Advertisement

ಧಾರವಾಡ: ಜೀವಕಳೆ ಕಳೆದುಕೊಳ್ಳುತ್ತಿದೆ ಕೆಲಗೇರಿ ಕೆರೆ

02:50 PM May 22, 2023 | Team Udayavani |

ಧಾರವಾಡ: ಹೈಟೆಕ್‌ ಸ್ಪರ್ಶ ಪಡೆದಿರುವ ಶತಮಾನ ಕಂಡ ಕೆಲಗೇರಿ ಕೆರೆಯ ಒಡಲಾಳದ ಸಂಕಟಕ್ಕೆ ಮಾತ್ರ ಮುಕ್ತಿ ಸಿಗದೇ ಜಲಕಳೆಯಿಂದ ಜೀವಕಳೆ ಕಳೆದುಕೊಳ್ಳುತ್ತಾ ಸಾಗಿದ್ದು, ಮೀನುಗಳು ಸಾವನ್ನಪ್ಪಿ ದಡ ಸೇರುತ್ತಿವೆ. ಹು-ಧಾ ಮಹಾನಗರ ಪಾಲಿಕೆ ಹಾಗೂ ಕೃಷಿ ವಿಶ್ವವಿದ್ಯಾಲಯದ ಮಧ್ಯೆ ಇರುವ ಕೆರೆ ನಿರ್ವಹಣೆಯ ಗುದ್ದಾಟದಿಂದ ಕೆರೆಯ ಅಸ್ತಿತ್ವಕ್ಕೆ ಧಕ್ಕೆ ಉಂಟಾಗುತ್ತಿದ್ದು, ಮೀನುಗಳ ಮರಣ ಮೃದಂಗ ಸಾಗಿದೆ.

Advertisement

ಕೆಲಗೇರಿ ಕೆರೆ ದಡದಲ್ಲಿ ಪುಟ್‌ಪಾತ್‌ದೊಂದಿಗೆ ಮಕ್ಕಳ ಆಟಿಕೆ, ವಾಯುವಿಹಾರಿಗಳ ವ್ಯಾಯಾಮಕ್ಕಾಗಿ ಜಿಮ್‌ ಮಾದರಿಯಲ್ಲಿ ಹೈಟೆಕ್‌ ಸ್ಪರ್ಶ ಪಡೆದಿತ್ತು. ಆದರೆ ಈಗ ಕೆರೆಯ ಒಡಲಾಳದ ಜಲಕಳೆಯೆಂಬ ಸಂಕಟ ಹಾಗೂ ಕೆರೆಗೆ ಚರಂಡಿ ನೀರು ಸೇರುತ್ತಿರುವುದರಿಂದ ಹೊರಗಡೆ ನೋಟಕ್ಕೆ ಹೈಟೆಕ್‌ ಸ್ಪರ್ಶ ಪಡೆದಿದ್ದರೂ ಒಳಗಡೆಯಿಂದ ಕೆರೆ ಗಬ್ಬೆದ್ದು ನಾರುವಂತಾಗಿದೆ. ಕೆರೆಯ ನೀರು ಕಲುಷಿತ ಆಗುತ್ತಿರುವುದು ಮೀನುಗಳ ಸಾವಿಗೆ ಕಾರಣವಾಗಿದೆ.

ಜಲಕಳೆಯ ಸಂಕಟ: ಕಳೆದ ಒಂದು ವಾರದಲ್ಲಿ ಚರಂಡಿ ನೀರು ಕೆರೆಗೆ ಅಧಿಕ ಪ್ರಮಾಣದಲ್ಲಿ ಸೇರಿರುವುದು ಮೀನುಗಳ ಸಾವಿಗೆ ಕಾರಣವಾದರೆ, ಚರಂಡಿ ನೀರು ಕೆರೆಗೆ ಸೇರುತ್ತಿರುವ ಕಾರಣದಿಂದ ಕೆರೆಯ ಜಲಕಳೆಯೆಂಬ ಸಂಕಟದಿಂದ ಮುಕ್ತಿ ಸಿಗದಂತಾಗಿದೆ. ಜನೇವರಿ ತಿಂಗಳಲ್ಲಿ ನಡೆದ ಯುವ ಜನೋತ್ಸವದ ಸಮಯದಲ್ಲಿ ಈ ಕೆರೆಯಲ್ಲಿಯೇ ಜಲಕ್ರೀಡೆಗೆ ಅವಕಾಶ ಕಲ್ಪಿಸಲಾಗಿತ್ತು. ಆಗ ಬೇರೆ ರಾಜ್ಯಗಳಿಂದ ಬಂದಿದ್ದ ಯುವಪಡೆ ಜಲಕ್ರೀಡೆ ಆನಂದ ಪಡೆದರೂ ಕೆರೆಯ ಕಲುಷಿತ ನೀರು ಹಾಗೂ ಜಲಕಳೆಯ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ಜಲಕಳೆಯಂತೂ ಅಧಿಕ ಪ್ರಮಾಣದಲ್ಲಿ ಕೆರೆಯನ್ನು ಆವರಿಸುತ್ತಲೇ ಸಾಗಿದ್ದು, ಇದು ಕೆರೆಯ ಜೀವಕಳೆಗೆ ಕಂಟಕಪ್ರಾಯವಾಗಿ ಹೊರಹೊಮ್ಮಿದೆ.

