುಗೊಳಿಸಲಾಗಿದ್ದು, ರಂಗ ಪರಿಕರಗಳು ವಸ್ತ್ರವಿನ್ಯಾಸ, ನೆರಳು ಬೆಳಕಿನ ಕಾರ್ಯ ಮುಗಿಯುವ ಹಂತದಲ್ಲಿದೆ.

ಕಿತ್ತೂರು ಚೆನ್ನಮ್ಮ ನಾಟಕಕ್ಕೆ ಜೀವಕಳೆ ತುಂಬಲು ಬಯಲಾಟ, ಯಕ್ಷಗಾನ, ಕಥಕಳಿ ಸೇರಿದಂತೆ ಎಲ್ಲಾ ಶಿಷ್ಟ ಪರಂಪರೆಯ ಕಲಾ ಪ್ರಕಾರಗಳನ್ನು ಅಳವಡಿಸಲಾಗಿದ್ದು, ಕರ್ನಾಟಕ ಮಾತ್ರವಲ್ಲ ಕೇರಳ-ಮಹಾರಾಷ್ಟ್ರದಿಂದಲೂ ಕಲಾ ತರಬೇತಿಗೆ ಅಗತ್ಯವೆನಿಸಿದ ಕಲಾ ಗುರುಗಳನ್ನು ಕರೆ ತಂದು ತರಬೇತಿ ನೀಡಲಾಗುತ್ತಿದೆ.

ಕನ್ನಡ ತಾರಾಗಣ: ಕಿತ್ತೂರು ರಾಣಿ ಚೆನ್ನಮ್ಮ ನಾಟಕದಲ್ಲಿ ಚೆನ್ನಮ್ಮನ ಬಾಲ್ಯ, ಯೌವ್ವನ ಮತ್ತು ದೇಶಗತಿ ಕಾಲದ ರಾಜ್ಯಭಾರಕ್ಕೆ ಪ್ರತ್ಯೇಕವಾದ ನಟಿಯರು ನಟನೆ ಮಾಡುತ್ತಿದ್ದು, ಈ ಪಾತ್ರಕ್ಕೆ ಜನಪ್ರಿಯ ಚಿತ್ರನಟಿಯನ್ನು ಕರೆತರಲು ಚಿಂತನೆ ನಡೆದಿತ್ತು. ಆದರೆ ಅಂತಿಮವಾಗಿ ನಟಿಯರ ಕಾಲ್‌ಶೀಟ್‌, ಆರ್ಥಿಕ ವೆಚ್ಚ ಭರಿಸುವುದು ಕಷ್ಟ ಸಾಧ್ಯವಾಗದ್ದರಿಂದ ಸದ್ಯಕ್ಕೆ ರಂಗಭೂಮಿಯಲ್ಲಿಯೇ ಉತ್ತಮ ಫಾರ್ಮ್ನಲ್ಲಿರುವ ನಟ-ನಟಿಯರೇ ಚೆನ್ನಮ್ಮ ಮತ್ತು ರಾಯಣ್ಣನ
ಪಾತ್ರ ನಿರ್ವಹಿಸಲಿದ್ದಾರೆ. ಇನ್ನು ಧ್ವನಿ ಡಬ್ಬಿಂಗ್‌ನಲ್ಲಿ ಗಾಯಕಿ ಸಂಗೀತಾ ಕಟ್ಟಿ, ಸುಚೇಂದ್ರ ಪ್ರಸಾದ್‌ ಸೇರಿದಂತೆ ಅನೇಕ ಕನ್ನಡ ಚಲನಚಿತ್ರದ ತಾರಾ ಬಳಗ ಭಾಗಿಯಾಗಿದೆ. ಎರಡು ಆನೆ, 10 ಕುದುರೆ ಸೇರಿದಂತೆ ಜೀವಂತ ಪ್ರಾಣಿಗಳನ್ನೇ ವೇದಿಕೆ ಮೇಲೆ ತರುವ ಪ್ರಯತ್ನ ನಡೆದಿದ್ದು, ಹೆಚ್ಚು ಕಡಿಮೆ ಐತಿಹಾಸಿಕ ಕಾಲ ಘಟ್ಟದ ಕಥೆಯನ್ನು ಅರ್ಥಪೂರ್ಣವಾಗಿ ಹೆಣೆದು ರಂಗಕ್ಕೆ ಅಳವಡಿಸಲಾಗಿದೆ.