ಕೆರೆ ಸುಮಾರು 170 ಎಕರೆ ಜಾಗದಲ್ಲಿ ಹರಡಿಕೊಂಡಿದ್ದು, ಕೆಲ ವರ್ಷ ಹಿಂದಷ್ಟೇ ಮಹಾನಗರ ಪಾಲಿಕೆ ಕೆರೆ ದಂಡೆ ಸುತ್ತ ಒಂದಿಷ್ಟು ಅಭಿವೃದ್ಧಿ ಕಾರ್ಯ ನಡೆಸಿ ಬಾಹ್ಯ ಸೌಂದರ್ಯ ಹೆಚ್ಚಿಸಿದೆ. ಆದರೆ ಕೆರೆಗೆ ಮಲಿನ ನೀರು ಸೇರುವುದನ್ನು ತಡೆಯುವಲ್ಲಿ ನಿರ್ಲಕ್ಷ್ಯ ವಹಿಸಿರುವುದು ವಿಪರ್ಯಾಸವಾಗಿದೆ. ಕೆರೆ ನಿರ್ವಹಣೆ ಜವಾಬ್ದಾರಿ ಹೊತ್ತ ಕೃಷಿ ವಿಶ್ವ ವಿದ್ಯಾಲಯ ಮಾತ್ರ ಈ ವಿಚಾರದಲ್ಲಿ ನಿರಾಸಕ್ತಿ ವಹಿಸಿದ್ದಲ್ಲದೆ, ಗಟಾರ ನೀರು ಸೇರುವುದನ್ನು ತಡೆಯುವ ಕೆಲಸ ನಮ್ಮದಲ್ಲ ಎಂದು ಹೇಳಿ ಕೈ ತೊಳೆದುಕೊಳ್ಳುತ್ತಿದೆ.

ಇಷ್ಟೆಲ್ಲ ಸಮಸ್ಯೆ ಇದ್ದರೂ, ಸಂಬಂಧಿಸಿದವರು ಮಾತ್ರ ಒಬ್ಬರ ಮೇಲೊಬ್ಬರು ಬೊಟ್ಟು ಮಾಡುತ್ತಲೇ ಕಾಲಹರಣ ಮಾಡುತ್ತಿರುವುದು ಅವರ ಪರಿಸರ ಕಾಳಜಿಗೆ ಸಾಕ್ಷಿ. ಇದನ್ನೆಲ್ಲ ಬಿಟ್ಟು ಕೂಡಲೇ ಶಾಶ್ವತ ಪರಿಹಾರಕ್ಕೆ ಮುಂದಾಗಲಿ ಎಂಬುದು ಜನರ ಆಗ್ರಹವಾಗಿದೆ.

Advertisement

ಕೆಲಗೇರಿ ಕೆರೆಗೆ ಹೈಟೆಕ್‌ ಸ್ಪರ್ಶ ಸಿಕ್ಕಿದ್ದು, ಅದು ಹೊರಗಡೆಯಿಂದ ಕಂಗೊಳಿಸುವಂತಾಗಿದೆ. ಕೆರೆಯ ಜಲಕಳೆಗೆ ಮುಕ್ತಿ ಸಿಗದ ಹೊರತು ಕೆರೆಯ ಅಭಿವೃದ್ಧಿ ಅಸಾಧ್ಯ. ಕೆರೆಗೆ ಹೊಲಸು ನೀರು ಸೇರಿ ಮೀನುಗಳ ಸಾವಿನ ಜತೆಗೆ ಜಲಕಳೆ ಬೆಳೆಯುತ್ತಿದೆ. ಸಂಬಂಧಿಸಿದವರು ಹೊಲಸು ನೀರು ಸೇರದಂತೆ ಶಾಶ್ವತ ಕಾಮಗಾರಿ ನಡೆಸುತ್ತಿಲ್ಲ. ಕೂಡಲೇ ಇದಕ್ಕೆ ಪರಿಹಾರ ನೀಡಬೇಕು.
ಮಂಜುನಾಥ ಹಿರೇಮಠ, ಪರಿಸರವಾದಿ

Advertisement

Udayavani is now on Telegram. Click here to join our channel and stay updated with the latest news.

Next