Advertisement

ಸುವರ್ಣ ಸೌಧದೆದುರು ಚೆನ್ನಮ್ಮ: ಡಿಸೆಂಬರ್‌ ಎರಡನೇ ವಾರ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ 2022ನೇ ಸಾಲಿನ ಚಳಿಗಾಲ ಅಧಿವೇಶನ ನಡೆಯುವುದು ಬಹುತೇಕ ಖಚಿತವಾಗಿದೆ. ಈ ಸಂದರ್ಭದಲ್ಲಿ ಇಡೀ ಸರ್ಕಾರವೇ ಬೆಳಗಾವಿಯಲ್ಲಿರುತ್ತದೆ. ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಹೆಚ್ಚು ಕಡಿಮೆ 300 ಜನ ಶಾಸಕರು, ನೂರಾರು ಜನ ಅಧಿಕಾರಿಗಳು ಇಲ್ಲಿ ಹಾಜರಿರುತ್ತಾರೆ.

ಪ್ರಧಾನಿ ಮೋದಿಯಿಂದ ನಾಟಕ ಉದ್ಘಾಟನೆ?
ಅಂದುಕೊಂಡಂತೆ ನಡೆದರೆ ಡಿಸೆಂಬರ್‌ ಮೊದಲ ವಾರದಲ್ಲಿಯೇ ಕಿತ್ತೂರು ಚೆನ್ನಮ್ಮ ನಾಟಕದ ಮೊದಲ ಪ್ರದರ್ಶನ ನಡೆಯಲಿದೆ. ನಾಟಕ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸುವ ಚಿಂತನೆ ನಡೆದಿದೆ. ಚೆನ್ನಮ್ಮನ ಪಾತ್ರದ ಮೂಲಕ ಮನೆ ಮಾತಾಗಿರುವ ಡಾ|ಬಿ.ಸರೋಜಾದೇವಿ ಅವರನ್ನು ಅತಿಥಿಯಾಗಿ ಆಹ್ವಾನಿಸಲು ಯೋಜಿಸಲಾಗಿದೆ.ಉಳಿದಂತೆ ಸಿಎಂ, ರಾಜ್ಯ ಹಾಗೂ ಕೇಂದ್ರ ಸಚಿವರು ಭಾಗಿಯಾಗಲಿದ್ದಾರೆ.

ಈ ಮೊದಲು ಕಿತ್ತೂರು ಚೆನ್ನಮ್ಮ ನಾಟಕದ ಮೊದಲ ಪ್ರದರ್ಶನವನ್ನು ಐತಿಹಾಸಿಕ ಕಿತ್ತೂರು ಕೋಟೆಯಲ್ಲಿಯೇ ಮಾಡಬೇಕೆಂದು ನಿರ್ಧರಿಸಲಾಗಿತ್ತು. ಆದರೆ ಇದೀಗ ಧಾರವಾಡದ ಕೆಸಿಡಿ ಮೈದಾನದಲ್ಲಿ 30 ಸಾವಿರ ಜನರ ಎದುರು ಮೊದಲ ಪ್ರದರ್ಶನಕ್ಕೆ ರಂಗಾಯಣ ಚಿಂತನೆ ನಡೆಸಿದೆ. ನಂತರ ಕಿತ್ತೂರು, ಬೆಳಗಾವಿ ಸೇರಿ ರಾಜ್ಯದ ಇತರೆ ಕಡೆಗಳಲ್ಲಿ ಪ್ರದರ್ಶನಕ್ಕೆ ಯೋಜಿಸಲಾಗಿದೆ.
ರಮೇಶ ಪರವಿನಾಯಕ,
ಧಾರವಾಡ ರಂಗಾಯಣ ನಿರ್ದೇಶಕರು

ಡಾ|ಬಸವರಾಜ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next